ಈ ಭೂಮಿಯ ಮೇಲಿನ ಅತ್ಯಂತ ಬೃಹತ್‌ ಪ್ರದರ್ಶನವನ್ನು ಮಾಡಿದ್ದು 58 ವರ್ಷಗಳ ಹಿಂದೆ ಸೆಸಿಲ್‌ ಬಿ.ಡೆಮೆಲ್ಲೋ. ಅದೊಂದು ಕಾಲ್ಪನಿಕ ಪ್ರದರ್ಶನವಾಗಿತ್ತು. ಚಲನಚಿತ್ರದ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಡೆಮೆಲ್ಲೋ ಆ ಪ್ರದರ್ಶನ ಏರ್ಪಡಿಸಿದ್ದ. ಕಳೆದ ವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದಲ್ಲಿ ನಡೆಸಿಕೊಟ್ಟಪ್ರದರ್ಶನ ಈ ಭೂಮಿಯ ಮೇಲಿನ 2020ರ ಅತಿ ದೊಡ್ಡ ಪ್ರದರ್ಶನವಾಗಿತ್ತು.

ವಿಶೇಷವೆಂದರೆ ಅದು ವಾಸ್ತವದ್ದಾಗಿತ್ತು. ಟ್ರಂಪ್‌ ತಮ್ಮ ವರ್ಣರಂಜಿತ ಬದುಕಿನಲ್ಲಿ ಇಂಥ ವೈಭವೋತ್ಸವವನ್ನು ಬಹುಶಃ ಹಿಂದೆಂದೂ ಕಂಡಿರಲಿಲ್ಲ. ಅವರು ಎಷ್ಟೊಂದು ಪರವಶತೆಗೆ ಒಳಗಾಗಿದ್ದರು ಎಂದರೆ ಗಾಂಧೀಜಿಯ ಸಬರಮತಿ ಆಶ್ರಮದಲ್ಲಿ ಗಾಂಧೀಜಿಯನ್ನೇ ಮರೆತು ಸಂದರ್ಶಕರ ಪುಸ್ತಕದಲ್ಲಿ ‘ಮೈ ಗ್ರೇಟ್‌ ಫ್ರೆಂಡ್‌ ಪ್ರೈಮ್‌ ಮಿನಿಸ್ಟರ್‌ ಮೋದಿ’ ಎಂಬ ಮೆಚ್ಚುಗೆಯನ್ನು ದಾಖಲಿಸಿದರು.

ಟ್ರಂಪ್ 2ನೇ ದಿನ: ಭಾರತ- ಅಮೆರಿಕಾ ನಡುವೆ ಮಹತ್ವದ ಒಪ್ಪಂದ?

(ಪುಸ್ತಕದಲ್ಲಿ ಟ್ರಂಪ್‌ ಬರೆದಿರುವ ಸಾಲುಗಳನ್ನು ಯಾರಾದರೂ ಗಮನವಿಟ್ಟು ನೋಡಿದ್ದರೆ ಅವರ ಕೈಬರಹದ ವೈಲಕ್ಷಣ್ಯವನ್ನು ಗಮನಿಸಿರಬಹುದು. ಅವರು ಕ್ಯಾಪಿಟಲ್‌ ಅಕ್ಷರಗಳು ಮತ್ತು ಸ್ಮಾಲ್‌ ಅಕ್ಷರಗಳನ್ನು ಮಿಶ್ರಣ ಮಾಡಿ ಬರೆದಿದ್ದಾರೆ. ಶಬ್ದಗಳು ಮತ್ತು ಸಾಲುಗಳ ನಡುವಿನ ಅಂತರ ಅನಿರೀಕ್ಷಿತ ರೀತಿಯಲ್ಲಿ ಅಸಂಬದ್ಧವಾಗಿದೆ.

ಅವರು ಟಿ (T) ಬರೆದಾಗ ಅದರ ಮೇಲಿನ ಅಡ್ಡಗೆರೆಯು ವಕ್ರವಾಗಿದೆ, ಅಕ್ಕಪಕ್ಕದ ಪದಗಳಿಗೆ ಮತ್ತು ಸಾಲುಗಳಿಗೆ ಅದರಿಂದ ತೊಂದರೆಯಾಗಿದೆ. ಒಟ್ಟಾರೆ ಅವರ ಕೈಬರಹ ನೋಡಿದಾಗ ಕಾಗದದ ಮೇಲೆ ಪೆನ್ನಿನಿಂದ ಬರೆಯುವುದು ಅಭ್ಯಾಸವಿಲ್ಲದ ವ್ಯಕ್ತಿಯೊಬ್ಬ ಅದನ್ನು ಬರೆದಿರುವುದು ನಿಚ್ಚಳವಾಗಿ ಕಾಣಿಸುತ್ತದೆ.)

ಟ್ರಂಪ್‌ ಭೇಟಿಗಾಗಿ ಸಾಕಷ್ಟುಕೋಲಾಹಲ ನಡೆಯಿತು. ಈಗ ಅದೆಲ್ಲ ಮುಗಿದಿದೆ. ಯುದ್ಧವನ್ನು ಗೆದ್ದದ್ದೋ ಇಲ್ಲಾ ಸೋತದ್ದೋ ಆಗಿದೆ. ಪ್ರಶ್ನೆ ಹುಟ್ಟಿರುವುದು ಏನೆಂದರೆ, ‘ಇಷ್ಟೆಲ್ಲ ಮಾಡಿದ್ದು ಏತಕ್ಕಾಗಿ?’ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿಗಳು ಎಲ್ಲ ಕಾಲದಲ್ಲೂ ಅಧಿಕೃತ ಭೇಟಿಗಾಗಿ ಬೇರೆ ಬೇರೆ ದೇಶಗಳಿಗೆ ಹೋಗುತ್ತಿರುತ್ತಾರೆ. ಆದರೆ ಯಾವ ದೇಶವೂ ಭೇಟಿ ನೀಡಿದ ಅತಿ ಗಣ್ಯವ್ಯಕ್ತಿಯನ್ನು ವೈಭವೀಕರಿಸುವುದಕ್ಕಾಗಿ ತನ್ನ ರಾಷ್ಟ್ರೀಯ ಆದ್ಯತೆಗಳನ್ನು ಕಡೆಗಣಿಸುವುದಿಲ್ಲ.

ಆದರೆ, ಟ್ರಂಪ್‌ ಭೇಟಿಯನ್ನು ಭಾರತವು ರಾಷ್ಟ್ರೀಯ ಉತ್ಸವವನ್ನಾಗಿ ಮಾರ್ಪಡಿಸಿತು. ಈ ಉತ್ಸವದ ನಡುವೆಯೇ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತು. ಮೂರು ದಿನಗಳವರೆಗೆ ಪ್ರಧಾನಿ ಹಾಗೂ ಗೃಹಮಂತ್ರಿಗಳು ಈ ಬಗ್ಗೆ ಏನೂ ಪ್ರತಿಕ್ರಿಯಿಸಲಿಲ್ಲ. ಕೊಲ್ಲುವ ಕೇಳಿಯಲ್ಲಿ ಧರ್ಮವು ಹುಚ್ಚಾಗಿಹೋಗಿತ್ತು.

ಟ್ರಂಪ್‌ ‘ಉತ್ಸವ’ದ ಸಿದ್ಧತೆಗಳು ಕೂಡ ಸಾಕಷ್ಟುಗಮನ ಸೆಳೆದಿದ್ದವು. ಅಧಿಕಾರಿಗಳು ಅಹ್ಮದಾಬಾದ್‌ನ ಕೊಳೆಗೇರಿಯನ್ನು ಮರೆಮಾಡುವುದಕ್ಕಾಗಿ ಗೋಡೆ ಕಟ್ಟಿದ್ದರು. ಮೋದಿಯವರು 12 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿದ್ದರೂ ಅಹ್ಮದಾಬಾದ್‌ನಲ್ಲಿ ಹಲವು ಕೊಳೆಗೇರಿಗಳು ಇನ್ನೂ ಉಳಿದುಕೊಂಡುಬಿಟ್ಟಿವೆ. ಟೀವಿ ಕ್ಯಾಮರಾಗಳು ಈ ವಿಐಪಿ ಸಂಸ್ಕೃತಿಯ ಹೃದಯಹೀನ ಮುಖವನ್ನು ತೋರಿಸಿದವು.

