ಮುಂಬೈ(ಜ.30): ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ, ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ಡಿಎಚ್ಎಫ್ಎಲ್ ಸಾವಿರಾರೂ ಕೋಟಿಯಷ್ಟು ಸಾಲ ನೀಡಿತ್ತು ಎಂಬ ಕೋಬ್ರಾ ಪೋಸ್ಟ್ ವರದಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಈ ಮಧ್ಯೆ ಡಿಹೆಚ್ಎಲ್ಎಫ್ ಪ್ರಮೋಟರ್‌ಗಳಿಂದ 31,000 ಕೋಟಿ ರೂ. ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ, ಕಂಪನಿಯ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ. 

ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಬಿಎಸ್ಇ ನಲ್ಲಿ ಶೇ.8 ರಷ್ಟು ಕುಸಿದಿದ್ದು, ಈ ಹಿಂದೆ 184.85 ರೂ. ಇದ್ದ ಷೇರು ಮೌಲ್ಯ ಇದೀಗ 170.05 ರೂ.ಗೆ ಇಳಿಕೆಯಾಗಿದೆ.

ಇನ್ನು ಡಿಹೆಚ್ಎಫ್ಎಲ್ ಹಗರಣದ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಆಗ್ರಹಿಸಿದ್ದಾರೆ. ಡಿಹೆಚ್ಎಫ್ಎಲ್ ಕಂಪನಿಗೆ ಎಸ್‌ಬಿಐ 11 ಸಾವಿರ ಕೋಟಿ ರೂ. ಮತ್ತು ಬ್ಯಾಂಕ್ ಆಫ್ ಬರೋಡ ಬ್ಯಾಂಕ್ 4 ಸಾವಿರ ಕೋಟಿ ರೂ. ಸಾಲ ನೀಡಿದ್ದು, ಈ ಹಗರಣದಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಗೆ ನಷ್ಟವಾಗಿದೆ ಎಂದದು ಸಿನ್ಹಾ ಆರೋಪಿಸಿದ್ದಾರೆ.

1984 ರಲ್ಲಿ ಸ್ಥಾಪಿತವಾದ ಡಿಹೆಚ್ಎಫ್ಎಲ್ ಕಂಪನಿ, ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳಿಗೆ ಆರ್ಥಿಕ ಸಹಾಯ ನೀಡುವ ಸಂಸ್ಥೆಯಾಗಿದೆ.