ಭಾರತೀಯ ಉದ್ಯಮಗಳಲ್ಲಿ ಅತ್ಯಂತ ಪ್ರಮುಖ ಸಮೂಹಗಳಲ್ಲಿ ಒಂದಾದ ಅದಾನಿ ಸಮೂಹ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿತ್ತು. ಭಾರತ ಸರ್ಕಾರದೊಡನೆ ನಿಕಟ ಸಂಪರ್ಕ ಹೊಂದಿ, ಅದನ್ನು ತನ್ನ ಸ್ವಾರ್ಥಕ್ಕಾಗಿ ಅದಾನಿ ಸಮೂಹ ದುರುಪಯೋಗ ಪಡಿಸುತ್ತಿದೆ ಎಂದು ಟೀಕಾಕಾರರು ಆರೋಪಿಸುತ್ತಿದ್ದಾರೆ.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತೀಯ ಉದ್ಯಮಗಳಲ್ಲಿ ಅತ್ಯಂತ ಪ್ರಮುಖ ಸಮೂಹಗಳಲ್ಲಿ ಒಂದಾದ ಅದಾನಿ ಸಮೂಹ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಿವಾದಗಳಿಗೆ ಒಳಗಾಗಿತ್ತು. ಭಾರತ ಸರ್ಕಾರದೊಡನೆ ನಿಕಟ ಸಂಪರ್ಕ ಹೊಂದಿ, ಅದನ್ನು ತನ್ನ ಸ್ವಾರ್ಥಕ್ಕಾಗಿ ಅದಾನಿ ಸಮೂಹ ದುರುಪಯೋಗ ಪಡಿಸುತ್ತಿದೆ ಎಂದು ಟೀಕಾಕಾರರು ಆರೋಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಅವರಿಗೆ ಬೆಂಬಲ ನೀಡಿದ್ದಾರೆ, ಆ ಸಮೂಹದಲ್ಲಿ ಪಾತ್ರ ಹೊಂದಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಅದಾನಿ ಗ್ರೂಪ್ ಒಂದು ವೈವಿಧ್ಯಮಯ ಸಮೂಹವಾಗಿದ್ದು, ಇದರಲ್ಲಿ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಉತ್ಪಾದನೆ, ಹಾಗೂ ಗಣಿಗಾರಿಕೆಗಳೂ ಸೇರಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರದಿಂದ ದೊರೆತ ಬೆಂಬಲದ ಕಾರಣದಿಂದ ಅದಾನಿ ಸಮೂಹ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿದೆ.
ಅದಾನಿಯ ಅಭಿವೃದ್ಧಿ: ಅದಾನಿ ಸಮೂಹ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಹೇಗೆ ಪ್ರಮುಖ ಪಾತ್ರ ಪಡೆಯಿತು?
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಂಸ್ಥೆ ಭಾರತದಲ್ಲಿ ನಾಗರಿಕ ವಿಮಾನಯಾನ ಮೂಲಭೂತ ವ್ಯವಸ್ಥೆಗಳನ್ನು ನಿಯಂತ್ರಿಸುತ್ತದೆ. ಈ ಸಂಸ್ಥೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣಗಳ ಜವಾಬ್ದಾರಿ ನಿರ್ವಹಿಸುತ್ತದೆ. 123 ದೇಶೀಯ ವಿಮಾನ ನಿಲ್ದಾಣಗಳು, 35 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಹಾಗೂ 10 ಕಸ್ಟಮ್ಸ್ ವಿಮಾನ ನಿಲ್ದಾಣಗಳು ಸೇರಿದಂತೆ ಒಟ್ಟು 137 ವಿಮಾನ ನಿಲ್ದಾಣಗಳನ್ನು ಇದು ನಿಯಂತ್ರಿಸುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯದ ಅಂಗವಾಗಿರುವ ಎಎಐ, ವಿಮಾನ ನಿಲ್ದಾಣಗಳ ಅಭಿವೃದ್ಧಿ, ನಿರ್ವಹಣೆ ಹಾಗೂ ಬೆಳವಣಿಗೆಯ ಜವಾಬ್ದಾರಿ ಹೊಂದಿದೆ.
ಎಎಐ ದೆಹಲಿ, ಮುಂಬೈ, ಅಹ್ಮದಾಬಾದ್, ಜೈಪುರ, ಲಕ್ನೋ, ಗುವಾಹಟಿ, ಹಾಗೂ ಮಂಗಳೂರಿನ ಎಂಟು ಟರ್ಮಿನಲ್‌ಗಳನ್ನು ಖಾಸಗಿ - ಸಾರ್ವಜನಿಕ ಪಾಲುದಾರಿಕೆ (ಪಿಪಿಪಿ) ಅಡಿಯಲ್ಲಿ ನಿರ್ವಹಣೆ, ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ನೀಡಿದೆ. ಇವುಗಳಲ್ಲಿ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (ಎಇಎಲ್) ಮುಂಬೈ, ಅಹ್ಮದಾಬಾದ್, ಜೈಪುರ, ಲಕ್ನೋ, ಗುವಾಹಟಿ, ತಿರುವನಂತಪುರಂ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳ ಜವಾಬ್ದಾರಿ ಪಡೆದಿದೆ.
ಅದಾನಿ ಗ್ರೂಪ್ 2019ರಲ್ಲಿ ವಿಮಾನ ನಿಲ್ದಾಣ ಉದ್ಯಮಕ್ಕೆ ಕಾಲಿಟ್ಟಿತು. ಫೆಬ್ರವರಿ 2020ರಲ್ಲಿ ಅದಾನಿ ಸಂಸ್ಥೆ ಮೂರು ವಿಮಾನ ನಿಲ್ದಾಣಗಳಿಗೆ ಕನ್ಸೆಷನ್ ಅಗ್ರಿಮೆಂಟ್ (ಸಿಎ) ಸಹಿ ಹಾಕಿತು. ಬಳಿಕ ಅಕ್ಟೋಬರ್ 31, 2020ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಿತು. ಬಳಿಕ ನವೆಂಬರ್ 2, 2020ರಂದು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ (ಲಕ್ನೋ) ಹಾಗೂ ನವೆಂಬರ್ 7, 2020ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣ ಅಹಮದಾಬಾದ್ ಕಾರ್ಯಾಚರಣೆಯನ್ನು ಆರಂಭಿಸಿತು. ಅದಾನಿ ಏರ್‌ಪೋರ್ಟ್ಸ್ ಸಂಸ್ಥೆ ಐವತ್ತು ವರ್ಷಗಳ ಕಾಲ ಭಾರತದ ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಹಾಗೂ ಅಭಿವೃದ್ಧಿಯ ಜವಾಬ್ದಾರಿ ವಹಿಸಲಿದೆ. ಎರಡು ಪ್ರಮುಖ ವಿಮಾನ ನಿಲ್ದಾಣಗಳಾದ ಡೆಲ್ಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳನ್ನು ಎಎಎಚ್ಎಲ್ ಸಂಸ್ಥೆಗೆ 30 ವರ್ಷಗಳ ನಿರ್ವಹಣೆಗಾಗಿ ನೀಡಲಾಗಿದ್ದು, ಆದಾಯ ಹಂಚಿಕೆ ಮಾದರಿಯ ಆಧಾರದಲ್ಲಿ ಅದು ಇನ್ನೂ ಮೂವತ್ತು ವರ್ಷಗಳಿಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕನ್ಸೆಷನ್ ಅಗ್ರಿಮೆಂಟ್ ಪ್ರಕಾರವಾಗಿ, ಅಕ್ಟೋಬರ್ 14, 2021ರಂದು ಅದಾನಿ ಟ್ರಿವೇಂಡ್ರಂ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ನಿರ್ವಹಣೆ, ಕಾರ್ಯಾಚರಣೆ ಮತ್ತು ಅಭಿವೃದ್ಧಿಯನ್ನು ಆರಂಭಿಸಿತು. ನೂತನ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2024ರ ಕೊನೆಯ ವೇಳೆಗೆ ಸಿದ್ಧಗೊಳ್ಳುವ ಸಾಧ್ಯತೆಗಳಿದ್ದು, ಅದು ಅದಾನಿ ಸಮೂಹದ ಎಂಟನೇ ಕಾರ್ಯಾಚರಿಸುವ ವಿಮಾನ ನಿಲ್ದಾಣವಾಗಿರಲಿದೆ. ಈ ವಿಮಾನ ನಿಲ್ದಾಣ ಮುಂಬೈ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆಗೊಳಿಸಲು ನೆರವಾಗಲಿದೆ. ಆರಂಭದಲ್ಲಿ ಈ ನಿಲ್ದಾಣ 20 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದ್ದು, ಕ್ರಮೇಣ ಗರಿಷ್ಠ ಸಾಮರ್ಥ್ಯವಾದ ವಾರ್ಷಿಕ 90 ಮಿಲಿಯನ್ ಪ್ರಯಾಣಿಕರ ಮಟ್ಟಕ್ಕೆ ತಲುಪಲಿದೆ.
