Asianet Suvarna News Asianet Suvarna News

ರಾಜ್ಯದ ಕೋಳಿ ಉದ್ಯಮಕ್ಕೆ ಕೊರೋನಾ ಬರೆ!

ರಾಜ್ಯದ ಕೋಳಿ ಉದ್ಯಮಕ್ಕೆ ಕೊರೋನಾ ಬರೆ| ಕೋಳಿ ಉದ್ಯಮಕ್ಕೆ ನಿತ್ಯ 10 ಕೋಟಿ ರೂ. ಹಾನಿ| ಖರೀದಿ ಕುಸಿತ: ಪ್ರತಿ ಕೆ.ಜಿ. 80 ರು. ನಿಂದ 50 ರು.ಗೆ ಇಳಿಕೆ| ಕೋಳಿ ಮಾಂಸದಿಂದ ಕೊರೋನಾ ಎಂಬುದು ಸುಳ್ಳು ಸುದ್ದಿ: ಕುಕ್ಕುಟ ಸಂಘ

Coronavirus Affect poultry Business In karnataka
Author
Bangalore, First Published Feb 19, 2020, 8:52 AM IST

ಬೆಂಗಳೂರು[ಫೆ.19]: ಕೊರೋನಾ ವೈರಸ್‌ ಭೀತಿ ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಕೋಳಿ ಮಾಂಸದ ಬೆಲೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೋಳಿ ಮಾಂಸ ವ್ಯಾಪಾರ ಶೇ.30ರಷ್ಟುಕುಸಿತವಾಗಿದ್ದು, ಪ್ರತಿದಿನ ಅಂದಾಜು 10 ಕೋಟಿ ರು. ನಷ್ಟವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕುಕ್ಕುಟೋದ್ಯಮ ರೈತರ ಹಾಗೂ ತಳಿ ಸಾಕಾಣಿಕೆದಾರರ ಸಂಘ (ಕೆಪಿಎಫ್‌ಬಿಎ)ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಕೋಳಿ ಮಾಂಸದಲ್ಲಿ ಕೊರೋನಾ ವೈರಸ್‌ ಇದೆ ಎಂಬ ಸುಳ್ಳು ಸುದ್ದಿಯಿಂದ ಕೋಳಿ ಸಾಕಾಣಿಕೆ ಹಾಗೂ ಮಾರಾಟ ವಲಯ ಅಪಾರ ನಷ್ಟಅನುಭವಿಸಿದೆ. ರೋಗ ಹರಡುವ ಭಯದಿಂದ ಗ್ರಾಹಕರು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೋಳಿ ಮಾಂಸ ತಿಂದರೆ ಕೊರೋನಾ ವೈರಸ್‌ ಬರುವ ಆತಂಕ ಗ್ರಾಹಕರದ್ದಾಗಿದೆ. ಒಂದೆಡೆ ಪೌಷ್ಟಿಕ ಆಹಾರದ ಕೊರತೆ, ಇನ್ನೊಂದೆಡೆ ಕೋಳಿ ಮಾರಾಟ ದರ ಇಳಿಕೆಯಿಂದ ಕೋಳಿ ಸಾಕಾಣಿಕೆದಾರರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಕೋಳಿ ಮಾಂಸ ಸೇವನೆಯಿಂದ ಕೊರೋನಾ ವೈರಸ್‌ ಹರಡುವ ಸುಳ್ಳು ವದಂತಿಯಿಂದಾಗಿ ಬಾಯ್ಲರ್‌ ಕೋಳಿ ಮಾರಾಟ ದರ ಪ್ರತಿ ಕೆ.ಜಿ. 80 ರು.ನಿಂದ 50 ರು.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಕೋಳಿ ಮಾರಾಟ ವ್ಯವಹಾರ ಶೇ.30ರಿಂದ 40ರಷ್ಟು ನಷ್ಟ ಅನುಭವಿಸಿದೆ ಎಂದು ಸಂಘದ ಸದಸ್ಯರು ಮಾಹಿತಿ ನೀಡಿದ್ದಾರೆ.

ಕುಕ್ಕುಟೋದ್ಯಮ ಕ್ಷೇತ್ರದಲ್ಲಿ ದೇಶದಾದ್ಯಂತ ಬ್ರಾಯ್ಲರ್‌ ಕೋಳಿ ಮಾಂಸ ಮಾರಾಟದಲ್ಲಿ ಪ್ರತಿದಿನಕ್ಕೆ 66 ಕೋಟಿ ರು. ನಷ್ಟವಾಗಿದ್ದರೆ, ಕರ್ನಾಟಕ ರಾಜ್ಯದಲ್ಲಿ ದಿನಕ್ಕೆ 8 ಕೋಟಿ ರು. ಆರ್ಥಿಕ ನಷ್ಟವಾಗುತ್ತಿದೆ. ಹಾಗೇ ಮೊಟ್ಟೆ(ಲೇಯರ್‌) ಕೋಳಿ ಉತ್ಪಾದನೆ ಹಾಗೂ ಮಾರಾಟದಲ್ಲಿ ದೇಶದಾದ್ಯಂತ ಪ್ರತಿದಿನ 28 ಕೋಟಿ ರು., ಕರ್ನಾಟಕದಲ್ಲಿ 2 ಕೋಟಿ ರು. ನಷ್ಟವಾಗುತ್ತಿದೆ. ಬೆಲೆ ಕುಸಿತದಿಂದ ಒಟ್ಟಾರೆ ಕರ್ನಾಟಕದಲ್ಲಿ ಪ್ರತಿದಿನ 10 ಕೋಟಿ ರು. ನಷ್ಟಉಂಟಾಗುತ್ತಿದೆ. ರಾಜ್ಯದಲ್ಲಿ ಶೇ.30ರಷ್ಟುವ್ಯಾಪಾರ ವಹಿವಾಟು ಕುಸಿತ ಕಂಡಿದೆ ಎಂದು ಕರ್ನಾಟಕ ರಾಜ್ಯ ಕುಕ್ಕುಟೋದ್ಯಮ ರೈತರ ಹಾಗೂ ತಳಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಡಾ.ಸುಶಾಂತ್‌ ರೈ ಬಿ. ತಿಳಿಸಿದ್ದಾರೆ.

ಸುಳ್ಳು ಸುದ್ದಿ:

ಕೋಳಿ ಮಾಂಸಕ್ಕೂ ಕೊರೋನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಕುಕ್ಕುಟೋದ್ಯಮ ವಲಯಕ್ಕೆ ತೊಂದರೆ ನೀಡಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಬಾರದು. ಇಂತಹ ಸುಳ್ಳು ಸುದ್ದಿ ಕುಕ್ಕುಟೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಮಾರಾಟದಲ್ಲಿ ಕುಸಿತವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios