ನವದೆಹಲಿ(ನ.4): ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ಹೊಸ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂ. ಸಾಲ ನೀಡುವ ಯೋಜನೆ ಅತ್ಯಂತ ಪ್ರಮುಖವಾದುದು. 

ದೇಶದ ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳು ನೋಟು ಅಮಾನ್ಯತೆ ಹಾಗೂ ಜಿಎಸ್‌ಟಿಯ ಆರಂಭಿಕ ದಿನಗಳಲ್ಲಿ ನಗದು ಕೊರತೆ ಹಾಗೂ ಸಾಲದ ಪೂರೈಕೆಯ ವ್ಯತ್ಯಯದಿಂದ ಸಾಕಷ್ಟು ತೊಂದರೆಗೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಈ ಉದ್ದಿಮೆಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಸುಲಭ ಹಾಗೂ ತ್ವರಿತ ಸಾಲ ಯೋಜನೆಯನ್ನು ಘೋಷಿಸಿದ್ದಾರೆ. 

ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಇನ್ನು ಸುಲಭವಾಗಿ ಸಾಲ ಸಿಗಲಿದೆ. ಇದುವರೆಗೆ ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿದ್ದವು. ಬಹುತೇಕ ಎಂಎಸ್‌ಎಂಇಗಳು ಅಸಂಘಟಿತ ವಲಯದಲ್ಲಿರುವುದರಿಂದ ಸಾಲ ಸುಲಭವಾಗಿ ಸಿಗುತ್ತಿರಲಿಲ್ಲ.

ಅಲ್ಲದೇ 2016ರ ನವೆಂಬರ್ ನಲ್ಲಿ ಐತಿಹಾಸಿಕ ನೋಟು ಅಮಾನ್ಯತೆ ಘೋಷಣೆಯಾದ ಬಳಿಕ, ಎಂಎಸ್‌ಎಂಇಗಳಿಗೆ ತೀವ್ರ ನಗದು ಕೊರತೆಯ ಬಿಕ್ಕಟ್ಟು ಎದುರಾಗಿತ್ತು. ಅನೇಕ ಎಂಎಸ್‌ಎಂಇಗಳು ನಗದು ಮೂಲಕವೇ ಹೆಚ್ಚಿನ ವಹಿವಾಟು ನಡೆಸುತ್ತಿದ್ದುದು ಇದಕ್ಕೆ ಕಾರಣ. ಜಿಎಸ್‌ಟಿ ಜಾರಿಯಾದ ನಂತರ ಕೂಡ ಬಿಕ್ಕಟ್ಟು ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಎಂಎಸ್‌ಎಂಇಗಳಿಗೆ ಸುಲಭ ಸಾಲ ನಿರ್ಣಾಯಕವಾಗಿದೆ.

ಸಣ್ಣ ಉದ್ದಿಮೆದಾರರಿಗೆ ಬಂಪರ್:

ಈಗಾಗಲೇ ಭಾರತವು ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 23 ಅಂಕ ಸುಧಾರಿಸಿ 77ನೇ ಸ್ಥಾನ ಗಳಿಸಿದೆ. ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಿಗೆ ಅನುಕೂಲವಾಗುವಂತೆ ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ. ತನಕ ಸಾಲ ಮಂಜೂರು ಮಾಡುವ ಆನ್‌ಲೈನ್‌ ವ್ಯವಸ್ಥೆ ಇದಾಗಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಲಿದೆ.

ಈ ಹಿಂದಿನಿಂದಲೂ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಜಿಡಿಪಿ ಪ್ರಗತಿಯಲ್ಲೂ ಈ ಕ್ಷೇತ್ರದ ಪಾಲನ್ನು ಅಲ್ಲಗಳೆಯಲಾಗದು.  

ಭಾರತದಲ್ಲಿ 6.3 ಕೋಟಿ ಎಂಎಸ್‌ಎಂಇಗಳಿದ್ದು, 11 ಕೋಟಿ ಮಂದಿಗೆ ಉದ್ಯೋಗ ಕಲ್ಪಿಸಿವೆ. ಉದ್ಯೋಗರಹಿತ ಬೆಳವಣಿಗೆಯ ಆತಂಕದ ನಡುವೆ, ಇದು ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ.

ಇಷ್ಟು ಮಾತ್ರವಲ್ಲದೆ ಎಂಎಸ್‌ಎಂಇಗಳಿಗೆ ಶೇ.2ರಷ್ಟು ಬಡ್ಡಿ ಸಬ್ಸಿಡಿ, ಕಾರ್ಮಿಕ ಕಾನೂನುಗಳಲ್ಲಿ ವಿನಾಯಿತಿ, ಇ-ಮಾರ್ಕೆಟ್‌, ಫಾರ್ಮಾ ಕ್ಲಸ್ಟರ್‌ಗಳ ಸ್ಥಾಪನೆ ಇತ್ಯಾದಿ ಅನುಕೂಲಗಳು ಉದ್ಯಮಸ್ನೇಹಿಯಾಗಿವೆ. ಜಿಎಸ್‌ಟಿ ಡೇಟಾಗಳನ್ನೂ 1 ಗಂಟೆಯೊಳಗಿನ ಸಾಲ ಮಂಜೂರಾತಿಗೂ ಲಿಂಕ್‌ ಕಲ್ಪಿಸುವುದೂ ಎಂಎಸ್‌ಎಂಇ ವಲಯಕ್ಕೆ ಸಿಹಿ ಸುದ್ದಿಯಂದೇ ಹೇಳಬಹದು. 

ಸಾಲದ ಪ್ರಮಾಣ ಎಷ್ಟು?: 

ಈ ಯೋಜನೆಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ 10 ಲಕ್ಷ ರೂ.ನಿಂದ 1 ಕೋಟಿ ರೂ. ತನಕ  ಸಾಲ ದೊರೆಯಲಿದೆ.

ಬಡ್ಡಿ ದರ ಎಷ್ಟು?: 

ಶೇ.8ರಿಂದ ಬಡ್ಡಿ ದರಗಳು ಆರಂಭವಾಗುತ್ತವೆ. ಈ ಸಾಲಗಳು ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳ ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಟ್ರಸ್ಟ್‌ ಯೋಜನೆಗೆ(ಸಿಜಿಟಿಎಂಎಸ್‌ಇ) ಹೊಂದಿಕೊಂಡಿರುತ್ತವೆ. 

59 ನಿಮಿಷದಲ್ಲಿ ಸಾಲ ಮಂಜೂರು: 
ಸಾಮಾನ್ಯವಾಗಿ ಸದ್ಯದ ವ್ಯವಸ್ಥೆಯಲ್ಲಿ ಸಾಲದ ಅರ್ಜಿ, ಅದರ ಪರಿಶೀಲನೆ, ಸಾಲ ಮಂಜೂರು ಸೇರಿದಂತೆ ಈ ಪ್ರಕ್ರಿಯೆಗೆ 20-25 ದಿನಗಳು ಬೇಕು. ಈ ಅವಧಿಯನ್ನು 59 ನಿಮಿಷಕ್ಕೆ ಇಳಿಸಲಾಗಿದೆ. ಸಾಲ ಮಂಜೂರಾದ ಬಳಿಕ ವಾರದೊಳಗೆ ಸಾಲ ನಿಮ್ಮ ಕೈ ಸೇರಲಿದೆ.

ಹೇಗೆ ಅಪ್ರೋಚ್ ಮಾಡುವುದು?:

 ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೊದಲು ನಿಮ್ಮ ಜಿಎಸ್‌ಟಿ ಗುರುತಿನ ಸಂಖ್ಯೆ, ಎಕ್ಸ್‌ಎಂಎಲ್‌ ಫಾರ್ಮೆಟ್‌ನಲ್ಲಿನ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌, ನಿಮ್ಮ ಪ್ಯಾನ್‌ ಸಂಖ್ಯೆ, ಪಿಡಿಎಫ್‌ ಫಾರ್ಮೆಟ್‌ನಲ್ಲಿ ಕಳೆದ 6 ತಿಂಗಳ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳು, ನೆಟ್‌ ಬ್ಯಾಂಕಿಂಗ್‌ನ ವಿವರಗಳು, ನಿಮ್ಮ ಕಂಪನಿಯ ನಿರ್ದೇಶಕರು ಮತ್ತು ಮಾಲೀಕರ ವಿವರಗಳು, ಒಡೆತನಕ್ಕೆ ಸಂಬಂಧಿಸಿದ ಮಾಹಿತಿಗಳು ಸಿದ್ಧವಾಗಿರಲಿ.

ಸಾಲ ಮಂಜೂರಾದ ತಕ್ಷಣ ಹಣ ಸಿಗುವುದೆಂದು ತಿಳಿದರೆ ಅದು ನಿಮ್ಮ ತಪ್ಪು ಕಲ್ಪನೆಯಾದೀತು. ಏಕೆಂದರೆ ಮತ್ತಷ್ಟು ಮಾಹಿತಿ ಅಥವಾ ವಿವರಣೆಯನ್ನು ಬ್ಯಾಂಕ್‌ಗಳು ನಿಮ್ಮಿಂದ ಕೇಳಬಹುದು

ಅನುಕೂಲ ಏನಾಗಲಿದೆ?:
ಬ್ಯಾಂಕ್‌ ಸಾಲದ ಕೊರತೆ ಎದುರಿಸುತ್ತಿರುವ ಎಂಎಸ್‌ಎಂಇ ವಲಯಕ್ಕೆ ಇದರಿಂದ ಅನುಕೂಲವಾಗಲಿದೆ. ಅಲ್ಲದೇ ವಿಶ್ವ ಬ್ಯಾಂಕ್‌ನ ಉದ್ಯಮಸ್ನೇಹಿ ರಾರ‍ಯಂಕಿಂಗ್‌ನಲ್ಲಿ ಭಾರತದ ಸ್ಥಾನ ಮತ್ತಷ್ಟು ಏರುವ ನಿರೀಕ್ಷೆ ಇದೆ. ಸಣ್ಣ ಉದ್ದಿಮೆಗೆ ಶೇ.2ರಷ್ಟು ಬಡ್ಡಿ ಸಬ್ಸಿಡಿ ಉದ್ದಿಮೆದಾರರಿಗೆ ಸಹಾಯಕವಾಗಲಿದೆ. 

ಅಲ್ಲದೇ ಕಿರು ಉದ್ದಿಮೆಗೆ ನಗದು ಪೂರೈಕೆ ಹೆಚ್ಚಾಗುವ ಸಂಭವ ಕೂಡ ಇದೆ. ಇಷ್ಟೇ ಅಲ್ಲದೆ ಎಂಎಸ್‌ಎಂಇಗಳಿಗೆ ಸುಲಭವಾಗಿ ಮಾರುಕಟ್ಟೆ ವಿಸ್ತರಣೆ ಮಾಡಲು ಇದರಿಂದ ಅನುಕೂಲವಾಗಲಿದೆ.