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಪ್ರಸ್ತುತ ಭಾರತದ 33% ಕಾರ್ಗೋ ಸಂಚಾರವನ್ನು ನಿಯಂತ್ರಿಸುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣಗಳ ಎರಡನೇ ಹಂತದ ಖಾಸಗೀಕರಣದಲ್ಲಿ ಖಾಸಗಿ ಸಂಸ್ಥೆಗಳಿಗೆ ನೀಡಬಹುದಾದ 25 ವಿಮಾನ ನಿಲ್ದಾಣಗಳನ್ನು ಪಟ್ಟಿ ಮಾಡಿದೆ. ಸಚಿವಾಲಯದ ಈ ಹಣಕಾಸು ಯೋಜನೆ ಚೆನ್ನೈ, ವಾರಣಾಸಿ, ಹಾಗೂ ಕೋಲ್ಕತ್ತಾದಂತಹ ದೊಡ್ಡ ವಿಮಾನ ನಿಲ್ದಾಣಗಳು ಮತ್ತು ರಾಯ್‌ಪುರ್, ಕುಷಿನಗರ್, ಜಬಲ್‌ಪುರ್ ಹಾಗೂ ಇಂದೋರ್‌ಗಳಂತಹ ಸಣ್ಣ ವಿಮಾನ ನಿಲ್ದಾಣಗಳನ್ನೂ ಒಳಗೊಂಡಿದೆ. ಸಚಿವಾಲಯ ಪ್ರಸ್ತುತ ಹರಾಜು ಪ್ರಕ್ರಿಯೆಯ ರೂಪುರೇಷೆ ನಿರ್ಣಯಿಸಲು ನಿರತವಾಗಿದ್ದು, ಈ ಯೋಜನೆಯಿಂದ 10,000 ಕೋಟಿ ರೂಗಳಿಗೂ ಹೆಚ್ಚಿನ ಆರಂಭಿಕ ಆದಾಯ ನಿರೀಕ್ಷಿಸುತ್ತಿದೆ.
