ಕೋಲಾರ (ಮೇ.14):  ಕೊರೋನಾ 2ನೇ ಅಲೆ ತಡೆವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಸೆಮಿ ಲಾಕ್‌ಡೌನ್‌ನಿಂದಾಗಿ ಉದ್ಯೋಗ, ಆದಾಯವಿಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಸಾಲದ ಕಂತಿನ ಪಾವತಿ ಅವಧಿಯನ್ನು 3 ತಿಂಗಳು ಮುಂದೂಡುವಂತೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ರಾಜ್ಯಾದ್ಯಂತ ಸ್ತ್ರೀ ಶಕ್ತಿ ಸ್ವಸಹಾಯ ಸಂಘದಲ್ಲಿ ತೊಡಗಿಸಿಕೊಂಡ ಬಡ, ಮಧ್ಯಮ ವರ್ಗದ ಸಾವಿರಾರು ಮಹಿಳೆಯರು ಲಾಕ್‌ಡೌನ್‌ ವೇಳೆ ಕುಟುಂಬ ನಿರ್ವಹಣೆಗೇ ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲದ ಕಂತು ಪಾವತಿಸುವಂತೆ ಒತ್ತಾಯಿಸಿದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮೊಬೈಲ್ ಆಪ್ ನಲ್ಲಿ ಸಾಲ ಮಾಡಿಕೊಂಡ್ರೆ ಅಷ್ಟೆ.. ನಿಮ್ಮ ಕತೆ ಮುಗೀತು! .

ಸಾಲದ ಕಂತು ಮರುಪಾವತಿಗೆ ಬ್ಯಾಂಕ್‌ ಶಾಖೆಗಳಿಂದ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ನಗರದ ವಿವಿಧ ವಾರ್ಡುಗಳ ಸ್ತ್ರೀಶಕ್ತಿ ಮಹಿಳಾ ಸಂಘಗಳ ಸದಸ್ಯೆಯರು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಮನವಿ ಮಾಡಿದರು. ಈಗ ನಾವೇನೂ ಸಾಲಮನ್ನಾ ಮಾಡಿ ಎಂದು ಕೇಳುತ್ತಿಲ್ಲ. ಕೊರೋನಾ ಸೆಮಿ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿರುವುದರಿಂದ ಸಾಲದ ಕಂತು ಪಾವತಿ ಮೂರು ತಿಂಗಳು ಮುಂದೂಡಲಷ್ಟೇ ಕೇಳುತ್ತಿದ್ದೇವೆ. ದಯವಿಟ್ಟು ಇದನ್ನು ಅಧಿಕಾರದಲ್ಲಿರುವವರಿಗೆ ಮನವರಿಕೆ ಮಾಡಿ ಎಂದು ಕೋರಿದರು.

ಕೊರೋನಾದಿಂದ ಸಾವನ್ನಪ್ಪಿದರೆ ಉದ್ಯೋಗಿ ಕುಟುಂಬಕ್ಕೆ ಎರಡು ವರ್ಷದ ವೇತನ

ಸರ್ಕಾರಕ್ಕೆ ಮನವರಿಕೆ ಭರವಸೆ:  ಮಹಿಳೆಯರ ಮನವಿಗೆ ಉತ್ತರಿಸಿದ ಬ್ಯಾಲಹಳ್ಳಿ ಗೋವಿಂದಗೌಡ ಅವರು ಸಾಲದ ಕಂತು ಮುಂದೂಡುವ ಅಧಿಕಾರ ಡಿಸಿಸಿ ಬ್ಯಾಂಕಿಗಿಲ್ಲ. ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಮಾಡಬೇಕು. ನಿಮ್ಮ ಆತಂಕ, ನೋವನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಅಪೆಕ್ಸ್‌ ಬ್ಯಾಂಕ್‌ ಮೂಲಕ ಮತ್ತೊಮ್ಮೆ ಮನವರಿಕೆ ಮಾಡಿಕೊಡುತ್ತೇವೆ. ಆದರೆ ಸರ್ಕಾರ ಕಂತಿನ ಪಾವತಿ ಅವಧಿ ಮುಂದೂಡದಿದ್ದರೆ ಬ್ಯಾಂಕ್‌ ಏನೂ ಮಾಡಲು ಸಾಧ್ಯವಿಲ್ಲ. ನೀವು ಕಂತು ಪಾವತಿಸಲೇಬೇಕು. ಇಲ್ಲವಾದರೆ ಬಡ್ಡಿಯ ಹೊರೆ ನಿಮ್ಮ ಮೇಲೆ ಬೀಳುತ್ತದೆ ಎಂದು ವಿವರಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona