ನಾಗ್ಪುರದಲ್ಲಿರುವ ಡಾಲಿ ಚಾಯ್ವಾಲಾ ಟೀ ನಮಗೆ ಸಿಗಲ್ವಲ್ಲ ಅಂತ ನೊಂದುಕೊಳ್ಳೋದು ಬೇಡ. ನೀವೇ ಡಾಲಿ ಚಾಯ್ ವಾಲಾ ಫ್ರಾಂಚೈಸಿ ಖರೀದಿ ಮಾಡಿ ಬ್ಯುಸಿನೆಸ್ ಶುರು ಮಾಡ್ಬಹುದು. ಡಾಲಿ ಚಾಯ್ ವಾಲಾ ಈಗ ಬ್ಯುಸಿನೆಸ್ ವಿಸ್ತರಿಸೋಕೆ ಮುಂದಾಗಿದ್ದಾರೆ. 

ಸೋಶಿಯಲ್ ಮೀಡಿಯಾ (Social media) ಶಕ್ತಿಯನ್ನು ನೀವು ನಾಗ್ಪುರದ ಸಣ್ಣ ಡಾಲಿ ಚಾಯ್ ವಾಲಾ (Dolly Chai Wala) ಪ್ರಸಿದ್ಧಿಯಿಂದ ಅರಿಯಬಹುದು. ಬೀದಿ ಬದಿಯಲ್ಲಿ ಸಣ್ಣ ಅಂಗಡಿ ಇಟ್ಕೊಂದು ಟೀ ಮಾರಾಟ ಮಾಡ್ತಿದ್ದ ಡಾಲಿ ಚಾಯ್ ವಾಲಾ ಎಲ್ಲರಿಗೂ ಚಿರಪರಿಚಿತ. ಡಾಲಿ ಎಲ್ಲಿ ಹೋದ್ರೂ ಸುದ್ದಿ ಆಗ್ತಾರೆ. ಡಾಲಿ ಅಲಿಯಾಸ್ ಸುನಿಲ್ ಪಾಟೀಲ್ ಟೀ ತಯಾರಿಸೋ ಸ್ಟೈಲ್ ಎಲ್ಲರಿಗೂ ಇಷ್ಟ. ತಮ್ಮದೇ ಸ್ಟೈಲ್ ನಲ್ಲಿ ಗ್ರಾಹಕರಿಗೆ ಟೀ ನೀಡುವ ಡಾಲಿ ಟೀ ಶಾಪ್ ಗೆ ವರ್ಷಗಳ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಭೇಟಿ ನೀಡಿದ್ರು. ಇದಾದ್ಮೇಲೆ ಡಾಲಿ ಕೈಗೆ ಸಿಗ್ತಿಲ್ಲ. ಡಾಲಿಯ ಒಂದು ಚಹಾದ ಬೆಲೆ ಕೇವಲ 7 ರೂಪಾಯಿ. ಆದ್ರೆ ದಿನವಿಡೀ 350-500 ಕಪ್ ಚಹಾ ಮಾರಾಟ ಮಾಡ್ತಾರೆ. ಇದರ ಪ್ರಕಾರ, ಅವನ ದೈನಂದಿನ ಆದಾಯ 2,450 - 3500 ರೂಪಾಯಿ. ಹಿಂದೆ ಬ್ಲಾಗರ್ ಒಬ್ಬರು ಡಾಲಿ, ದಿನದ ಗಳಿಕೆಯನ್ನು ಬಹಿರಂಗಪಡಿಸಿದ್ದರು. ಅವರು ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡ್ತಾರೆ ಎನ್ನಲಾಗ್ತಿದೆ. ಡಾಲಿ, ಸೋಶಿಯಲ್ ಮೀಡಿಯಾದಿಂದಲೂ ಹಣ ಗಳಿಸ್ತಿದ್ದಾರೆ. ಸದ್ಯ ದುಬೈನ ಅವರ ವಿಡಿಯೋ ವೈರಲ್ ಆಗಿದೆ. ಈಗ ಡಾಲಿ ಚಾಯ್ ವಾಲಾ ಬಗ್ಗೆ ಇಷ್ಟೆಲ್ಲ ಏಕೆ ಹೇಳ್ತಿದ್ದೇವೆ ಅಂದ್ರೆ ಡಾಲಿ ಚಾಯ್ ವಾಲಾ ಜೊತೆ ಸೇರಿ ಬ್ಯುಸಿನೆಸ್ ಶುರು ಮಾಡುವ ಅವಕಾಶ ನಿಮಗೆ ಸಿಗ್ತಿದೆ. ಡಾಲಿ ತಮ್ಮ ಬ್ಯುಸಿನೆಸ್ ವಿಸ್ತರಿಸೋಕೆ ಮುಂದಾಗಿದ್ದಾರೆ. ಈಗ ಡಾಲಿ ಫ್ರಾಂಚೈಸಿ ನೀಡ್ತಿದ್ದಾರೆ.

ಡಾಲಿ ಚಾಯ್ವಾಲಾ ಫ್ರಾಂಚೈಸಿ : ಡಾಲಿ ಚಾಯ್ವಾಲಾ ದೇಶಾದ್ಯಂತ ಫ್ರಾಂಚೈಸ್ ತೆರೆಯಲು ಅವಕಾಶ ನೀಡ್ತಿದ್ದಾರೆ. @dolly_ki_tapri_nagpur ನಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ. ಭಾರತದಾದ್ಯಂತ ಡಾಲಿ ಫ್ರಾಂಚೈಸಿ ಟೀ ಅಂಗಡಿಗಳು ಮತ್ತು ಕಾರ್ಟ್ಗಳನ್ನು ಪ್ರಾರಂಭಿಸುತ್ತಿದ್ದಾರೆ. ಕಾರ್ಟ್ಗಳಿಂದ ಪ್ರಮುಖ ಕೆಫೆಗಳವರೆಗೆ ಮೂರು ಫ್ರಾಂಚೈಸಿ ಆಯ್ಕೆಗಳು ಲಭ್ಯವಿರುತ್ತವೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.

ಭಾರತದ ಮೊದಲ ವೈರಲ್ ಸ್ಟ್ರೀಟ್ ಬ್ರ್ಯಾಂಡ್ : ಡಾಲಿ ಚಾಯ್ವಾಲಾ, ತಮ್ಮ ಕಂಪನಿಯನ್ನು ಮೊದಲ ವೈರಲ್ ಸ್ಟ್ರೀಟ್ ಬ್ರ್ಯಾಂಡ್ ಎಂದು ಹೆಸರಿಸಿದ್ದಾರೆ ಡಾಲಿ ಚಾಯ್ ವಾಲಾ ಫ್ರಾಂಚೈಸಿ ಅಧಿಕೃತವಾಗಿ ತೆರೆದಿದೆ. ಇದು ಭಾರತದ ಮೊದಲ ವೈರಲ್ ಸ್ಟ್ರೀಟ್ ಬ್ರ್ಯಾಂಡ್. ಈಗ ಇದು ಒಂದು ವ್ಯಾಪಾರದ ಅವಕಾಶ ನೀಡಿದೆ. ತಳ್ಳುವ ಗಾಡಿಯಿಂದ ಹಿಡಿದು ಪ್ರಮುಖ ಕೆಫೆಗಳವರೆಗೆ, ನಾವು ಇದನ್ನು ದೇಶಾದ್ಯಂತ ಪ್ರಾರಂಭಿಸುತ್ತಿದ್ದೇವೆ. ಈ ಕನಸನ್ನು ಮುಂದಕ್ಕೆ ಕೊಂಡೊಯ್ಯಲು ನಿಜವಾದ ಉತ್ಸಾಹ ಹೊಂದಿರುವ ಜನರನ್ನು ಹುಡುಕುತ್ತಿದ್ದೇವೆ ಎಂದು ಬರೆಯಲಾಗಿದೆ. ನೀವು ಎಂದಾದರೂ ದೊಡ್ಡದನ್ನು, ದೇಶೀಯವಾದದ್ದನ್ನು, ನಿಜವಾಗಿಯೂ ಅದ್ಭುತವಾದದ್ದನ್ನು ನಿರ್ಮಿಸಲು ಬಯಸಿದರೆ ಇದು ನಿಮ್ಮ ಸಮಯ. ಸೀಮಿತ ನಗರಗಳು. ಅನಿಯಮಿತ ಚಹಾ ಎಂದು ಪೋಸ್ಟ್ ನಲ್ಲಿ ಬರೆದಿರೋದನ್ನು ಕಾಣ್ಬಹುದು.

ಡಾಲಿ ಚಾಯ್ವಾಲಾ ಫ್ರಾಂಚೈಸಿ ಮೂರು ಮಾದರಿಗಳಲ್ಲಿ ಲಭ್ಯವಿರುತ್ತದೆ. ಸರಳ ಕಾರ್ಟ್ನೊಂದಿಗೆ ಪ್ರಾರಂಭಿಸುವುದಾದ್ರೆ ಸುಮಾರು 4.5 ರಿಂದ 6 ಲಕ್ಷ ವೆಚ್ಚವಾಗುತ್ತದೆ. ಅಂಗಡಿ ರೂಪದಲ್ಲಿದ್ದರೆ ಅದಕ್ಕೆ 20- 22 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದಲ್ಲದೆ, ಸುಮಾರು 39- 43 ಲಕ್ಷ ರೂಪಾಯಿ ಖರ್ಚು ಮಾಡಿದ್ರೆ ನೀವು ಫ್ಲ್ಯಾಗ್ಶಿಪ್ ಕೆಫೆ ಪ್ರಾರಂಭಿಸಬಹುದು. ಆದ್ರೆ ಇದ್ರ ಬಗ್ಗೆ ಡಾಲಿ ಚಾಯ್ ವಾಲಾ ಕಡೆಯಿಂದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗ್ತಿದ್ದಂತೆ ಜನರು, ಒಂದು ಟೀಗಾಗಿ ಇಷ್ಟೊಂದು ಹಣ ಕೊಟ್ಟು ಫ್ರಾಂಚೈಸಿ ಖರೀದಿ ಮಾಡೋದು ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿ ಎಂದಿದ್ದಾರೆ. ಈ ಫ್ರಾಂಚೈಸಿಯಿಂದ ನಿಮಗೆ ಎಂದೂ ಲಾಭವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

View post on Instagram