ಇರಾನ್ ಹಾಗೂ ಇಸ್ರೇಲ್ ನಡುವಿನ ಕದನ ವಿರಾಮ ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ದರದ ಮೇಲೂ ಪರಿಣಾಮ ಬೀರಿದೆ. ಇಂದು ಕಚ್ಚಾ ತೈಲ ಬೆಲೆ ದಿಢೀರ್ ಇಳಿಕೆಯಾಗಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿನ ಈ ಬದಲಾವಣೆ ನೇರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕಾರಣವಾಗಲಿದೆ.

ನವದೆಹಲಿ (ಜೂ.24) ಇರಾನ್ ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹಲವು ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ವಾತಾವರಣ ಸಡಿಲಗೊಂಡಿದೆ. ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. ಪ್ರಮುಖವಾಗಿ ಎಲ್ಲರ ಆತಂಕ ಹೆಚ್ಚಿಸಿದ್ದ ತೈಲ ಬೆಲೆಯಲ್ಲಿ ಬದಲಾವಣೆ ಹಲವು ದೇಶಗಳನ್ನು ನಿರಾಳರನ್ನಾಗಿ ಮಾಡಿದೆ. ಪ್ರಮುಖವಾಗಿ ಇರಾನ್ ಹಾಗೂ ಇಸ್ರೇಲ್ ನಡುವಿನ ಕದನ ವಿರಾವನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಯಾಗಿದೆ. ಏರಿಕೆಯತ್ತ ಸಾಗಿದ್ದ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ.

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ

ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (WTI) ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 5.1 ರಷ್ಟು ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 65.02 ಅಮೆರಿಕನ್ ಡಾಲರ್ ಮೊತ್ತದಲ್ಲಿ ಟ್ರೇಡ್ ಆಗಿದೆ. ಇದು ಜೂನ್ 12ರಂದು ಅಂದರೆ ಇಸ್ರೇಲ್ ಇರಾನ್ ಮೇಲೆ ನೆಡೆಸಿದ ಏರ್ ಸ್ಟೈಕ್ ಬಳಿಕ ಮಾರುಕಟ್ಟೆಯಲ್ಲಿ ದಾಖಲಾಗಿದ್ದ ಬೆಲೆಗಿಂತ ಕಡಿಮೆಯಾಗಿದೆ. ಬ್ರೆಂಟ್ ಕ್ರೂಡ್ ಆಯಿಲ್ ಬೆಲೆ ಕಳೆದ ಒಂದು ರಾತ್ರಿಯಲ್ಲಿ ಶೇಕಡಾ 8 ರಷ್ಟು ಕುಸಿತ ಕಂಡಿದೆ. ಇರಾನ್ ಮೇಲೆ ಭಾನುವಾರ ಅಮರಿಕ ಬಾಂಬ್ ದಾಳಿಸಿ ನಡೆಸದ ಬಳಿಕ ಇರಾನ್ ಪ್ರತೀಕಾರ ಮಾತನ್ನಾಡಿತ್ತು. ಇಷ್ಟೇ ಅಲ್ಲ ಹೊರ್ಮುಜ್ ಜಲಸಂಧಿ ಮುಚ್ಚುವ ಬಗ್ಗೆಯೂ ಎಚ್ಚರಿಕೆ ನೀಡಿತ್ತು. ಇದರಿಂದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಆಯಿಲ್ ಪ್ರತಿ ಬ್ಯಾರೆಲ್ ಬೆಲೆ 81 ಡಾಲರ್‌ಗೆ ಏರಿಕೆಯಾಗಿತ್ತು.