ಟ್ರಂಪ್‌ ಅಹಮದಾಬಾದ್‌ ಭೇಟಿಗೆ 100 ಅಲ್ಲ ಕೇವಲ 13 ಕೋಟಿ ವೆಚ್ಚ!

ಬುಲ್ಡೋಜರ್‌ಗಳು ತರಕಾರಿಯ ತಳ್ಳುಗಾಡಿಗಳನ್ನು ಮುರಿದುಹಾಕಿ ಬಡ ನಾಗರಿಕರ ಜೀವನಾಧಾರವನ್ನೇ ನಾಶ ಮಾಡಿದವು. ಕೆಲವು ಗಂಟೆಗಳವರೆಗೆ ಅವುಗಳನ್ನು ಬೇರೆಡೆ ಸ್ಥಳಾಂತರಿಸಲು ಆಗುತ್ತಿರಲಿಲ್ಲವೆ?

ಟ್ರಂಪ್‌ ಸ್ವಾಗತದಲ್ಲಿ ಎಲ್ಲವನ್ನೂ ಉತ್ಪ್ರೇಕ್ಷಿಸಲಾಗಿತ್ತು. ತಮ್ಮನ್ನು ಸ್ವಾಗತಿಸಲು ಒಂದು ಕೋಟಿ ಜನ ಸೇರುತ್ತಾರೆ ಎಂದು ಟ್ರಂಪ್‌ ಹೇಳಿದ್ದರು. ವಾಷಿಂಗ್ಟನ್‌ ಡಿಸಿಯ ಜನಸಂಖ್ಯೆ 7 ಲಕ್ಷ. ಕೊನೆಗೆ ಟ್ರಂಪ್‌ ಅವರ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರನ್ನು ಅಹ್ಮದಾಬಾದಿನ ಕ್ರೀಡಾಂಗಣದಲ್ಲಿ ತುಂಬುವುದಕ್ಕಾಗಿ ವಿವಿಧ ಭಾಗಗಳಿಂದ ಕಲೆಹಾಕಿ ಸರ್ಕಾರ ಕರೆತಂದಿತ್ತು. ಅವರೆಲ್ಲರೂ ಸರ್ಕಾರವೇ ನೀಡಿದ ಬಿಳಿ ಕ್ಯಾಪ್‌ ಧರಿಸಿದ್ದರು. ಅಂದರೆ ಅವರನ್ನೆಲ್ಲ ಸರ್ಕಾರವೇ ಸಂಘಟಿಸಿತ್ತು ಎಂಬುದು ಸ್ಪಷ್ಟ.

ಭಾರೀ ಪ್ರಚಾರ ಮಾಡಿದ್ದ ವಿಮಾನ ನಿಲ್ದಾಣದಿಂದ ಮೊಟೆರೊ ಸ್ಟೇಡಿಯಂವರೆಗಿನ ರೋಡ್‌ ಶೋದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನರನ್ನು ಸೇರಿಸುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಗುಜರಾತ್‌ ಘಟಕಗಳು ಹಂಚಿಕೊಂಡಿದ್ದವು.