ಮುಂಬೈನಿಂದ ಮ್ಯೂನಿಚ್: ಭಾರತೀಯ ವಿಮಾನ ನಿಲ್ದಾಣಗಳ ಸುತ್ತ ನಗರಗಳ ಅಭಿವೃದ್ಧಿಯ ಅದಾನಿ ಯೋಜನೆ
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಎಂದರೆ, ವಿಮಾನ ನಿಲ್ದಾಣಗಳು ಇಂದಿಗೂ ಎಎಐ ಆಸ್ತಿಗಳೇ ಆಗಿವೆ. ಆದರೆ ವಿಮಾನ ನಿಲ್ದಾಣಗಳ ಸೇವೆ ಮತ್ತು ವ್ಯವಹಾರಗಳನ್ನು ಖಾಸಗಿ ಸಂಸ್ಥೆಗಳು ಐವತ್ತು ವರ್ಷಗಳ ಕಾಲ ಆದಾಯ ಹಂಚಿಕೆಯ ಮಾದರಿಯಲ್ಲಿ ನಿರ್ವಹಿಸುತ್ತವೆ. ಈ ಒಪ್ಪಂದದ ಶರತ್ತುಗಳ ಅನ್ವಯ, ಸರ್ಕಾರ ಈ ಒಪ್ಪಂದವನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಕೊನೆಗೊಳಿಸಬಹುದು. ವಿಮಾನ ನಿಲ್ದಾಣದ ಸೇವೆಗಳು ಮತ್ತು ವ್ಯವಹಾರಗಳನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿರುವುದರಿಂದ, ಅವುಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಅಪಾರ ಪ್ರಮಾಣದ ಬಾಡಿಗೆ ವಸೂಲಿ ಮಾಡಬಹುದು, ಆಹಾರ ಬೆಲೆಗಳು ಮಾಮೂಲಿ ದರಗಳಿಗಿಂತ 2.5-4 ಪಟ್ಟು ಹೆಚ್ಚಳವಾಗಬಹುದು. ವಾಹನ ನಿಲುಗಡೆ ದರ 3-10 ಪಟ್ಟು ಹೆಚ್ಚಳ ಕಾಣಬಹುದು. ಏರ್‌ಲೈನ್ ಡಾಕಿಂಗ್ ದರ ಎರಡೂವರೆ ಪಟ್ಟು ಹೆಚ್ಚಳ ಕಂಡು, ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಈ ರೀತಿ ಆಗಬಾರದೆಂದರೆ, ಅದಕ್ಕೆ ಅದಾನಿ ಸಂಸ್ಥೆ ಬುದ್ಧಿವಂತಿಕೆಯಿಂದ ಯೋಚಿಸಿ, ದರಗಳನ್ನು ಸಾಮಾನ್ಯ ಮಟ್ಟದಲ್ಲಿಡಬೇಕು.
ಕೆಪಿಎಂಜಿ ತನ್ನ ವರದಿಯಲ್ಲಿ ಭಾರತೀಯರು ತಮ್ಮ ಪ್ರಯಾಣದಲ್ಲಿ ವಿದೇಶೀಯರಿಗೆ ಹೋಲಿಸಿದರೆ 2ರಿಂದ 3 ಪಟ್ಟು ಕಡಿಮೆ ವೆಚ್ಚ ಮಾಡುತ್ತಾರೆ ಎಂದಿದೆ. ಅದರ ಪ್ರಕಾರ, ಮುಂಬೈ ವಿಮಾನ ನಿಲ್ದಾಣ ಅತಿಹೆಚ್ಚು ವೆಚ್ಚ ಮಾಡುವ ನಿಲ್ದಾಣವಾಗಿದ್ದು, ಪ್ರತಿ ಪ್ರಯಾಣಿಕರು ತಲಾ 5.32 ಡಾಲರ್ ವೆಚ್ಚ ಮಾಡುತ್ತಾರೆ. ಪ್ರಪಂಚದಲ್ಲಿ ಅತಿಹೆಚ್ಚು ವೆಚ್ಚ ದರ ಹೊಂದಿರುವ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಲಾ 16.8 ಡಾಲರ್ ಖರ್ಚು ಮಾಡುತ್ತಾರೆ.
ಅದಾನಿ ಸಮೂಹ ಭಾರತದ 7 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ನಿರ್ವಹಿಸುತ್ತಿದ್ದು, ಭಾರತದ ವಾಯು ಸಂಚಾರದ 23% ನಿಯಂತ್ರಿಸುತ್ತದೆ ಮತ್ತು ಅರ್ಧದಷ್ಟು ದೇಶೀಯ ವೈಮಾನಿಕ ಹಾದಿಗಳನ್ನು ನೋಡಿಕೊಳ್ಳುತ್ತದೆ. ಆದರೆ ವಿಮಾನ ಭೂಸ್ಪರ್ಶ, ನಿಲುಗಡೆ, ವಸ್ತು ಸಾಗಾಣಿಕೆ, ಭೂ ನಿರ್ವಹಣೆಗಳಿಂದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್ಎಲ್) 15%ಕ್ಕಿಂತ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿಲ್ಲ. ಬಾಕಿ ಆದಾಯಗಳು ವೈಮಾನಿಕವಲ್ಲದ ಚಟುವಟಿಕೆಗಳಿಂದಲೇ ಬರುವ ನಿರೀಕ್ಷೆಗಳಿವೆ.
