* ಈ ವರ್ಷ ದಾಖಲೆ 12.50 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ನಿರೀಕ್ಷೆ* ಕಳೆದ ಜನವರಿಯಲ್ಲಿ ದಾಖಲೆ ಪ್ರಮಾಣದ ಜಿಎಸ್‌ಟಿ ಸಂಗ್ರಹ* ಹಣಕಾಸು ವರ್ಷ ಮುಕ್ತಾಯವಾಗಲು ಇನ್ನು ಎರಡು ತಿಂಗಳು ಬಾಕಿ* ಕೇಂದ್ರ ದ ಬೂಸ್ಟರ್ ಬಜೆಟ್ ಮಂಡನೆಯಾಗಿತ್ತು
ನವದೆಹಲಿ(ಫೆ. 04) ನೇರ ತೆರಿಗೆ (Direct Tax) ಸಂಗ್ರಹವು 12.50 ಲಕ್ಷ ಕೋಟಿ ರು ಪರಿಷ್ಕೃತ ಗುರಿಯನ್ನು ದಾಟಲಿದ್ದು, ಹಣಕಾಸು ವರ್ಷದ ಕೊನೆಯಲ್ಲಿ ಸಾರ್ವಕಾಲಿಕ ಗರಿಷ್ಠ ಸಂಗ್ರಹಣೆಯ ಮೂಲಕ ಐತಿಹಾಸಿಕ ದಾಖಲೆಯನ್ನು(Record) ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಸಿಬಿಡಿಟಿ (CBDT) ಮುಖ್ಯಸ್ಥ ಜೆ.ಬಿ. ಮಹೋಪಾತ್ರ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ದಾಖಲೆ ಪ್ರಮಾಣದ ಜಿಎಸ್‌ಟಿ (GST) ಸಂಗ್ರಹದ ಸುದ್ದಿ ಬೆನ್ನಲ್ಲೇ ನೇರ ತೆರಿಗೆಯಲ್ಲೂ ಭಾರೀ ಏರಿಕೆಯ ಸುಳಿವು ಹೊರಬಿದ್ದಿದೆ.
ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಕಾರ್ಪೊರೇಟ್ ತೆರಿಗೆ ಹಾಗೂ ವೈಯಕ್ತಿಕ ಆದಾಯ ತೆರಿಗೆಗಳ ಮೂಲದಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಫೆ.1 ರಂದು 10.38 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸಲಾಗಿದ್ದು, ಕೇಂದ್ರದ ಬಜೆಟ್ ಅಂದಾಜಿಗಿಂತ ಕೇವಲ 70,000 ಕೋಟಿ ಕಡಿಮೆಯಿದೆ. ಈವರೆಗೆ ನೇರ ತೆರಿಗೆ ಸಂಗ್ರಹಣೆ 11.18 ಲಕ್ಷ ಕೋಟಿ ದಾಟಿಲ್ಲ. ಆದರೆ ಹಣಕಾಸು ವರ್ಷ ಮುಕ್ತಾಯವಾಗಲು ಇನ್ನೆರಡು ತಿಂಗಳು ಬಾಕಿ ಇರುವುದರಿಂದ ಈ ಬಾರಿ 12.50 ಲಕ್ಷ ಕೋಟಿ ಸಂಗ್ರಹಣೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.
Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!
ಬದಲಾಗದ ಆದಾಯ ತೆರಿಗೆ ಸ್ಲ್ಯಾಬ್: ಕೇಂದ್ರದ ಬಜೆಟ್ (Union Budget 2022) ಮಂಡನೆಯಾಗಿದ್ದು ಆದಾಯ ತೆರಿಗೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. 2022ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿಗೆ ಸಂಬಂಧಿಸಿದ ಆದಾಯ ತೆರಿಗೆ ಸ್ಲ್ಯಾಬ್ ಹಾಗೂ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
2022-23ನೇ ಸಾಲಿನಲ್ಲಿ ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬಹುದೆಂಬ ನಿರೀಕ್ಷೆಯಿತ್ತು. ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2014 ರಲ್ಲಿ ಕೊನೆಯದಾಗಿ ಬದಲಾಯಿಸಲಾಗಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಿದ್ದರು. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಆದ್ರೆ 2014ರ ಬಳಿಕ ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಆಗಿಲ್ಲ.
ಬಜೆಟ್ ವಿಶೇಷತೆ ಸಾರಲು ಬಿಜೆಪಿಯಿಂದ ಅಭಿಯಾನ: ಕೇಂದ್ರದ ಬಜೆಟ್‌ನ ವಿಶೇಷತೆಗಳ ಬಗ್ಗೆ ದೇಶಾದ್ಯಂತ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಳೆಯಿಂದ 4 ದಿನಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಈ ಮಹತ್ವದ ಕಾರ್ಯಕ್ಕಾಗಿ ಪಕ್ಷದ ಸಂಸದರು, ಸಿಬ್ಬಂದಿ ಹಾಗೂ ಪಕ್ಷದ ಇತರೆ ನಾಯಕರನ್ನು ಸದುಪಯೋಗಪಡಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಳಕ ಪಕ್ಷದ ಮುಖಂಡರಿಗೆ ತಿಳಿಸಿದ್ದರು. ಇದರ ಬೆನ್ನಲ್ಲೇ, ಪಕ್ಷದ ಸಂಸದರು ತಾವು ಪ್ರತಿನಿಧಿಸುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫೆ.5, 6, 12 ಮತ್ತು 13ರಂದು ಸುದ್ದಿಗೋಷ್ಠಿ ಏರ್ಪಡಿಸಿ ಬಜೆಟ್ನಲ್ಲಿರುವ ಉತ್ತಮ ಅಂಶಗಳನ್ನು ತಿಳಿಸಬೇಕು. ಅಲ್ಲದೆ ರಾಜ್ಯ ಬಿಜೆಪಿ ಘಟಕಗಳು ಕಾರ್ಯಕ್ರಮಗಳನ್ನು ಏರ್ಪಡಿಸಿ, ಜನರಿಗೆ ಬಜೆಟ್‌ನ ಅಂಶಗಳನ್ನು ತಿಳಿಸಬೇಕು ಎಂದು ನಿರ್ದೇಶಿಸಲಾಗಿದೆ.