ಕಚ್ಚಾ ಚೈಲ ಬೆಲೆ 65 ಯುಎಸ್ ಡಾಲರ್‌ಗೆ ಇಳಿಕೆ ಸಾಧ್ಯತೆ

ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಬಳಿಕವೂ ಇರಾನ್ ಮಿಸೈಲ್ ನೇರವಾಗಿ ಇಸ್ರೇಲ್ ಟಾರ್ಗೆಟ್ ಮಾಡಿತ್ತು. ಈ ದಾಳಿಯಲ್ಲಿ ಇಸ್ರೇಲ್‌ನ ಮೂವರು ನಾಗರೀಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಡೋನಾಲ್ಡ್ ಟ್ರಂಪ್ ಕದನ ವಿರಾಮ ಒಪ್ಪಂದ ಚಾಲ್ತಿಯಲ್ಲಿದೆ. ಇದರ ನಡುವೆ ಇಸ್ರೇಲ್ ಹಾಗೂ ಇರಾನ್ ಇಬ್ಬರೂ ದಾಳಿ ಮಾಡದಂತೆ ಟ್ರಂಪ್ ಸೂಚಿಸಿದ್ದಾರೆ. ಕದನ ವಿರಾಮ ಒಪ್ಪಂದ ಉಲ್ಲಂಘಿಸಬಾರದು ಎಂದಿದ್ದಾರೆ. ಸಂಪೂರ್ಣ ಕದನ ವಿರಾಮ ಜಾರಿಯಾದರೆ ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರಿಸುಮಾರು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಅಮೆರಿಕನ್ ಡಾಲರ್ ಆಗಲಿದೆ ಎಂದಿದ್ದಾರೆ. ಇರಾನ್ ಇಸ್ರೇಲ್ ಯುದ್ಧ, ಹೊರ್ಮುಜ್ ಜಲಸಂಧಿ ಮುಚ್ಚವ ನಿರ್ಧಾರಗಳಿಂದ ಈ ಬೆಲೆ 75 ಅಮರಿಕನ್ ಡಾಲರ್‌ಗೆ ಏರಿಕೆಯಾಗಿತ್ತು.

ಹೊರ್ಮುಜ್ ಜಲಸಂಧಿ ಮುಚ್ಚುವ ಆತಂಕದಿಂದ ದಿಢೀರ್ ಕದನವಿರಾಮ ಚರ್ಚೆ

ಇರಾನ್ ನ್ಯೂಕ್ಲಿಯರ್ ಸ್ಥಾವರ ಮೇಲೆ ಅಮೆರಿಕ ನಡೆಸಿದ ದಾಳಿಗೆ ಇರಾನ್ ಕೆರಳಿತ್ತು. ಇದಕ್ಕೆ ಪ್ರತೀಕಾರ ತೀರಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಹೊರ್ಮುಜು ಜಲಸಂಧಿ ಮುಚ್ಚುವುದಾಗಿ ಇರಾನ್ ಹೇಳಿತ್ತು. ಇದು ಯೂರೋಪಿಯನ್ ವ್ಯಾಪಾರ ವಹಿವಾಟು ಮಾತ್ರವಲ್ಲ, ಮಾರುಕಟ್ಟೆ ಮೇಲೂ ಭಾರಿ ಹೊಡೆತ ನೀಡುತ್ತಿತ್ತು. ಹೊರ್ಮುಜು ಜಲಸಂಧಿ ಮುಚ್ಚಿದರೆ ಹಲವು ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿತ್ತು. ಇದರ ನಡುವೆ ಕದನ ವಿರಾಮ ಘೋಷಣೆಯಿಂದ 12 ದಿನಗಳ ಯುದ್ಧ ಅಂತ್ಯಗೊಂಡಿತ್ತು. ಇತ್ತ ಇರಾನ್ ನಾವು ಯಾರಿಗೂ ಶರಣವಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. ಇತ್ತ ಇಸ್ರೇಲ್ ನಮ್ಮ ಗುರಿ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದೆ. ಈ ಮೂಲಕ ಕದನ ತಾತ್ಕಾಲಿಕ ಸ್ಥಗಿತಗೊಂಡಂತೆ ಕಾಣುತ್ತಿದೆ.