ಬೆಂಗಳೂರು (ಏ.07):  ಕಳೆದ ಆರ್ಥಿಕ ವರ್ಷದಲ್ಲಿ ಕೋವಿಡ್‌ ಸಂಕಷ್ಟದ ನಡುವೆಯೂ ವಿವಿಧ ಸಹಕಾರ ಸಂಘಗಳ ಮೂಲಕ 25.67 ಲಕ್ಷ ರೈತರಿಗೆ 17,260 ಕೋಟಿ ರು. ಸಾಲ ನೀಡುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

23.36 ಲಕ್ಷ ರೈತರಿಗೆ 15,300 ಕೋಟಿ ರು. ಸಾಲದ ಗುರಿಗೆ ಪ್ರತಿಯಾಗಿ 25.67 ಲಕ್ಷ ರೈತರಿಗೆ 17,260 ಕೋಟಿ ರು ಸಾಲ ನೀಡುವ ಮೂಲಕ ಹೆಚ್ಚುವರಿಯಾಗಿ 1.31 ಲಕ್ಷ ರೈತರಿಗೆ 1960.48 ಕೋಟಿ ರು. ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆæ ತಿಳಿಸಿದರು.

ಕೊರೋನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರೈತರಿಗೆ ಯಾವುದೇ ತೊಂದರೆ ಆಗದಂತೆ ಕಟ್ಟು ನಿಟ್ಟಿನ ಕ್ರಮದಿಂದಾಗಿ ಎಲ್ಲ ರೈತರಿಗೂ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಬೆಳೆ ಸಾಲ ಸೌಲಭ್ಯವನ್ನು ಹೆಚ್ಚಿನ ರೀತಿಯಲ್ಲಿ ನೀಡಲಾಗಿದೆ. ಈ ಅಭೂತಪೂರ್ವ ಯಶಸ್ಸಿಗೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಕಾರಣಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ! .

ಖುದ್ದು ಸೂಚನೆ:  ಎಲ್ಲ ರೈತ ಫಲಾನುಭವಿಗಳಿಗೆ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಡಿಸಿಸಿ ಬ್ಯಾಂಕುಗಳ ಶಾಖೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ‘ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್‌ ಕಡೆಗೆ’ ಕಾರ್ಯಕ್ರಮ ಹಾಕಿಕೊಂಡು ಸ್ವತಃ ಸಭೆ ನಡೆಸಿ ರೈತರಿಗೆ ನೀಡಲಾದ ಸಾಲದ ವಿವರ ಪಡೆದು, ಎಲ್ಲಿ ಗುರಿ ಸಾಧಿಸದೇ ಇರುವ ಕಡೆ ಸಲಹೆ ಸೂಚನೆ ನೀಡಿದ್ದಾಗಿ ಸಚಿವರು ತಿಳಿಸಿದರು.

ಬಡವರ ಬಂಧು, ಕಾಯಕ, ಎಸ್‌ಸಿ, ಎಸ್‌ಟಿ ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರದಲ್ಲಿ ನೀಡಿರುವ ಗುರಿ ತಲುಪುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆತ್ಮ ನಿರ್ಭರತೆಯಲ್ಲಿ ರಾಜ್ಯ ನಂ.1:  ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸಾಧನೆಗೆ ಕೇಂದ್ರ ಹಾಗೂ ನಬಾರ್ಡ್‌ ಮೆಚ್ಚುಗೆ ವ್ಯಕ್ತಪಡಿಸಿದಿ ಎಂದು ತಿಳಿಸಿದ ಸಚಿವ ಎಸ್‌.ಟಿ. ಸೋಮಶೇಖರ್‌, ಈ ಯೋಜನೆಯಡಿ ಒಂದು ಸಾವಿರ ಕೃಷಿ ಪತ್ತಿನ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರು.ನಂತೆ ಸಾಲ ನೀಡಿಕೆಗೆ ಅವಕಾಶವಿದೆ. ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ 949 ಸಂಘಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಪೈಕಿ 614 ಸಂಘಗಳಿಗೆ 198.96 ಕೋಟಿ ರು. ಮಂಜೂರಾಗಿದೆ ಎಂದು ವಿವರಿಸಿದರು.

ವಾರಕ್ಕೊಮ್ಮೆ ಭೇಟಿಗೆ ಸೂಚನೆ:  ಈ ಯೋಜನೆ ಯಶಸ್ವಿಯಾಗಲು ಪತ್ತಿನ ಸಂಘ ಹಾಗೂ ಅರ್ಬನ್‌ ಬ್ಯಾಂಕುಗಳ ಮೇಲೆ ನಿಗಾ ಇಡಬೇಕು. ಗುರಿ ಮುಟ್ಟದ ಬ್ಯಾಂಕುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಪ್ರಗತಿ ಸಾಧಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶೇ.100ಕ್ಕೂ ಹೆಚ್ಚು ಪ್ರಗತಿ : 2020-21ನೇ ಸಾಲಿನಲ್ಲಿ 25.50 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 14,500 ಕೋಟಿ ರು ಅಲ್ಪಾವಧಿ ಬೆಳೆ ಸಾಲ ವಿತರಣೆ, 0.70 ಲಕ್ಷ ರೈತರಿಗೆ ಶೇ. 3 ಬಡ್ಡಿ ದರದಲ್ಲಿ 1200 ಕೋಟಿ ರು. ಮಧ್ಯಾವಧಿ/ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಈ ಪೈಕಿ ಈವರೆಗೆ 25.24 ಲಕ್ಷ ರೈತರಿಗೆ 16,191 ಕೋಟಿ ಅಲ್ಪಾವಧಿ ಕೃಷಿ ಸಾಲ ಹಾಗೂ 0.43 ಲಕ್ಷ ರೈಗರಿಗೆ 1069.13 ಕೋಟಿ ರು ಮಧ್ಯಾಮವಧಿ/ದೀರ್ಘಾವಧಿ ಸಾಲ ವಿತರಿಸುವ ಮೂಲಕ ಶೇ. 100ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ.