Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
*ಕಳೆದ 24 ಗಂಟೆಗಳಲ್ಲಿ ಶೇ.2.08 ಕುಸಿತ ದಾಖಲಿಸಿದ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ
*ಮಂಗಳವಾರ ಮಾರುಕಟ್ಟೆಯ ಆರಂಭಿಕ ಅವಧಿಯಲ್ಲಿ ಯಾವುದೇ ಚೇತರಿಕೆ ಕಾಣದ ಕ್ರಿಪ್ಟೋ ಕರೆನ್ಸಿಗಳು
* ಶೇ.3.04 ಕುಸಿತ ದಾಖಲಿಸಿರುವ ಬಿಟ್ ಕಾಯಿನ್
ನವದೆಹಲಿ (ಮೇ 24): ಕಳೆದ 24 ಗಂಟೆಗಳಲ್ಲಿ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಮತ್ತೆ ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆ ಕ್ಯಾಪ್ ಕಳೆದ 24 ಗಂಟೆಗಳಲ್ಲಿ ಶೇ.2.08 ಕುಸಿತ ಕಂಡಿದ್ದು, ಒಟ್ಟು ಮಾರುಕಟ್ಟೆ ಗಾತ್ರ 1.26 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟಿದೆ. ಮಂಗಳವಾರ (ಮೇ 24) ಆರಂಭದ ಅವಧಿಯಲ್ಲಿ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಏರಿಕೆಯ ಹೊರತಾಗಿಯೂ ಕ್ರಿಪ್ಟೋ ಕರೆನ್ಸಿಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ. ಟೆರ್ರಾ ಕುಸಿತದ ಹೊಡೆತದಿಂದ ಕ್ರಿಪ್ಟೋ ಕರೆನ್ಸಿಮಾರುಕಟ್ಟೆ ಇನ್ನೂ ಹೊರಬಂದಿಲ್ಲ. ಏರಿಕೆಯಾಗುತ್ತಿರುವ ಹಣದುಬ್ಬರ ಹಾಗೂ ಆರ್ಥಿಕ ಹಿಂಜರಿತದ ಹೊಡೆತದಿಂದ ಕ್ರಿಪ್ಟೋ ಮಾರುಕಟ್ಟೆಗೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಂಗಳವಾರ ಬಹುತೇಕ ಕ್ರಿಪ್ಟೋ ಕರೆನ್ಸಿಗಳು ಮೌಲ್ಯ ಕಳೆದುಕೊಂಡಿದ್ದು, ಕೆಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಆದ್ರೆ ಬಿಎನ್ ಬಿ (BNB) ಹಾಗೂ ಟ್ರೊನ್ (Tron) ಮಾತ್ರ ಏರಿಕೆ ದಾಖಲಿಸಿವೆ. ಅದರಲ್ಲೂ ಬಿಎನ್ ಬಿ (BNB) ಶೇ.2.03 ಏರಿಕೆ ದಾಖಲಿಸುವ ಮೂಲಕ ಗ್ರೀನ್ ಟೋಕನ್ ಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನು ವಿಶ್ವದ ಅತೀದೊಡ್ಡ ಹಾಗೂ ಜನಪ್ರಿಯ ಕ್ರಿಪ್ಟೋ ಕರೆನ್ಸಿ ಎಂಬ ಹೆಗ್ಗಳಿಕೆ ಗಳಿಸಿರುವ ಬಿಟ್ ಕಾಯಿನ್ (Bitcoin) ಹಾಗೂ ಇನ್ನೊಂದು ಪ್ರಮುಖ ಕ್ರಿಪ್ಟೋ ಕರೆನ್ಸಿ ಎಥೆರಿಯಮ್ (Ethereum) ಭಾರೀ ಕುಸಿತ ಕಂಡಿವೆ. ಬಿಟ್ ಕಾಯಿನ್ ಶೇ.3.04 ಕುಸಿತ ಕಂಡು 29,208 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. ಎಥೆರಿಯಮ್ ಕೂಡ ಶೇ.2.04 ಇಳಿಕೆ ಕಂಡುಬಂದಿದ್ದು, ಸದ್ಯ 1,984 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದೆ. ಅವಲಂಚೆ (Avalanche) ಹಾಗೂ ಸೊಲಾನ (Solana) ತಲಾ ಶೇ.5ರಷ್ಟು ಕುಸಿತ ಕಂಡಿವೆ.
ಟೈಮ್ ವಿಶ್ವದ 100 ಪ್ರಭಾವಿಗಳಲ್ಲಿ ಭಾರತದ ಮೂವರು
ಯುಎಸ್‌ಡಿಟಿ ಟೆಥರ್ ಮಾತ್ರ ಕಳೆದ 24 ಗಂಟೆಗಳಲ್ಲಿ ಯಾವುದೇ ಬದಲಾವಣೆ ದಾಖಲಿಸಿಲ್ಲ. ಹಾಗೆಯೇ ಯುಎಸ್ ಡಿಸಿ ಸ್ಟೇಬಲ್ ಕಾಯಿನ್‌ಗಳು (USDC stablecoins) ಶೇ. 0.01 ಇಳಿಕೆ ಕಂಡಿವೆ. ಸೊಲಾನ (Solana) ಶೇ.4.05ರಷ್ಟು ಭಾರೀ ಕುಸಿತ ಕಂಡಿದೆ. ಇನ್ನು ಎಡಿಎ ಟೋಕನ್ (ADA token) ಶೇ.3.96 ಹಾಗೂ ಎಕ್ಸ್ ಆರ್ ಪಿ ರಿಪ್ಪಲ್ (XRP Ripple) ಕಳೆದ 24 ಗಂಟೆಗಳಲ್ಲಿ ಶೇ. 2.24ರಷ್ಟು ಇಳಿಕೆ ಕಂಡಿವೆ. ಡೋಗೆ ಕಾಯಿನ್ (Dogecoin) ಶೇ.1.94ರಷ್ಟು ಕುಸಿದಿದೆ.
ಸತತ ಕುಸಿತ ದಾಖಲಿಸುತ್ತಿರುವ ಬಿಟ್ ಕಾಯಿನ್
ಬಿಟ್ ಕಾಯಿನ್ ಮೌಲ್ಯದಲ್ಲಿ ಏಪ್ರಿಲ್ ನಿಂದ ಭಾರೀ ಕುಸಿತ ಕಂಡುಬಂದಿದೆ. ಸದ್ಯ ಬಿಟ್ ಕಾಯಿನ್ 29,208 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದ್ದು, ಇದು 2021ರ ಜನವರಿ ಬಳಿಕದ ಅತ್ಯಂತ ಕಡಿಮೆ ಮಟ್ಟವಾಗಿದೆ. ಮಾರ್ಚ್ 28 ರಂದು ಅಂದರೆ ಒಂದೂವರೆ ತಿಂಗಳ ಹಿಂದೆ ಇದೇ ಬಿಟ್ ಕಾಯಿನ್ ವರ್ಷದ ಗರಿಷ್ಠ 48,234 ಡಾಲರ್‌ಗೆ ಏರಿಕೆಯಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಭಾರೀ ಕುಸಿತ ದಾಖಲಿಸುವ ಮೂಲಕ ಹೂಡಿಕೆದಾರರಿಗೆ ಆಘಾತ ನೀಡಿದೆ.
Steel Stocks Fall: ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಸ್ಟೀಲ್ ಕಂಪನಿಗಳ ಷೇರುಗಳು; ಶೇ.13.2ರಷ್ಟು ಕುಸಿದ JSW
ಜಾಗತಿಕ ಹಣದುಬ್ಬರ ಏರಿಕೆ, ರಷ್ಯಾ-ಉಕ್ರೇನ್ ಯುದ್ಧ,ಕ್ರಿಪ್ಟೋ ಕರೆನ್ಸಿ ವಿರುದ್ಧ ಹೆಚ್ಚಿದ ನಿರ್ಬಂಧ, ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಹೆಚ್ಚಳ ಮಾಡಿರೋದು ಕ್ರಿಪ್ಟೋ ಮಾರುಕಟ್ಟೆ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೇ ದಿನಗಳ ಹಿಂದೆ ಸ್ಟೇಬಲ್ ಕಾಯಿನ್ ಟೆರ್ರಾಯುಎಸ್‌ಡಿ (Terra USD) ಸಂಪೂರ್ಣ ಮೌಲ್ಯ ಕಳೆದುಕೊಂಡು 5 ಪೈಸೆಗೆ ಇಳಿಕೆಯಾಗೋ ಮೂಲಕ ಹೂಡಿಕೆದಾರರಿಗೆ ಆಘಾತ ನೀಡಿತ್ತು. ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಅನಿಶ್ಚಿತತೆ ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದೆ. ಅತ್ತ ನಷ್ಟ ಮಾಡಿಕೊಂಡು ಮಾರಾಟ ಮಾಡಲೂ ಆಗದೆ, ಇತ್ತ ದಿನೇದಿನೆ ಕುಸಿಯುತ್ತಿರುವ ಕ್ರಿಪ್ಟೋ ಕರೆನ್ಸಿಗಳನ್ನು ನೋಡಿಕೊಂಡು ಸುಮ್ಮನೆ ಕೈಕಟ್ಟಿ ಕೂರಲು ಆಗದೆ ಹೂಡಿಕೆದಾರರು ಗೊಂದಲದಲ್ಲಿ ಬಿದ್ದಿದ್ದಾರೆ.