ಬೆಂಗಳೂರು (ನ. 04): ಹಣಕಾಸು ಸಚಿವ ಅರುಣ್ ಜೇಟ್ಲಿ ತಾವು ಯಾವತ್ತೂ ಸರಿ ಎಂದು ತಿಳಿದುಕೊಳ್ಳುವ ಅನುಕೂಲವನ್ನು ಹೊಂದಿದ್ದಾರೆ. ಅದನ್ನು ತಿಳಿದುಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ತಮ್ಮದೇ ಸಮಯ ತೆಗೆದುಕೊಂಡರು.

ಅದು ಪಟೇಲರ ಸಮಸ್ಯೆ. ಅವರು ಜೇಟ್ಲಿಯ ಕೈಗೊಂಬೆ ವ್ಯಕ್ತಿಯಂತೆ ರಘುರಾಮ್ ರಾಜನ್‌ಗೆ ಬದಲಿಯಾಗಿ ತಮ್ಮ ಕೆಲಸ ಆರಂಭಿಸಿದರು. ರಘುರಾಮ್ ರಾಜನ್ ಸರಳವಾಗಿ ಹೊರಟು ಹೋದರು, ಅರವಿಂದ ಪನಗಾರಿಯಾ ಹೊರಟು ಹೋದರು ಮತ್ತು ಅರವಿಂದ ಸುಬ್ರಮಣಿಯಂ ಕೂಡ ಹೊರಟುಹೋದರು. ಅಂತಾರಾಷ್ಟ್ರೀಯ ಖ್ಯಾತಿಯ ರಾಜನ್ ಕಾನೂನಿನಲ್ಲಿ ಪರಿಣತರಾಗಿರುವ ಹಣಕಾಸು ಸಚಿವರಿಗಿಂತ ತುಸು ಹೆಚ್ಚಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯ ತಮಗೆ ತಿಳಿದಿದೆ ಎಂದುಕೊಂಡಿದ್ದರು.

ಆದರೆ ಸಚಿವರು ಒಬ್ಬ ರಾಜಕಾರಣಿ ಮತ್ತು ರಾಜಕಾರಣಿಗಳು ಹಣಕಾಸಿನಿಂದ ಹಿಡಿದು ರಾಕೆಟ್ ವಿಜ್ಞಾನದವರೆಗೆ ಎಲ್ಲ ವಿಷಯಗಳಲ್ಲಿ ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದನ್ನು ಅವರು ಮರೆತಿದ್ದರು. ಆರಂಭದ ದಿನಗಳಲ್ಲಿ ಊರ್ಜಿತ್ ಪಟೇಲ್ ವಿಧೇಯರಾಗಿಯೇ ಕೆಲಸ ಮಾಡಿದರು. 2 ವರ್ಷಗಳ ಹಿಂದೆ ದೇಶವು ನೋಟು ಅಮಾನ್ಯೀಕರಣದ ನಿರ್ಧಾರದಿಂದಾದ ಪರಿಣಾಮದ ಬೇಗುದಿಯಲ್ಲಿ ಗಿರಕಿ ಹೊಡೆಯುತ್ತಿದ್ದಾಗ ಕೆಲವರ ಆಕ್ರೋಶದ ಗುರಿ ಪಟೇಲರೇ ಆದರು.

ಎಟಿಎಂಗಳು ವಿಫಲವಾದಾಗ ಅವುಗಳನ್ನು ಸರಿಸ್ಥಿತಿಗೆ ತರಲು ಆರ್‌ಬಿಐ ನೀತಿಗಳು ಫಲ ನೀಡದೆ ಹೋದಾಗ ಈ ಆಕ್ರೋಶ ತೀವ್ರಗೊಂಡಿತು. ಜನರ ಕೋಪದ ಉರಿಗೆ ಪಟೇಲರು ತತ್ತರಿಸಿದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಅವರ  ತಮ್ಮ ಪ್ರತಿಷ್ಠೆಯನ್ನು ಮರಳಿ ಗಳಿಸಲು ಮಾಡಿದ ಪ್ರಯತ್ನದ ಮೊದಲ ಲಕ್ಷಣ ಗೋಚರಿಸಿದ್ದು ಕೆಲವು ತಿಂಗಳ ಹಿಂದೆ ಅವರು ಬಿಡುಗಡೆ ಮಾಡಿದ ಬ್ಯಾಂಕಿನ ವಾರ್ಷಿಕ ವರದಿಯಲ್ಲಿ ಕಂಡುಬಂತು. ಅದರಲ್ಲಿ, ಅಮಾನ್ಯ ಮಾಡಲಾದ ಹಣದಲ್ಲಿ ಶೇ 99.3 ರಷ್ಟು ವಾಪಸ್ ಬಂದಿದೆ ಎಂದು ಹೇಳಲಾಗಿತ್ತು.

ಆ ಮೂಲಕ ನೋಟು ಅಮಾನ್ಯೀಕರಣದಿಂದ ಪ್ರಯೋಜನವಾಗಿಲ್ಲ ಎಂದು ಪರೋಕ್ಷವಾಗಿ ಹೇಳಲಾಯಿತು. ಪಟೇಲರು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟರು. ವಸೂಲಾಗದ ಸಾಲವನ್ನು (ಎನ್ಪಿಎ) ಹೊಸದಾಗಿ ವ್ಯವಸ್ಥೆಗೊಳಿಸಲು ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಿದರು. ಅಥವಾ ಸರ್ಕಾರದ ಅನುಮತಿಗೆ ಕಾಯದೆ, ಸಾಲ ಬಾಕಿ ಉಳಿಸಿಕೊಂಡವರ ವಿರುದ್ಧ ದಿವಾಳಿ ಕ್ರಮಗಳನ್ನು ಜರುಗಿಸುವಂತೆ ಸೂಚಿಸಿದರು. ಈ ನಡೆಯು ಸರ್ಕಾರಕ್ಕೆ ಇರಿಸು ಮುರುಸು ಉಂಟು ಮಾಡಿತು.

ಈಗಿನ ಪ್ರಶ್ನೆಯೆಂದರೆ ಆರ್‌ಬಿಐ ಗವರ್ನರ್ ಹಣಕಾಸು ಸಚಿವಾಲಯದಲ್ಲಿ ಅತೃಪ್ತಿಗೆ ಕಾರಣರಾದರೇ ಎಂಬುದು ಅಲ್ಲ, ಆದರೆ ಈ ಅತೃಪ್ತಿ ಎಷ್ಟು ಆಳಕ್ಕೆ ಹೋಗುತ್ತದೆ ಎಂಬುದು. ಈ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಸಚಿವಾಲಯವು ಆರ್‌ಬಿಐ ಕಾಯ್ದೆಯ ಸೆಕ್ಷನ್ ಒಂದನ್ನು ಹೇರಿ ಬ್ಯಾಂಕನ್ನು ಸರ್ಕಾರದ ಅಧೀನವನ್ನಾಗಿ ಮಾಡಿಕೊಳ್ಳುತ್ತಿದೆ ಎಂಬ ಊಹೆಗಳು ರೆಕ್ಕೆ ಪಡೆದುಕೊಳ್ಳುತ್ತಿವೆ. ಆರ್‌ಬಿಐನ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಮಾಡಿದ ಭಾಷಣ ಎಲ್ಲೆಡೆ ಹಬ್ಬಿ ಈ ಬೆಂಕಿಗೆ ತುಪ್ಪ ಸುರಿಯಿತು.

ರಿಸರ್ವ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೂಡ ಮಹಾನ್ ಸಂಸ್ಥೆಯ ಒಳಗಡೆ ಯಾವ ರೀತಿಯ ಗಾಳಿ ಬೀಸುತ್ತಿದೆ ಎಂಬುದರ ಸೂಚನೆ ನೀಡಿದ್ದಾರೆ. ಆಚಾರ್ಯ ಅವರು ಸಾರ್ವಜನಿಕವಾಗಿ ಹಾಗೆ ಹೇಳುವುದಕ್ಕೆ ಬಲವಾದ ಕಾರಣಗಳೇ ಇದ್ದಿರಬೇಕು ಎಂದು ಅವರು ಹೇಳಿದ್ದಾರೆ. ಹೀಗಿರುವಾಗ, ಹಣಕಾಸು ಸಚಿವರು ಆಡಿರುವ ಮಾತುಗಳಲ್ಲಿ ಚರ್ಚೆಗೆ ಯಾವುದೇ ಅವಕಾಶವಿಲ್ಲ: ಆರ್‌ಬಿಐ ಬಹಳ ಕಾಲದಿಂದ ತಪ್ಪು ಮಾಡುತ್ತಲೇ ಬಂದಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಬ್ಯಾಂಕುಗಳು ಮನಬಂದಂತೆ ಸಾಲ ನೀಡುವುದಕ್ಕೆ ಅವಕಾಶ ನೀಡಿತು. ಅದನ್ನು ತಡೆಯುವಲ್ಲಿ ಆರ್‌ಬಿಐ ವಿಫಲಗೊಂಡಿದೆ ಎಂದು ಅವರು ಹೇಳಿದ್ದಾರೆ.

ಜೇಟ್ಲಿ ಯವರಲ್ಲಿ 2 ಪ್ರಭಾವಿ ಗುಣಗಳಿವೆ. ಅವೇ ಅವರ ಹೇಳಿಕೆಗಳಿಗೆ ಬಲ ನೀಡಿವೆ. ಅವರ ತೀರ್ಪು ಮತ್ತು ಕಳವಳ ಅವರು ಉಲ್ಲೇಖಿಸುವ ವಿಷಯಗಳಿಗೆ ಮಾತ್ರವೇ ಸೀಮಿತ. ಇತರ ಸಂಗತಿಗಳು ಇಲ್ಲವೇ ಇಲ್ಲ ಅಥವಾ ಅದು ರಾಜಕೀಯ ಪಿತೂರಿ.

ಸಂಸದೀಯ ಸಮಿತಿಯೊಂದು ಕಳೆದ ಆಗಸ್ಟ್‌ನಲ್ಲಿ, 2015 ರ ಮಾರ್ಚ್‌ನಿಂದ 2016 ರ ಮಾರ್ಚ್‌ವರೆಗೆ ವಸೂಲಾಗದ ಸಾಲದ ಮೌಲ್ಯ 6.2 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ ಎಂದು ವರದಿ ನೀಡಿತು. ಇದು ಸರ್ಕಾರವು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ 5.1 ಲಕ್ಷ ಕೋಟಿ ರುಪಾಯಿ ಒದಗಿಸುವಂತೆ ಮಾಡಿತು. ಈ ಸತ್ಯವು ಚಾಪೆಯ ಮೇಲೆ ಇದೆಯೋ ಅಥವಾ ಕೆಳಗೆ ಇದೆಯೋ? ಬಿಜೆಪಿ ಸರ್ಕಾರದ ಅಡಿಯಲ್ಲಿ ಏನು ನಡೆಯಿತೋ ಅದೇ ಕಾಂಗ್ರೆಸ್ ಸರ್ಕಾರದ ಅಡಿಯಲ್ಲೂ ನಡೆದಿತ್ತು.

ತಮ್ಮ 2017 ರ ಪುಸ್ತಕದಲ್ಲಿ ರಘುರಾಮ್ ರಾಜನ್ ಅವರು, ದೊಡ್ಡ ಪ್ರಮಾಣದ ಕೆಟ್ಟ ಸಾಲಗಳು 2006- 2008 ರಲ್ಲಿ ಹುಟ್ಟಿಕೊಂಡವು. ‘ಇವರಲ್ಲಿ ಹೆಚ್ಚಿನವರು ಪ್ರಭಾವಿ ಸಂಬಂಧಗಳನ್ನು ಹೊಂದಿದ್ದ ಉದ್ಯಮಿಗಳಾಗಿದ್ದರು’ ಎಂದು ಹೇಳಿದ್ದಾರೆ. ಈ ಪಾಠ ಜನರಿಗೆ ಆಶ್ಚರ್ಯವನ್ನುಂಟು ಮಾಡುವುದಿಲ್ಲ, ಯಾರು ಅಧಿಕಾರ ನಡೆಸುತ್ತಿರುತ್ತಾರೋ ಅವರಿಗೂ ಏನೂ ಅನಿಸುವುದಿಲ್ಲ. ಲೂಟಿ ಹಾಗೆಯೇ ಮುಂದುವರಿಯುತ್ತದೆ. ತಮ್ಮ ಮಾತನ್ನು ಒಪ್ಪದವರನ್ನು ಜೇಟ್ಲಿ ಇಷ್ಟಪಡುವುದಿಲ್ಲ.

ಕಾರಣ ಅವರು ಆರ್‌ಬಿಐ ಸರ್ಕಾರದ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಾರೆ. ರಾಜಕೀಯ ಶ್ರೇಣಿ ಮತ್ತು ಕೇಂದ್ರ ಬ್ಯಾಂಕ್ ನಡುವೆ ಘರ್ಷಣೆ ಜಗತ್ತಿನಾದ್ಯಂತ ಸಾಮಾನ್ಯ ಸಂಗತಿ. ಯಾವಾಗಲೂ ವಿವೇಕ ಮೇಲುಗೈ ಸಾಧಿಸುತ್ತದೆ,
ಸರ್ಕಾರಗಳು ಕೇಂದ್ರ ಬ್ಯಾಂಕ್ ಪರಿಣಾಮಕಾರಿಯಾಗಿ ಸ್ವಾಯತ್ತೆಯನ್ನು ಹೊಂದಿರುವುದಕ್ಕೆ ಬಿಟ್ಟು ಬಿಡುತ್ತವೆ. ಈ ಬಾರಿಯೂ ವಿವೇಕ ಮೇಲುಗೈ ಸಾಧಿಸಬೇಕು. ಆ ಕೊನೆಯನ್ನು ಸಾಧಿಸಬೇಕೆಂದರೆ, ಜೇಟ್ಲಿಯವರು ವಿಭಿನ್ನ ವಿಚಾರಗಳ ಜನರ ಬಗ್ಗೆ ಗೌರವ ತೋರಬೇಕು. ಇದು ಪ್ರಜಾಪ್ರಭುತ್ವದಲ್ಲಿ ಅಸ್ವಾಭಾವಿಕವಾದುದೇನಲ್ಲ.

ಆರ್‌ಬಿಐ ಗವರ್ನರ್ ಮಾತು ಪ್ರಜಾಪ್ರಭುತ್ವ ವಿರೋಧಿ ಎಂದು ಪರಿಗಣಿಸಬೇಕಾದ ಅಗತ್ಯವೇನಿಲ್ಲ. ಪ್ರಮುಖ ಪ್ರತಿಪಕ್ಷದ ನಾಯಕನನ್ನು ‘ಕೋಡಂಗಿ ಯುವರಾಜ’ ಎಂದು ಕರೆಯಬೇಕಾದ ಅಗತ್ಯವಿಲ್ಲ. ಅರುಣ್ ಜೇಟ್ಲಿಯವರು ಸದಾ ಸರಿ ಯಾಗಿಯೇ ಇರುತ್ತಾರೆ ಎನ್ನಿ. ಆದರೆ ಉಳಿದವರೆಲ್ಲ ಯಾವಾಗಲೂ ತಪ್ಪು ಎಂದು ಇದರರ್ಥವೆ? 

- ಟಿ ಜೆ ಎಸ್ ಜಾರ್ಜ್