ನೀವು ಡಿಮ್ಯಾಟ್ ಖಾತೆ ಹೊಂದಿದ್ದೀರಾ? ಮಾ.31 ರೊಳಗೆ ನಾಮಿನಿ ವಿವರ ಸಲ್ಲಿಸದಿದ್ರೆ ಖಾತೆ ಸ್ಥಗಿತ
ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ಹೊಂದಿರೋರು ಮಾ.31ರೊಳಗೆ ಕಡ್ಡಾಯವಾಗಿ ನಾಮಿನಿ ಮಾಹಿತಿ ಸಲ್ಲಿಕೆ ಮಾಡುವಂತೆ ಸೆಬಿ ತಿಳಿಸಿದೆ. ಅಷ್ಟೇ ಅಲ್ಲ, ಒಂದು ವೇಳೆ ನಾಮಿನಿ ಮಾಹಿತಿ ಸಲ್ಲಿಕೆ ಮಾಡದಿದ್ರೆ ಅಂಥ ಖಾತೆಗಳನ್ನು ಸ್ಥಗಿತಗೊಳಿಸೋದಾಗಿ ಕೂಡ ತಿಳಿಸಿದೆ. ಹಾಗಾದ್ರೆ ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಮಾ.15): ನೀವು ಡಿ ಮ್ಯಾಟ್ ಖಾತೆ ಹೊಂದಿದ್ದರೆ ಮಾ.31ರೊಳಗೆ ಕಡ್ಡಾಯವಾಗಿ ನಾಮಿನಿ ಸೇರಿಸಬೇಕು. ಇಲ್ಲವಾದರೆ ನಿಮ್ಮ ಡಿಮ್ಯಾಟ್ ಖಾತೆ ಸ್ಥಗಿತಗೊಳ್ಳಲಿದೆ. ಎಲ್ಲ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆದಾರರು ನಾಮಿನಿ ಸೇರಿಸೋದನ್ನು ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಡ್ಡಾಯಗೊಳಿಸಿದ್ದು, ಗಡುವು ಕೂಡ ವಿಧಿಸಿದೆ. ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸಲು ಈ ಹಿಂದೆ 2022ರ ಮಾರ್ಚ್ 31ರ ಗಡುವನ್ನು ಸೆಬಿ ನೀಡಿತ್ತು. ಆದರೆ, ನಂತರ ಈ ಗಡುವನ್ನು ಒಂದು ವರ್ಷ ವಿಸ್ತರಿಣೆ ಮಾಡಲಾಗಿತ್ತು. ಅನೇಕ ಸ್ಟಾಕ್ ಹೋಲ್ಡರ್ ಗಳ ಮನವಿ ಮೇರೆಗೆ ಸೆಬಿ ಈ ಗಡುವು ವಿಸ್ತರಣೆ ಮಾಡಿತ್ತು. ಹೀಗಾಗಿ ಈ ಬಾರಿ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸಲು ಹೂಡಿಕೆದಾರರಿಗೆ ಕೊನೆಯ ಅವಕಾಶವನ್ನು ಸೆಬಿ ನೀಡಿದೆ. ನೀವು ಡಿಮ್ಯಾಟ್ ಖಾತೆ ಹೊಂದಿದ್ದು, ಇನ್ನೂ ನಾಮಿನಿ ಸೇರಿಸದಿದ್ರೆ ಮಾ.31ರ ತನಕ ಕಾಯುವ ಬದಲು ಈಗಲೇ ಮಾಡಿ ಮುಗಿಸಿ. ಹಾಗಾದ್ರೆ ನಾಮಿನಿ ಸೇರ್ಪಡೆಗೆ ಸಂಬಂಧಿಸಿ ಸೆಬಿ ಹೊರಡಿಸಿರುವ ಸುತ್ತೋಲೆಯಲ್ಲಿ ಏನಿತ್ತು? ಡಿಮ್ಯಾಟ್ ಖಾತೆಗೆ ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ.
2021ರ ಜುಲೈನಲ್ಲಿ ಸೆಬಿ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಸೇರ್ಪಡೆಗೆ ಆಯ್ಕೆ ನೀಡಿತ್ತು. ಈಗಾಗಲೇ ಇರುವ ಹೂಡಿಕೆದಾರರು 2021ರ ಜುಲೈನಲ್ಲಿ ಸುತ್ತೋಲೆ ಹೊರಡಿಸುವ ಮುನ್ನ ನಾಮಿನಿ ಮಾಹಿತಿಗಳನ್ನು ನೀಡಿದ್ರೆ ಅವರು ಅದನ್ನು ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ಸೆಬಿ ತಿಳಿಸಿತ್ತು. ಇನ್ನು ನಾಮಿನಿ ಮಾಹಿತಿಗಳನ್ನು ಈ ತನಕ ಸಲ್ಲಿಕೆ ಮಾಡದ ಹೂಡಿಕೆದಾರರಿಗೆ ಮಾ.31ರ ತನಕ ಅವಕಾಶವಿದೆ ಎಂದು ತಿಳಿಸಿತ್ತು. ಇನ್ನೂ ನಾಮಿನಿ ಸೇರಿಸದ ಹೂಡಿಕೆದಾರರು ತನ್ನ ನಾಮಿನಿ ಸಲ್ಲಿಕೆ ಮಾಡಬಹುದು ಅಥವಾ ಸ್ಟಾಕ್ ಬ್ರೋಕರ್ಸ್ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ನಲ್ಲಿ 2-ಫ್ಯಾಕ್ಟರ್ ದೃಢೀಕರಣ ಮೂಲಕ ನಾಮಿನಿ ಸಲ್ಲಿಕೆ ಮಾಡಬಹುದು. ಇಲ್ಲವೆ ಇಂಥ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಕೂಡ ನಾಮಿನಿ ಸಲ್ಲಿಕೆ ಮಾಡಲು ಅವಕಾಶವಿದೆ. ನಾಮಿನಿ ಅಥವಾ ಅಪ್ರಾಪ್ತ ವಯಸ್ಸಿನ ನಾಮಿನಿಯ ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ಗುರುತಿನ ಮಾಹಿತಿಗಳನ್ನು ನೀಡುವುದು ಅವರ ಆಯ್ಕೆಗೆ ಬಿಟ್ಟಿದ್ದು.
EPFO:ನಿವೃತ್ತಿ ಬಳಿಕ ಪ್ರತಿ ತಿಂಗಳು 7071ರೂ. ಪಿಂಚಣಿ ಪಡೆಯೋದು ಹೇಗೆ? ಇಪಿಎಫ್ ಕ್ಯಾಲ್ಕುಲೇಟರ್ ಬಳಕೆ ಹೇಗೆ?
ಹೊಸ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳನ್ನು ತೆರೆಯುತ್ತಿರುವ ಹೂಡಿಕೆದಾರರು ಕಡ್ಡಾಯವಾಗಿ ನಾಮಿನಿ ಮಾಹಿತಿ ನೀಡಬೇಕು. ಘೋಷಣೆ ಅರ್ಜಿ ಮೂಲಕ ನಾಮಿನಿ ಮಾಹಿತಿ ನೀಡಬಹುದು. ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳಿಗೆ ನಾಮಿನಿ ಸೇರ್ಪಡೆ ಮಾಡುವಾಗ ಅರ್ಜಿಗೆ ಖಾತೆದಾರರು ಭೌತಿಕ ಸಹಿ ಮಾಡುವ ಕಾರಣ ಸಾಕ್ಷಿಗಳ ಅಗತ್ಯವಿಲ್ಲ. ಇ-ಸಹಿ ಸೌಲಭ್ಯ ಬಳಸಿಕೊಂಡು ಆನ್ ಲೈನ್ ನಲ್ಲಿ ಘೋಷಣೆ ಅರ್ಜಿಗಳ ಸಲ್ಲಿಕೆಗೆ ಕೂಡ ಸಾಕ್ಷಿ ಬೇಕಾಗಿಲ್ಲ. ಆದರೆ, ಖಾತೆದಾರರು ಸಹಿ ಬದಲು ಹೆಬ್ಬೆಟ್ಟು ಬಳಸಿದ್ರೆ ಆಗ ಸಾಕ್ಷಿದಾರರ ಸಹಿ ಅಗತ್ಯ.
ಹೂಡಿಕೆ ಮಾಡದೆ ಆದಾಯ ತೆರಿಗೆ ಉಳಿಸೋದು ಹೇಗೆ? ಇಲ್ಲಿವೆ 5 ಟಿಪ್ಸ್
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಹೇಗೆ?
ಹಂತ: 1: ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಆಗಿ
ಹಂತ 2:ಪ್ರೊಫೈಲ್ ವರ್ಗದಲ್ಲಿ 'My nominees'ಆಯ್ಕೆ ಮಾಡಿ. ಈಗ ನಾಮಿನಿ ಮಾಹಿತಿ ಪುಟ ತೆರೆದುಕೊಳ್ಳುತ್ತದೆ.
ಹಂತ 3: Ig 'add nominee' ಅಥವಾ 'opt-out'ಆಯ್ಕೆ ಮಾಡಿ.
ಹಂತ 4: ನಾಮಿನಿ ಮಾಹಿತಿ ಭರ್ತಿ ಮಾಡಿ ಹಾಗೂ ನಾಮಿನಿ ಐಡಿ ಪ್ರೂಫ್ ಅಪ್ಲೋಡ್ ಮಾಡಿ. ಆ ಬಳಿಕ ನಾಮಿನಿಗೆ ನೀವು ನೀಡಬಯಸುವ ಷೇರಿನ ಪ್ರಮಾಣವನ್ನು 'percentage' ಫೀಲ್ಡ್ ನಲ್ಲಿ ನಮೂದಿಸಿ.
ಹಂತ 5: ಆಧಾರ್ ಒಟಿಪಿ ಬಳಸಿಕೊಂಡು ದಾಖಲೆಗೆ ಇ-ಸಹಿ ಮಾಡಿ.
ಹಂತ 6: ನಾಮಿನಿ ಮಾಹಿತಿಯನ್ನು ಪರಿಶೀಲಿಸಿ ಡಿಮ್ಯಾಟ್ ಖಾತೆಗೆ 24-48 ಗಂಟೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ.