ಬೆಂಗಳೂರು (ಸೆ.08):  ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ರಾಜ್ಯಗಳ ವಾರ್ಷಿಕ ಶ್ರೇಯಾಂಕದಲ್ಲಿ ಕರ್ನಾಟಕ ಕುಸಿತ ಕಾಣಲು ಹಿಂದಿನ ಸರ್ಕಾರಗಳ ವೈಫಲ್ಯವೇ ಕಾರಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಉದ್ಯಮ ಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕ 8ರಿಂದ 17ನೇ ಸ್ಥಾನಕ್ಕೆ ಕುಸಿದಿರುವ ಕುರಿತು ಸರಣಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಬಿ.ವೈ.ವಿಜಯೇಂದ್ರ, 2018-19ನೇ ಸಾಲಿನ ವರದಿ ಆಧಾರದ ಮೇಲೆ ಉದ್ಯಮ ಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕ ಸ್ಥಾನ ಕುಗ್ಗಲು ಹಿಂದೆ ಆಡಳಿತ ನಡೆಸಿದವರ ವೈಫಲ್ಯದ ಫಲ ಎಂಬುದನ್ನು ಅಂಕಿ ಅಂಶಗಳೇ ಸಾಕ್ಷೀಕರಿಸುತ್ತಿವೆ. ನೆರೆ, ಕೊರೋನಾ ಹಾವಳಿಗಳ ನಡುವೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಲು ಅವಕಾಶ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಿಎಂ ಬಿಎಸ್‌ವೈ ಮತ್ತೊಂದು ಲಂಚ್ ಮೀಟಿಂಗ್: ಈ ಬಾರಿ ಕಾಂಗ್ರೆಸ್ ಶಾಸಕರು ಭಾಗಿ..!

ಎಷ್ಟೇ ಸಂಕಟ, ಸವಾಲುಗಳಿರಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಸದ್ದು ಮೊಳಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ನಿರ್ಮಾಣದ ಸಂಕಲ್ಪಕ್ಕೆ ಕರ್ನಾಟಕ ಅಗ್ರ ಶ್ರೇಯಾಂಕದ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತ ಶೈಲಿ ಬಲ್ಲವರದ್ದಾಗಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರ ಬದುಕು ಹಸನಾಗಬೇಕು. ರಾಜ್ಯಕ್ಕೆ ಸುಲಲಿತ ಬಂಡವಾಳವೂ ಹರಿದು ಬರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ, ರೈತ, ಉದ್ಯಮ ಸ್ನೇಹಿ ದಿಟ್ಟಹೆಜ್ಜೆ ಇರಿಸಿದೆ. 2008ರಲ್ಲಿ ಬಿಜೆಪಿ ಸರ್ಕಾರ ಉದ್ದಿಮೆ ವಹಿವಾಟಿನ ಪಟ್ಟಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿತ್ತು ಎಂಬುದನ್ನು ನೆನಪಿಸಬಯಸುವೆ ಎಂಬುದಾಗಿ ಅವರು ಟ್ವೀಟ್‌ ಮಾಡಿದ್ದಾರೆ.