ಎಎಎಚ್ಎಲ್ ಆ್ಯಮ್‌ಸ್ಟರ್‌ಡಾಮ್ ಏರ್‌ಪೋರ್ಟ್ ಶಿಫೋಲ್, ಇಂಚ್ಯೋನ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಹಾಗೂ ಜೂರಿಚ್ ಏರ್‌ಪೋರ್ಟ್ ರೀತಿಯಲ್ಲಿ ಏರೋಟ್ರೊಪೋಲಿಸ್ ಯೋಜನೆಯನ್ನು ಹಾಕಿಕೊಂಡಿದೆ. ಇದರಂತೆ, ವಿಮಾನ ನಿಲ್ದಾಣದ ಸನಿಹದಲ್ಲಿ ಮ್ಯಾಡಮ್ ಟುಸ್ಯಾಡ್ಸ್ ಇದ್ದು, ಅದು ಹಲವು ನಗರಗಳ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಸಂಗ್ರಹಾಲಯಗಳಲ್ಲಿ ಪ್ರಮುಖ ಹಾಗೂ ಐತಿಹಾಸಿಕ ವ್ಯಕ್ತಿಗಳ, ಚಲನಚಿತ್ರ ಹಾಗೂ ಟಿವಿ ನಟ ನಟಿಯರ ಮೇಣದ ಪ್ರತಿಕೃತಿಗಳಿರಲಿವೆ. ಅವುಗಳೊಡನೆ, ರೈನ್‌ಫಾರೆಸ್ಟ್ ಕೆಫೆ, ಅಕ್ವೇರಿಯಂ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಆಹಾರ ಕೇಂದ್ರಗಳು, ವೈದ್ಯಕೀಯ ವ್ಯವಸ್ಥೆಗಳು, ಅದ್ದೂರಿ ವಸತಿ ವ್ಯವಸ್ಥೆಗಳು ಹಾಗೂ ಇತರ ಆಕರ್ಷಣೆಗಳಿರಲಿವೆ.
ಅದಾನಿ ಸಮೂಹ ತನ್ನ ಹೇಳಿಕೆಯಲ್ಲಿ ಒಂದು ವಿಮಾನ ನಿಲ್ದಾಣ ತಾನು ಇರುವ ಪ್ರದೇಶದ ಸ್ಥಳೀಯ ಜನರ ಅಗತ್ಯತೆಗಳನ್ನು ಪೂರೈಸಲು ಸಮರ್ಥವಾಗಿರಬೇಕು ಎಂದಿದೆ. ಅದಾನಿ ಸಮೂಹ ಸಿಟಿ/ಕಮ್ಯುನಿಟಿ ಸೈಡ್ ಡೆವಲಪ್‌ಮೆಂಟ್ (ಸಿಎಸ್‌ಡಿ) ಯೋಜನೆಯ ಮೂಲಕ, 2025-26ನೇ ಸಾಲಿನಿಂದ ಖಂಡಿತವಾಗಿಯೂ ಲಾಭ ಬರಲಿದೆ ಮತ್ತು ಅದು 2030-31ರಿಂದ ವಿಮಾನ ನಿಲ್ದಾಣ ಉದ್ಯಮದ ಪ್ರಮುಖ ಅಂಗವಾಗಲಿದೆ ಎಂದಿದೆ. ಸಿಎಸ್‌ಡಿ ವಿಮಾನ ನಿಲ್ದಾಣದ ಗಡಿಗಳಿಂದ ಸಾಕಷ್ಟು ದೂರದಲ್ಲಿರುವ ಮೆಟ್ರೋಪಾಲಿಟನ್ ಪ್ರದೇಶದ ಪ್ರಭಾವ ಹೊಂದಿರಲಿದೆ. ಈ ಪ್ರದೇಶದಲ್ಲಿ ವಾಣಿಜ್ಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಚೇರಿ ಸಮುಚ್ಚಯಗಳು, ಮನೋರಂಜನಾ ತಾಣಗಳು, ವೈದ್ಯಕೀಯ ವ್ಯವಸ್ಥೆಗಳು, ವಸತಿ ಸೌಲಭ್ಯಗಳು ಇರಲಿದ್ದು, ವಿಮಾನ ನಿಲ್ದಾಣದ ಸುತ್ತಲೂ ಒಂದು ನಗರದಂತಹ ವಾತಾವರಣ ನಿರ್ಮಿಸಲಿವೆ. ಎಎಎಚ್ಎಲ್ ವಿಮಾನ ನಿಲ್ದಾಣಗಳಲ್ಲಿ, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ ಹಾಗೂ ತ್ರಿವೇಂಡ್ರಂ ವಿಮಾನ ನಿಲ್ದಾಣಗಳು ಸೇರಿದಂತೆ, ಒಟ್ಟು 650 ಎಕರೆ ವ್ಯಾಪ್ತಿ ಹೊಂದಿದ್ದು, ಒಟ್ಟಾರೆ 200 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಈ ಸಂಖ್ಯೆಯಲ್ಲಿ 120 ಮಿಲಿಯನ್ ಜನರು ಪ್ರಯಾಣಿಕರಲ್ಲ. ಎಎಎಚ್ಎಲ್ ಬೇರೆ ಬೇರೆ ಮೂಲಗಳಾದ ಬಾಡಿಗೆ, ಆಹಾರ ಮತ್ತು ಪಾನೀಯಗಳು, ಟಿಕೆಟ್ ಮಾರಾಟದ ಮೂಲಕ ಲಾಭ ಮಾಡಲು ಉದ್ದೇಶಿಸಿದೆ. ಅದರೊಡನೆ, ಎಎಎಚ್ಎಲ್ ವ್ಯಾಪಾರ, ಹೊಟೆಲ್, ಚಿತ್ರಮಂದಿರ, ಹಾಗೂ ಕಾರ್ಯಕ್ಷೇತ್ರಗಳಲ್ಲೂ ತನ್ನ ಕಾರ್ಯಾಚರಣೆ ಆರಂಭಿಸಲಿದೆ.
ಇತರ ಕಂಪನಿಗಳಿಗೆ ಹೋಲಿಸಿದರೆ, ಅದಾನಿ ಸಮೂಹ ವೈಮಾನಿಕವಲ್ಲದ ಉದ್ಯಮಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಅದಾನಿ ಸಮೂಹದ ಆದಾಯೋತ್ತರ ಸಮಾವೇಶದಲ್ಲಿ ಓರ್ವ ಹಿರಿಯ ಅಧಿಕಾರಿ, ಸಿಎಸ್‌ಡಿ ಕಾರ್ಯಾಚರಣೆ ಮೂಲಕ ಸಮೂಹ ತನ್ನ ಹೆಚ್ಚಿನ ವಿಮಾನ ನಿಲ್ದಾಣ ಆದಾಯ, ಅಂದಾಜು 55-60% ಗಳಿಸಲಿದೆ ಎಂದಿದ್ದಾರೆ. ವೈಮಾನಿಕವಲ್ಲದ ಚಟುವಟಿಕೆಗಳಿಂದ 20-25% ಆದಾಯ ಬಂದರೆ, ವೈಮಾನಿಕ ಚಟುವಟಿಕೆಗಳು ಕೇವಲ 10-15% ಆದಾಯ ಒದಗಿಸುತ್ತವೆ.
ಭಾರತೀಯ ವಿಮಾನ ನಿಲ್ದಾಣ ಖಾಸಗೀಕರಣದಲ್ಲಿ ಅದಾನಿ ಸಮೂಹದ ವಿವಾದಾತ್ಮಕ ಬೆಳವಣಿಗೆ:
ಭಾರತೀಯ ವಿಮಾನ ನಿಲ್ದಾಣಗಳ ಖಾಸಗೀಕರಣದಲ್ಲಿ ಎಎಎಚ್ಎಲ್ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಆದರೆ, ಇತ್ತೀಚೆಗೆ ಬೆಳಕಿಗೆ ಬಂದ ಪ್ರಾದೇಶಿಕ ವಿಮಾನ ನಿಲ್ದಾಣಗಳ ಖಾಸಗೀಕರಣ ಯೋಜನೆಯಲ್ಲಿ, ಎಎಎಚ್ಎಲ್ ಮಾತೃ ಸಂಸ್ಥೆಯಾದ ಅದಾನಿ ಗ್ರೂಪ್ ಪ್ರಭಾವ ಬೀರುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆದಿವೆ.
ಅದಾನಿ ಸಮೂಹ ತನ್ನ ಹೆಚ್ಚಿನ ಗಮನವನ್ನು ಭಾರತದ ಮೇಲೇ ಕೇಂದ್ರೀಕರಿಸಿದ್ದು, 2019ರಿಂದ ಆರಂಭಿಸಿ, ಎಂಟು ಸ್ಥಳೀಯ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪಡೆದಿದೆ. ಅದರೊಡನೆ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪಾಲು ಖರೀದಿಸಿದ್ದು, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ಅದಾನಿ ಸಮೂಹ ಈಗಾಗಲೇ ಖಾಸಗೀಕರಣದ ಹೆಚ್ಚಿನ ಸಾಧ್ಯತೆಗಳೆಡೆ ಗಮನ ಹರಿಸುವುದಾಗಿ ಹೇಳಿದ್ದು, 11 ಕನ್ಸೆಷನ್ ಸಾಮರ್ಥ್ಯ ಹೊಂದಿದೆ. ದುರದೃಷ್ಟವಶಾತ್, ಅದಾನಿ ಸಮೂಹದ ಮೇಲೆ ಆರ್ಥಿಕ ದುರುಪಯೋಗದ ಆರೋಪ ಕೇಳಿಬಂದಿದ್ದು, ಅದರ ಪರಿಣಾಮವಾಗಿ ಸಮೂಹದ ಶೇರು ಮಾರುಕಟ್ಟೆ ಬೆಲೆ ಗಣನೀಯ ಕುಸಿತ ಕಂಡಿದೆ. ಈ ವಿಚಾರಗಳು ಸಂಸ್ಥೆಯ ವಿಮಾನ ನಿಲ್ದಾಣ ವ್ಯವಹಾರಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.
ಅದಾನಿ ಸಮೂಹ ಮತ್ತು ಸರ್ಕಾರದ ಜೊತೆಗಿನ ಅದರ ಸಂಬಂಧದ ಟೀಕಾಕಾರರು ಹಲವು ವಿಚಾರಗಳನ್ನು ಎತ್ತಿದ್ದು, ಅದರಲ್ಲಿ ಪರಿಸರ ಹಾನಿ ಮತ್ತು ಕಾರ್ಮಿಕ ಹಕ್ಕುಗಳ ಉಲ್ಲಂಘನೆಯೂ ಸೇರಿವೆ. ಟೀಕಾಕಾರರು ಅದಾನಿ ಸಮೂಹ ಸರ್ಕಾರದ ಜೊತೆಗಿನ ತನ್ನ ನಿಕಟ ಸಂಬಂಧದಿಂದ ಲಾಭ ಪಡೆದುಕೊಂಡಿದ್ದು, ಅದರಲ್ಲೂ ಮೋದಿ ಆಡಳಿತದಡಿ ಹಲವು ನೀತಿಗಳು ಮತ್ತು ಗುತ್ತಿಗೆಗಳು ಅದಾನಿ ಸಮೂಹದ ಪಾಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅದಾನಿ ಪರವಾಗಿದ್ದು, ಅವರ ಅಧಿಕಾರಾವಧಿಯಲ್ಲೇ ಅದಾನಿ ಸಮೂಹದ ಬೆಳವಣಿಗೆಯೂ ಸಾಧಿತವಾಗಿದೆ. ಟೀಕಾಕಾರರು ಮೋದಿಯವರು ತನ್ನ ಅಧಿಕಾರವನ್ನು, ಸ್ಥಾನವನ್ನು ಅದಾನಿಗೆ ಲಾಭ ಮಾಡಿಕೊಡಲು ಬಳಸಿದ್ದಾರೆ ಎಂದಿದ್ದು, ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ನೂತನ ಬಂದರುಗಳ ಅಭಿವೃದ್ಧಿಯಂತಹ ಯೋಜನೆಗಳು ಅದಾನಿ ಪಾಲಾಗಿರುವುದರೆಡೆ ಬೆರಳು ಚಾಚಿದ್ದಾರೆ. ಅವರು ಇಂತಹ ಗುತ್ತಿಗೆಗಳು ಸರಿಯಾದ ಕ್ರಮವನ್ನು ಅನುಸರಿಸದೆ ಅದಾನಿ ಪಾಲಾಗಿವೆ, ಅದಾನಿ ವಿಚಾರದಲ್ಲಿ ಸರ್ಕಾರ ಪಕ್ಷಪಾತದ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿಯವರು ಇಂತಹ ಆರೋಪಗಳನ್ನು ತಳ್ಳಿಹಾಕಿದ್ದು, ಸರ್ಕಾರ ಅದಾನಿ ಸಮೂಹಕ್ಕೆ ನೀಡಿರುವ ಬೆಂಬಲ ಕಂಪನಿಯ ಸಾಮರ್ಥ್ಯ ಮತ್ತು ಭಾರತೀಯ ಆರ್ಥಿಕತೆಗೆ ಅದು ನೀಡುತ್ತಿರುವ ಕೊಡುಗೆಯ ಆಧಾರಿತವಾಗಿದೆ ಅಷ್ಟೇ ಎಂದಿದ್ದಾರೆ. ಅದಾನಿ ಸಂಸ್ಥೆ ಸಾಕಷ್ಟು ಉದ್ಯೋಗ ಸೃಷ್ಟಿಸಿದೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಿದೆ. ಅದಾನಿ ಸಮೂಹದ ಯಶಸ್ಸು ಭಾರತದ ಆರ್ಥಿಕತೆ ಬೆಳವಣಿಗೆಯ ಸಂಕೇತವಾಗಿದೆ ಎಂದಿದ್ದಾರೆ.
ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿದ ಅದಾನಿ,ಅಂಬಾನಿ ಸ್ಥಾನ; ಮುಗಿಯಿತಾ ಭಾರತದ ಶ್ರೀಮಂತರ ದರ್ಬಾರ್?
ಅದಾನಿ ಸಂಸ್ಥೆ ಫಾಲೋ ಆನ್ ಪಬ್ಲಿಕ್ ಆಫರಿಂಗ್ (ಎಫ್‌ಪಿಓ) ನಿಂದ ಹಿಂದೆ ಸರಿಯುವ ನಿರ್ಧಾರ ಅದರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗಳ ಮೇಲೂ ಪ್ರಭಾವ ಬೀರಲಿದೆ. ಯಾಕೆಂದರೆ ಇದರಲ್ಲಿ ಒಂದಷ್ಟು ಪಾಲನ್ನು ವಿಮಾನ ನಿಲ್ದಾಣ ಅಭಿವೃದ್ಧಿಗೆಂದೇ ತೆಗೆದಿಡಲಾಗಿತ್ತು.
Hindenburg report on Adani: ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್!
ಇಷ್ಟೆಲ್ಲ ವಿವಾದಗಳ ಹೊರತಾಗಿಯೂ, ಅದಾನಿ ಸಮೂಹ ತನ್ನ ಕಾರ್ಯಾಚರಣೆ ವಿಸ್ತರಿಸುವಲ್ಲಿ ನಿರತವಾಗಿದೆ. ಹಲವು ಭಾರತೀಯರಿಗೂ ಅದಾನಿ ಸಂಸ್ಥೆಯ ಯಶಸ್ಸು ಹೆಮ್ಮೆಯ ವಿಚಾರವಾಗಿದೆ. ಆದರೆ, ಪ್ರಸ್ತುತ ಭಾರತ ಸರ್ಕಾರ ಮತ್ತು ವಿಶೇಷವಾಗಿ ಪ್ರಧಾನಿ ಮೋದಿಯವರೊಡನೆ ಸಂಸ್ಥೆಯ ಸಂಬಂಧದ ಕುರಿತ ಟೀಕೆ ಈ ವಿವಾದ ಅಷ್ಟು ಶೀಘ್ರವಾಗಿ ಕೊನೆಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದೆ.
