ಅಮೆಜಾನ್ನಲ್ಲಿ ರಾಮನಗರ ಮಾವು..!
ರಾಮನಗರದ ಮಾವಿನ ಹಣ್ಣಿಗೆ ದೇಶ-ವಿದೇಶಗಳಲ್ಲೂ ಬೇಡಿಕೆ| ಮೊದಲು ರಾಮನಗರ ಜಿಲ್ಲೆಯ ಮಾವು ಮಾರಾಟ| ಬಳಿಕ ಹಾವೇರಿ, ಧಾರವಾಡ, ಕೋಲಾರ ಮಾವೂ ಲಭ್ಯ| ಮಾವು ಅಭಿವೃದ್ಧಿ ಮಂಡಳಿಯಿಂದ ಕಂಪನಿ ಜತೆ ಮಾತುಕತೆ|
ಎಂ.ಅಫ್ರೋಜ್ ಖಾನ್
ರಾಮನಗರ(ಮಾ.29): ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳ ಪೈಕಿ ರೇಷ್ಮೆ ನಗರಿ ರಾಮನಗರ ಜಿಲ್ಲೆ ಕೂಡ ಒಂದು. ಇಲ್ಲಿನ ಮಾವನ್ನು ಅಮೆಜಾನ್ ಮೂಲಕ ಮಾರಾಟಕ್ಕೆ ಅವಕಾಶ ನೀಡಿ ಆನ್‌ಲೈನ್ ಸ್ಪರ್ಶ ನೀಡಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ.
ರಾಮನಗರದ ಮಾವಿನ ಹಣ್ಣಿಗೆ ದೇಶ-ವಿದೇಶಗಳಲ್ಲೂ ಬೇಡಿಕೆ ಇದೆ. ಹಾಗಾಗಿ ಇಲ್ಲಿನ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ಹಾಗೂ ಮಾವು ಎಲ್ಲೆಡೆ ಸಿಗುವಂತೆ ಮಾಡುವ ಉದ್ದೇಶದಿಂದ ಅಮೆಜಾನ್ ಮೂಲಕ ನೇರ ಮಾರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ಮೊದಲಿಗೆ ರಾಮನಗರದ ಮಾವು ಮಾರುಕಟ್ಟೆಗೆ ಬರುತ್ತದೆ. ಹೀಗಾಗಿ ಆರಂಭದಲ್ಲಿ ರಾಮನಗರ ಮಾವನ್ನು ಮಾರಾಟ ಮಾಡುವ ಕುರಿತು ಅಮೆಜಾನ್ ಕಂಪನಿಯೊಂದಿಗೆ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಅಮೆಜಾನ್ ಕಂಪನಿಯವರು ವಿಧಿಸಿರುವ ಷರತ್ತುಗಳನ್ನು ಪೂರೈಸಿದಲ್ಲಿ ರಾಮನಗರದ ನಂತರ ಉಳಿದ ಜಿಲ್ಲೆಗಳ ಮಾವು ಮಾರಾಟಕ್ಕೂ ಆನ್‌ಲೈನ್ ಮಾರುಕಟ್ಟೆ ಸಿಗಲಿದೆ.
100 ಕೋಟಿಯ ಆಹಾರ ಸಾಮ್ರಾಜ್ಯ ಕಟ್ಟಿದ ವಡಪಾವ್ ಮಾರುವ ಹುಡುಗ
ನೇರ ಮಾರಾಟಕ್ಕೆ ಅವಕಾಶ:
ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಮಾವು ಸಾಗಣೆ ಕಷ್ಟವಾಯಿತು. ಇದರಿಂದ ಬೆಳೆಗಾರರು ನಷ್ಟಅನುಭವಿಸಿದರು. ಈ ಬಾರಿ ಮಾವು ಅಭಿವೃದ್ಧಿ ಮಂಡಳಿಯಿಂದ ಆನ್‌ಲೈನ್ ಮಾತ್ರವಲ್ಲದೆ ನೇರ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ರಫ್ತು ಉದ್ದಿಮೆದಾರರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದ್ದು, ರಾಮನಗರದಿಂದ ಮಾವನ್ನು ನೇರವಾಗಿ ರಫ್ತು ಮಾಡಲು ಆಸಕ್ತಿ ಹೊಂದಿದ್ದಾರೆ. ಅವರೊಂದಿಗೆ ಎರಡ್ಮೂರು ಸಭೆಗಳು ನಡೆದಿವೆ. ನಿರೀಕ್ಷಿತ ಪ್ರಮಾಣದಷ್ಟು ಮಾವು ಸಿಗದಿರುವ ಕಾರಣ ಏಪ್ರಿಲ್ 2ನೇ ವಾರದಲ್ಲಿ ರಫ್ತಿಗೆ ಅವಕಾಶ ಸಿಗಲಿದೆ. ಅಲ್ಲದೆ, ತೋಟಗಾರಿಕಾ ಇಲಾಖೆ ವತಿಯಿಂದ ಜಿಲ್ಲಾಮಟ್ಟದಲ್ಲಿ ಮಾವು, ತೆಂಗು ಬೆಳೆಗಾರರ ಉತ್ಪಾದಕರ ಕಂಪನಿ ಹಾಗೂ ಏಳು ರೈತರ ಮಾವು ಉತ್ಪಾದಕರ ಕಂಪನಿ ಸ್ಥಾಪಿಸಲಾಗಿದೆ. ಇವುಗಳನ್ನು ಒಗ್ಗೂಡಿಸಿ ಮಾರುಕಟ್ಟೆಕಲ್ಪಿಸಿಕೊಡುವ ಚಿಂತನೆಯೂ ನಡೆದಿದೆ.