ಟ್ರಂಪ್ ಊಟಕ್ಕೂ ಮುನ್ನ ಮೋದಿ ಸಿಎಎ ಪಾಠ

ರಾಜ್ಯದ ನಿಷ್ಠಾವಂತ ಮುಖ್ಯಮಂತ್ರಿ ವಿಜಯ ರೂಪಾನಿ, ‘ಇಡೀ ಗುಜರಾತ್‌ನದ್ದು ಒಂದೇ ಧ್ವನಿ, ನಮಸ್ತೇ ಟ್ರಂಪ್‌!’ ಎಂದು ಹೇಳಿದರು. ಆದರೆ ರೋಡ್‌ ಶೋದಲ್ಲಿ ಕೆಲವೇ ಕಡೆಗಳಲ್ಲಿ ಕೆಲವು ಗುಂಪುಗಳಷ್ಟೇ ಕಂಡುಬಂದವು. ಜನರ ಬದಲಿಗೆ ಅನಗತ್ಯ ಪ್ರಮಾಣದಲ್ಲಿ ಭದ್ರತಾ ಪಡೆಗಳು ಮತ್ತು ಅವರ ವಾಹನಗಳು ತುಂಬಿಕೊಂಡಿದ್ದವು. ಟ್ರಂಪ್‌ ಅವರದೇ ಆಮದಾದ ಸೇನೆ ಮತ್ತು ಟ್ರೇಡ್‌ಮಾರ್ಕ್ ವಾಹನಗಳು ಭಾರತೀಯ ಪಡೆಯೊಂದಿಗೆ ಸೇರಿಕೊಂಡವು. ಅವರ ಭೇಟಿಯುದ್ದಕ್ಕೂ ಸಾಮಾನ್ಯರಾದ ಜನರಿಗಿಂತ ಸಮವಸ್ತ್ರದ ಸಿಬ್ಬಂದಿಯೇ ಹೆಚ್ಚಿಗೆ ಇದ್ದರು.

ಭೇಟಿ ನೀಡಿದ ಈ ಗಣ್ಯಮಾನ್ಯರಿಗೆ ‘ಭಾರತೀಯ ಸಂಸ್ಕೃತಿ’ಯನ್ನು ಪ್ರದರ್ಶಿಸುವ ಪ್ರಯತ್ನ ಮತ್ತೊಂದು ದಯನೀಯ ನೋಟವಾಗಿತ್ತು. ಗಣ್ಯರು ವಿಮಾನದಿಂದ ಇಳಿದು ತಮ್ಮ ಕಾರಿನ ಕಡೆಗೆ ತೆರಳುವಲ್ಲಿ ಹಲವಾರು ನೃತ್ಯಗಾರರು ಮತ್ತು ಸಂಗೀತಗಾರರು ಸಾಲುಗಟ್ಟಿನಿಂತಿದ್ದರು. ಅವರಿಗೆ ಕೇವಲ ಮುಗುಳ್ನಗೆ ತೋರಿಸಲು ಮತ್ತು ಕೆಲವೇ ಸೆಕೆಂಡುಗಳ ಕಾಲ ಕೇಳಿಸಿಕೊಳ್ಳಲಷ್ಟೇ ಗಣ್ಯರಿಗೆ ಸಮಯವಿದ್ದುದು.

ಉದಾಹರಣೆಗೆ, ಆಗ್ರಾದಲ್ಲಿ ಟ್ರಂಪ್‌ ವಿಮಾನದ ಸಮೀಪ 250 ಕಲಾವಿದರು ಪ್ರದರ್ಶನ ನೀಡಿದರು. ತಾಜ್‌ಗೆ ತೆರಳುವ ಮಾರ್ಗದಲ್ಲಿ 3,000 ಕಲಾವಿದರು ನಿರ್ದೇಶಿತ 21 ಸ್ಥಳಗಳಲ್ಲಿ ಬೃಜ್‌, ಅವಧ ಮತ್ತು ಇತರ ಸ್ಥಳೀಯ ನೃತ್ಯರೂಪಕಗಳೊಂದಿಗೆ ನಿಂತಿದ್ದರು. ಈ ಕಲಾವಿದರು ಪ್ರದರ್ಶನ ನೀಡುವುದಕ್ಕಾಗಿ ದೀರ್ಘ ಕಾಲ ತಾಲೀಮು ನಡೆಸಿರಬೇಕು. ಆದರೆ ಟ್ರಂಪ್‌ ಕಾರಿನಲ್ಲಿ ವೇಗವಾಗಿ ಹೋದರು. ಐಷಾರಾಮಿ ಕಾರಿನ ಬಣ್ಣದ ಸುರಕ್ಷಾ ಕಿಟಕಿಗಳ ಮೂಲಕ ವಿಐಪಿಗಳು ನರ್ತಕರನ್ನು ಅರೆಕ್ಷಣವಾದರೂ ನೋಡಿದರೋ ಇಲ್ಲವೋ. ಎಂಥ ಅರ್ಥಹೀನ ಕಸರತ್ತು.

