Personal Finance: ಬೇಗ ಗೃಹ ಸಾಲದ ಹೊಣೆ ಇಳಿಸ್ಬೇಕಂದ್ರೆ ಹಿಂಗ್ ಮಾಡಿ!
ವಾಹನ, ಕೃಷಿ, ಗೃಹ ಯಾವುದೇ ಸಾಲವಿರಲಿ ಅದೊಂದು ರೀತಿ ನಿದ್ರೆ ನೀಡದ ವಿಷ್ಯ. ಅದನ್ನು ತೀರಿಸುವವರೆಗೂ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಇಲ್ಲ. ನಿಮ್ಮ ಸಂತೋಷ ಕಸಿದುಕೊಳ್ಳುವ ಈ ಸಾಲದಿಂದ ಬೇಗ ಹೊರಗೆ ಬರಲು ನೀವು ಈ ಟ್ರಿಕ್ಸ್ ಫಾಲೋ ಮಾಡ್ಬಹುದು.
ಸ್ವಂತಕ್ಕೊಂದು ಮನೆ ಬೇಕು ಎನ್ನುವ ಜನರು ಸಾಲ ಮಾಡಿ ಮನೆ ಖರೀದಿ ಮಾಡ್ತಾರೆ. ಈಗಿನ ದಿನಗಳಲ್ಲಿ ಮನೆಗಳಿಗೆ ಬೇಡಿಗೆ ಹೆಚ್ಚಾಗಿರೋ ಕಾರಣ ಬೆಲೆ ಕೂಡ ಗಗನಕ್ಕೇರಿದೆ. ಬ್ಯಾಂಕ್ ಗಳು ಗೃಹ ಸಾಲವನ್ನೇನೋ ನೀಡ್ತವೆ. ನಾವು ಬ್ಯಾಂಕ್ ನಿಂದ ಸಾಲ ಪಡೆದು ಮನೆ ಖರೀದಿ ಕೂಡ ಮಾಡಿರ್ತೇವೆ. ಆದ್ರೆ ಬರ್ತಾ ಬರ್ತಾ ಬ್ಯಾಂಕ್ ಸಾಲ, ಇಎಂಐ ದೊಡ್ಡ ಹೊರೆಯಾಗಲು ಶುರುವಾಗುತ್ತದೆ. 25 ವರ್ಷಕ್ಕೆ ಸಾಲ ಪಡೆದಿದ್ದು, ಮನೆ ಖರೀದಿ ಮಾಡಿದ್ರೆ ಅಷ್ಟೊಂದು ವರ್ಷ ನಾವು ದುಡಿದ ಹಣದಲ್ಲಿ ಸ್ವಲ್ಪ ಬ್ಯಾಂಕ್ ಸಾಲಕ್ಕೆ ಎತ್ತಿಡಬೇಕು. ಇದ್ರಿಂದ ಉಳಿದ ಖರ್ಚು ನಿಭಾಯಿಸೋದು ಕಷ್ಟವಾಗುತ್ತದೆ. ಒಮ್ಮೆ ಗೃಹ ಸಾಲದ ಹೊಣೆ ನಮ್ಮಿಂದ ದೂರವಾದ್ರೆ ನೆಮ್ಮದಿ ನಿಟ್ಟುಸಿರು ಬಿಡ್ಬಹುದು. ಗೃಹ ಸಾಲವನ್ನು ವೇಗವಾಗಿ ಮರುಪಾವತಿ ಮಾಡ್ಬೇಕು ಅಂದ್ರೆ ಕೆಲ ಸುಲಭ ಮಾರ್ಗಗಳನ್ನು ನಾವು ಫಾಲೋ ಮಾಡ್ಬೇಕು. ಯಾವ ವಿಧಾನದ ಮೂಲಕ ನಾವು ಸುಲಭವಾಗಿ ಮನೆ ಸಾಲದ ಹೊರೆ ತಪ್ಪಿಸಿಕೊಳ್ಳಬಹುದು ಅಂತಾ ನಾವು ಹೇಳ್ತೇವೆ.
ನೀವು ಒಂದು ಕೋಟಿ ರೂಪಾಯಿ ಗೃಹ ಸಾಲ (Home Loan )ವನ್ನು ಶೇಕಡಾ 9ರ ಬಡ್ಡಿಯಲ್ಲಿ 25 ವರ್ಷಕ್ಕೆ ಪಡೆದಿದ್ದೀರಿ ಎಂದುಕೊಳ್ಳೋಣ. 25 ವರ್ಷಗಳವರೆಗೆ ತಿಂಗಳಿಗೆ ನೀವು 83,920 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. 25 ವರ್ಷ ಇಷ್ಟು ಮೊತ್ತ ಪಾವತಿ ಮಾಡುವ ಬದಲು , ಕಡಿಮೆ ಅವಧಿಯಲ್ಲಿ ಸಾಲ ಮರುಪಾವತಿ ಮುಗಿಬೇಕು ಅಂದ್ರೆ ನೀವು ಸರಳ ತಂತ್ರ ಪಾಲಿಸಬೇಕು.
ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?
ಸೂತ್ರ ಒಂದು - ವರ್ಷಕ್ಕೆ ಒಂದು ಹೆಚ್ಚುವರಿ ಇಎಂಐ (EMI) ಪಾವತಿಸಿ : ವರ್ಷಕ್ಕೆ 12 ತಿಂಗಳು ನೀವು ಇಎಂಐ ಪಾವತಿ ಮಾಡ್ಬೇಕಾಗುತ್ತದೆ. ನೀವು 12 ತಿಂಗಳ ಬದಲು 13 ತಿಂಗಳ ಲೆಕ್ಕದಲ್ಲಿ ವರ್ಷಕ್ಕೆ ಕೇವಲ ಒಂದು ಹೆಚ್ಚುವರಿ ಕಂತು ಪಾವತಿ ಮಾಡ್ಬೇಕು. ಆಗ 25 ರ ಬದಲಿಗೆ ಸುಮಾರು 20 ವರ್ಷಗಳಲ್ಲಿ ನಿಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ.
ಸೂತ್ರ ಎರಡು - ಪ್ರತಿ ವರ್ಷ ನಿಮ್ಮ ಇಎಂಐ ಹೆಚ್ಚಿಸಿ : ನಿಮ್ಮ ಹೋಮ್ ಲೋನ್ ಅವಧಿ ಕಡಿಮೆ ಆಗಬೇಕು ಎಂದಾದ್ರೆ ನೀವು ಪ್ರತಿ ವರ್ಷ ನಿಮ್ಮ ಇಎಂಐಯನ್ನು ಶೇಕಡಾ 5ರಷ್ಟು ಹೆಚ್ಚಿಸಬೇಕು. ನೀವು ಹೀಗೆ ಮಾಡಿದಲ್ಲಿ ನಿಮ್ಮ ಹೋಮ್ ಲೋನ್ ಅವಧಿ 25 ವರ್ಷದಿಂದ 13 ವರ್ಷಕ್ಕೆ ಇಳಿಯುತ್ತದೆ. ನೀವು ಬೇಗ ಗೃಹ ಸಾಲದಿಂದ ಮುಕ್ತಿ ಹೊಂದಬಹುದು.
ಸುಧಾ ಮೂರ್ತಿ - ನೀತಾ ಅಂಬಾನಿವರೆಗೆ ಈ ಯಶಸ್ವಿ ಬ್ಯುಸಿನೆನ್ ಮಹಿಳೆಯರು ಓದಿದೆಷ್ಟು?
ಸೂತ್ರ ಮೂರು : ನೀವು ಹೀಗೂ ಮಾಡ್ಬಹುದು : ನಾವು ಮೇಲೆ ವರ್ಷಕ್ಕೆ ಒಂದು ಹೆಚ್ಚುವರಿ ಇಎಂಐ ಹಾಗೂ ಶೇಕಡಾ 5ರಷ್ಟು ಇಎಂಐ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ವಿ. ಅನುಕೂಲವಿದೆ ಅಂದ್ರೆ ನೀವು ವರ್ಷಕ್ಕೆ ಒಂದು ಹೆಚ್ಚುವರಿ ಇಎಂಐ ಪಾವತಿಸುವ ಜೊತೆಗೆ ಪ್ರತಿ ವರ್ಷ ನಿಮ್ಮ ಇಎಂಐಯನ್ನು ಶೇಕಡಾ 10ಕ್ಕೆ ಹೆಚ್ಚಿಸಬೇಕು. ಆದ್ರೆ ಇದು ಸುಲಭವಲ್ಲ. ಯಾಕೆಂದ್ರೆ ವರ್ಷದಿಂದ ವರ್ಷಕ್ಕೆ ನಿಮ್ಮ ಇಎಂಐ ಶೇಕಡಾ 10ರಷ್ಟು ಹೆಚ್ಚಾದ್ರೆ ಅದಕ್ಕೆ ತಕ್ಕಂತೆ ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಒಂದ್ವೇಳೆ ನೀವು ಹಣ ಹೊಂದಿಸಲು ಸಮರ್ಥರಾಗಿದ್ದರೆ ನಿಮ್ಮ ಕೆಲಸ ಸುಲಭ. ನೀವು ಅತಿ ಬೇಗ ಅಂದ್ರೆ ಕೇವಲ 9.5 ವರ್ಷದಲ್ಲಿ ಹೋಮ್ ಲೋನ್ ಅನ್ನು ಪೂರ್ಣಗೊಳಿಸಬಹುದು. ಗೃಹ ಸಾಲ ಪಡೆದ ಆರಂಭದಲ್ಲಿಯೇ ನೀವು ಈ ತಂತ್ರವನ್ನು ಪಾಲಿಸಿದ್ರೆ ಮುಂದೆ ನಿಮಗೆ ಇಎಂಐ ಪಾವತಿ ಸುಲಭವಾಗುತ್ತದೆ.