ನಿಮ್ಮ ಟ್ಯಾಕ್ಸ್ ರಿಫಂಡ್ ಮೇಲೂ ಖದೀಮರ ಕಣ್ಣು! ರಿಫಂಡ್ ಹೆಸರಲ್ಲಿ ಹಣ ನುಂಗುವ ಖದೀಮರು! ಆನ್ ಲೈನ್ ಮೂಲಕ ಸುಳ್ಳು ಸಂದೇಶ ರವಾನೆ! ಎಸ್‌ಎಂಎಸ್‌, ಇಮೇಲ್ ಮೂಲಕ ಮೋಸ! ಖಾತೆಯಲ್ಲಿರುವ ಹಣ ನುಂಗುತ್ತಿರುವ ಖದೀಮರು

ನವದೆಹಲಿ(ಆ.7): ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಣೆಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಂತೆ ಈ ತಿಂಗಳ ಆಗಸ್ಟ್ ೩೧ ರವೆರೆಗೂ ನೀವು ನಿಮ್ಮ ಆದಾಯ ತೆರಿಗೆ ಸಲ್ಲಿಸಬಹುದಾಗಿದೆ.

ಹಿಂದಿನ ವರ್ಷದ ಆದಾಯಕ್ಕೆ ಸಂಬಂಧಿಸಿದಂತೆ ಮೂಲದಲ್ಲೇ ತೆರಿಗೆ (ಟಿಡಿಎಸ್‌) ಕಟ್‌ ಆಗಿದ್ದಿರೆ, ಸೂಕ್ತ ಉಳಿತಾಯ ದಾಖಲೆಗಳನ್ನು ತೋರಿಸಿದ್ದರೆ, ಟ್ಯಾಕ್ಸ್ ರಿಫಂಡ್ ಆಗುತ್ತದೆ. ಆದರೆ ಆನ್ ಲೈನ್ ಖದೀಮರು ಇದೀಗ ನಿಮ್ಮ ಟ್ಯಾಕ್ಸ್ ರಿಫಂಡ್ ಮೇಲೂ ತಮ್ಮ ವಕ್ರದೃಷ್ಟಿ ಬೀರಿದ್ದಾರೆ. 

ಆನ್ ಲೈನ್ ವಂಚಕರು ಟ್ಯಾಕ್ಸ್ ರಿಫಂಡ್ ಕುರಿತ ಸಂದೇಶದ ಆಮಿಷ ತೋರಿಸುತ್ತಿದ್ದು, ಎಸ್‌ಎಂಎಸ್‌ ಸಂದೇಶ ಅಥವಾ ಇಮೇಲ್‌ ಮೂಲಕ ವಂಚನೆಗೆ ಕಾದು ಕುಳಿತಿದ್ದಾರೆ.

ನೀವು ಸಲ್ಲಿಸಿರುವ ಆದಾಯ ತೆರಿಗೆಗೆ ಟ್ಯಾಕ್ಸ್ ರಿಫಂಡ್ ಅನುಮೋದನೆಯಾಗಿದ್ದು, ಅದನ್ನು ಶೀಘ್ರವೇ ನಿಮ್ಮ ಬ್ಯಾಂಕ್‌ ಖಾತೆಗೆ ಕ್ರೆಡಿಟ್‌ ಮಾಡಲಾಗುತ್ತದೆ. ತಕ್ಷಣವೇ ಈ ಲಿಂಕ್‌ ಕ್ಲಿಕ್‌ ಮಾಡಿ, ನಿಮ್ಮ ಬ್ಯಾಂಕ್‌ ವಿವರಗಳನ್ನು ನೀಡಿ ಎಂಬ ಸಂದೇಶ ರವಾನಿಸಲಾಗುತ್ತಿದೆ. 

ಇದನ್ನು ನಂಬಿದ ತೆರಿಗೆದಾರರು ಲಿಂಕ್ ಕ್ಲಿಕ್ ಮಾಡಿ ತಮ್ಮ ಬ್ಯಾಂಕ್ ಡಿಟೇಲ್ಸ್ ತುಂಬುವ ಮೂಲಕ ತಮ್ಮ ಖಾತೆಯಲ್ಲಿರುವ ಹಣ ಕಳೇದುಕೊಂಡಿರುವ ಪ್ರಕರಣಗಳು ದಾಖಲಾಗಿದೆ. 

ಅಲ್ಲದೇ ಖದೀಮರು ಕಳುಹಿಸುವ ಲಿಂಕ್ ಕೂಡ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂತೆಯೇ ಇದ್ದು, ಇದರಿಂದ ತೆರಿಗೆದಾರರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ.