500 ರೂ. ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ!
500 ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ!| ರೈತರಿಗೆ ಶಾಕ್| ಕೇಂದ್ರ ಸರ್ಕಾರ ಬೆಲೆಯೇರಿಕೆಗೆ ತಡೆ ನೀಡಿದ್ದರೂ ಸೊಪ್ಪುಹಾಕದ ಕಂಪನಿಗಳು| ಗೊಬ್ಬರ ಈಗಾಗಲೇ ದುಬಾರಿ| ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಎಂಸಿಎಫ್‌ನ ಗೊಬ್ಬರದ ದರ 400ರಿಂದ 600 ಹೆಚ್ಚಳ| ರೈತರಿಂದ ತೀವ್ರ ಆಕ್ರೋಶ
ಎ.ಜಿ. ಕಾರಟಗಿ
ಕಾರಟಗಿ(ಏ.20): ರಸಗೊಬ್ಬರ ದರ ದಿಢೀರ್ ಏರಿಕೆ ಮಾಡಿ ರೈತರಿಗೆ ಶಾಕ್ ನೀಡಿದ್ದ ಗೊಬ್ಬರ ಕಂಪನಿಗಳ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದ್ದರೂ ಕೊಪ್ಪಳ ಜಿಲ್ಲೆಯ ಕಾರಟಗಿ ಸುತ್ತಮುತ್ತ ಈಗಾಗಲೇ ಹೊಸ ದರದಲ್ಲಿ ಗೊಬ್ಬರ ಮಾರಾಟ ಆರಂಭವಾಗಿದೆ. 50 ಕೆ.ಜಿ. ರಸಗೊಬ್ಬರ .500ರಿಂದ .600 ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದು, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗೊಬ್ಬರ ಕಂಪನಿಗಳು 50 ಕೆ.ಜಿ. ರಸಗೊಬ್ಬರದ ದರವನ್ನು ಸುಮಾರು 700 ರು. ಏರಿಸಿರುವ ಕುರಿತು ಏ.9ರಂದು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ನಂತರ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ರಸಗೊಬ್ಬರ ಕಂಪನಿಗಳ ಜತೆಗೆ ಸಭೆ ನಡೆಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುವಂತಿಲ್ಲ, ಕಂಪನಿಗಳು ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಸೂಚಿಸಿದ್ದರು. ಸರ್ಕಾರದ ಸೂಚನೆಯನ್ನು ಒಪ್ಪಿಕೊಂಡು ರಾಜ್ಯದ ಹಲವೆಡೆ ಹಳೆ ದರದಲ್ಲೇ ಗೊಬ್ಬರ ಮಾರಾಟವಾಯಿತು.
ಆದರೆ, ಇದೀಗ ಕಾರಟಗಿ ಹಾಗೂ ಸುತ್ತಮುತ್ತಲಲ್ಲಿ ಮತ್ತೆ ಹೊಸದರಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ರಸಗೊಬ್ಬರ ವ್ಯಾಪಾರಸ್ಥರಿಗೆ ಮಂಗಳೂರಿನ ಎಂಸಿಎಫ್ ಕಂಪನಿಯಿಂದ ಪೂರೈಕೆಯಾದ ಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಈ ಹಿಂದೆ .910ರಲ್ಲಿ ಪೂರೈಕೆಯಾಗುತ್ತಿದ್ದ ಜೈಕಿಸಾನ್ ಮಂಗಳ 20:20:0:13 ಗೊಬ್ಬರ (50 ಕೆ.ಜಿ.)ದ ದರವನ್ನು .1400ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಸುಮಾರು 600 ರು. ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟವಾಗುತ್ತಿದೆ.
ಭತ್ತಕ್ಕಿಂತ ಗೊಬ್ಬರ ಬೆಲೆಯೇ ಹೆಚ್ಚು:
75 ಕೆಜಿ ಭತ್ತದ ಚೀಲಕ್ಕೆ ಗರಿಷ್ಠ .1300 ದರ ಇದೆ. ಆದರೆ 50 ಕೆಜಿ ರಸಗೊಬ್ಬರಕ್ಕೆ .1400 ರಿಂದ .1700 ದರ ನಿಗದಿಗೊಂಡಿದೆ. ಭತ್ತಕ್ಕಿಂತ ಗೊಬ್ಬರದ ದರವೇ ಹೆಚ್ಚಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಳೇ ದರದ ಬದಲು ಹೊಸದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ (ಎಂಸಿಎಫ್) ಕಂಪನಿಯಲ್ಲಿ ಉತ್ಪಾದನೆಗೊಳ್ಳುವ ಜೈಕಿಸಾನ್ ಮಾತ್ರವಲ್ಲದೆ ಡಿಎಪಿ .1250ರಿಂದ .1600ಕ್ಕೆ, 10-26-26 ಕಾಂಪ್ಲೆಕ್ಸ್: .1130 ರಿಂದ .1680ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು 400ರಿಂದ 600 ರುಪಾಯಿ ವರೆಗೆ ವಿವಿಧ ಗೊಬ್ಬರಗಳ ದರ ಏರಿಕೆಯಾಗಿದೆ. ಮಾರಾಟಗಾರರು ಮಾತ್ರ ಗೊಬ್ಬರ ದರ ಏರಿಕೆಯಲ್ಲಿ ನಮ್ಮ ಕೈವಾಡ ಇಲ್ಲ. ಕಂಪನಿಯೇ ಹೊಸ ದರದಲ್ಲಿ ಗೊಬ್ಬರ ಪೂರೈಸಿದರೆ ನಾವು ಅದಕ್ಕಿಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಹೇಗೆ ಪೂರೈಸಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಲೈಸನ್ಸ್ ರದ್ದು, ಕೇಸ್ ದಾಖಲು
ಹಳೆ ದರದ ಗೊಬ್ಬರವನ್ನು ಹೊಸ ದರದಲ್ಲಿ ಮಾರಾಟ ಮಾಡುವಂತಿಲ್ಲ, ಹಾಗೊಂದು ವೇಳೆ ಮಾರಿದರೆ ಅವರ ಲೈಸನ್ಸ್ ರದ್ದು ಮಾಡಿ, ಪ್ರಕರಣ ದಾಖಲಿಸಲಾಗುವುದು. ಇನ್ನು ಹೊಸ ದರದ ಗೊಬ್ಬರ ಮಾರುಕಟ್ಟೆಗೆ ಬಂದಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ.
- ಬಿ.ಸಿ.ಪಾಟೀಲ್ ಕೃಷಿ ಸಚಿವ