ಟ್ರಂಪ್‌ ಅಹ್ಮದಾಬಾದ್‌ನಲ್ಲಿ ಕಳೆದದ್ದು ಮೂರು ತಾಸು. ಅದಕ್ಕಾಗಿ ಗುಜರಾತ್‌ ಸರ್ಕಾರ 85 ಕೋಟಿ ರು. ವೆಚ್ಚ ಮಾಡಿತು. ಅವೆಲ್ಲ ಯಾವುದಕ್ಕಾಗಿ? ಬಹುಶಃ ಒಂದು ಉತ್ತರ: ರಾಜಕೀಯ. ಅಮೆರಿಕದಲ್ಲಿರುವ ಭಾರತೀಯರ ಜನಸಂಖ್ಯೆಯಲ್ಲಿ ಗುಜರಾತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಂಪ್ರದಾಯಿಕವಾಗಿ ಅವರು ಡೆಮೋಕ್ರೆಟಿಕ್‌ ಪಕ್ಷದ ಬೆಂಬಲಿಗರು. ರಿಪಬ್ಲಿಕನ್‌ ಪಕ್ಷದ ಕಡೆಗೆ ತಿರುಗುವುದಕ್ಕೆ ಅವರ ಮೇಲೀಗ ಒತ್ತಡವಿದೆ.

ಹೂಸ್ಟನ್‌ನಲ್ಲಿ ಮೋದಿಯವರ ಘೋಷಣೆ ನೆನಪು ಮಾಡಿಕೊಳ್ಳಿ: ಅಬ್‌ಕಿ ಬಾರ್‌ ಟ್ರಂಪ್‌ ಸರ್ಕಾರ್‌. ಮೋದಿಯವರ ಸ್ನೇಹಪರತೆಯಲ್ಲಿ ಟ್ರಂಪ್‌ಗೆ ರಾಜಕೀಯ ಹಿತಾಸಕ್ತಿ ಇದೆ. ಆದರೆ, ಮೋದಿಯವರ ಆಸಕ್ತಿಯಲ್ಲಿ ಕಡಿಮೆ ರಾಜಕೀಯವಿದೆ. ಅವರಿಗೆ ವೈಭವದ ಪ್ರದರ್ಶನ ಇಷ್ಟ. ಟ್ರಂಪ್‌ ಭೇಟಿಯು ಅವರಿಗೆ ತಮ್ಮ ತುರುಪು ಎಲೆ ಎಸೆಯುವುದಕ್ಕೆ ಮತ್ತು ಯಾರೂ ಮರೆಯದ ವೈಭವವನ್ನು ತೋರಿಸುವುದಕ್ಕೆ ಮತ್ತೊಂದು ಅವಕಾಶವಾಗಿತ್ತು.

ಅಮೆರಿಕದಲ್ಲಿರುವ ಭಾರತೀಯರಲ್ಲಿ ಗುಜರಾತಿಗಳ ಸಂಖ್ಯೆ ದೊಡ್ಡದು. ಸಾಂಪ್ರದಾಯಿಕವಾಗಿ ಅವರು ಡೆಮೋಕ್ರೆಟಿಕ್‌ ಪಕ್ಷದ ಬೆಂಬಲಿಗರು. ರಿಪಬ್ಲಿಕನ್‌ ಕಡೆಗೆ ತಿರುಗುವುದಕ್ಕೆ ಅವರ ಮೇಲೀಗ ಒತ್ತಡವಿದೆ. ಹೀಗಾಗಿ ಮೋದಿಯವರ ಸ್ನೇಹದಲ್ಲಿ ಟ್ರಂಪ್‌ಗೆ ರಾಜಕೀಯ ಹಿತಾಸಕ್ತಿಯಿದೆ. ಆದರೆ, ಮೋದಿಯವರ ಆಸಕ್ತಿಯಲ್ಲಿ ರಾಜಕೀಯ ಕಡಿಮೆ ಇದೆ.

- ಟಿಜೆಎಸ್‌ ಜಾರ್ಜ್