‘ಕೊರೋನಾ ಸಂಕಷ್ಟದ ನಡುವೆಯೂ ದಕ್ಷತೆಯಿಂದ ಹಣಕಾಸು ಪರಿಸ್ಥಿತಿ ನಿಭಾಯಿಸಿ 402 ಕೋಟಿ ರು.ಗಳ ರಾಜಸ್ವ ಉಳಿತಾಯ ಬಜೆಟ್‌ ಮಂಡಿಸಿದ್ದು, ಚುನಾವಣೆ ಲಾಭಕ್ಕೆ ಬೇಕಾಬಿಟ್ಟಿ ಘೋಷಣೆ ಮಾಡದೆ ಕಾರ್ಯಸಾಧು ಬಜೆಟ್‌ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು (ಫೆ.18): ‘ಕೊರೋನಾ ಸಂಕಷ್ಟದ ನಡುವೆಯೂ ದಕ್ಷತೆಯಿಂದ ಹಣಕಾಸು ಪರಿಸ್ಥಿತಿ ನಿಭಾಯಿಸಿ 402 ಕೋಟಿ ರು.ಗಳ ರಾಜಸ್ವ ಉಳಿತಾಯ ಬಜೆಟ್‌ ಮಂಡಿಸಿದ್ದು, ಚುನಾವಣೆ ಲಾಭಕ್ಕೆ ಬೇಕಾಬಿಟ್ಟಿ ಘೋಷಣೆ ಮಾಡದೆ ಕಾರ್ಯಸಾಧು ಬಜೆಟ್‌ ಮಂಡಿಸಿದ್ದೇನೆ. ಇದು ಅಭಿವೃದ್ಧಿ ಪರ, ಜನಪರ ಹಾಗೂ ಜನ ಕೇಂದ್ರಿತ ಬಜೆಟ್‌’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯವು ಆರ್ಥಿಕ ಸಂಕಷ್ಟದಿಂದ ಕೊರತೆಯಿಲ್ಲದ ಬಜೆಟ್‌ ಮಂಡಿಸಲು ಕನಿಷ್ಠ ಐದು ವರ್ಷ ಕಾಲಾವಕಾಶ ಬೇಕು ಎಂದು ಆರ್ಥಿಕ ತಜ್ಞರು ಹೇಳಿದ್ದರು. ಎಲ್ಲರೂ ಅಚ್ಚರಿಪಡುವಂತೆ ಎರಡೇ ವರ್ಷದಲ್ಲಿ ಸಂಕಷ್ಟ ನಿಭಾಯಿಸಿದ್ದೇವೆ. 

ಕಳೆದ ವರ್ಷಕ್ಕಿಂತ 43,462 ಕೋಟಿ ರು. (ಶೇ.16) ರಷ್ಟುಹೆಚ್ಚು ಗಾತ್ರದ ಬಜೆಟ್‌ ಮಂಡಿಸಿದ್ದು ಅಲ್ಲದೇ ಉಳಿತಾಯ ಬಜೆಟ್‌ ಮಂಡಿಸಿದ್ದೇವೆ ಎಂದು ಹೇಳಿದರು. ಶುಕ್ರವಾರ 2023-24ನೇ ಸಾಲಿನ ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ 14,699 ಕೋಟಿ ರು.ಗಳಷ್ಟುಕೊರತೆಯಿತ್ತು. ತೆರಿಗೆ ಸಂಗ್ರಹ ಕ್ಷಮತೆ ಹೆಚ್ಚಿಸಿದ್ದರಿಂದ ತೆರಿಗೆ ಸಂಗ್ರಹ ಶೇ.23ರಷ್ಟು ಹೆಚ್ಚಾಗಿದೆ. ತನ್ಮೂಲಕ ದೇಶದ ಆರ್ಥಿಕ ಸರಾಸರಿಗಿಂತ ಹೆಚ್ಚಿನ ಆದಾಯ ರಾಜ್ಯದಲ್ಲಿ ದಾಖಲಾಗಿದೆ. ಹೀಗಾಗಿ ಬಜೆಟ್‌ ಗಾತ್ರ ಹೆಚ್ಚಾದರೂ ಈ ಬಾರಿ ಸಾಲದ ಪ್ರಮಾಣ ಹೆಚ್ಚಾಗುವುದಿಲ್ಲ.

ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ: ಬಜೆಟ್ ಘೋಷಣೆಗೆ ಸಚಿವ ಅಶ್ವತ್ಥ್‌ ಸಂತಸ

75 ಸಾವಿರ ಕೋಟಿ ರು. ಸಾಲದ ನಿರೀಕ್ಷೆ ತೋರಿಸಿದ್ದರೂ 72 ಸಾವಿರ ಕೋಟಿ ರು.ಗಿಂತ ಕಡಿಮೆ ಮಿತಿಯಲ್ಲೇ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಲಕ್ಷಾಂತರ ಕೋಟಿ ರು. ಸಾಲ ಮಾಡಿರುವುದಾಗಿ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸಾಲದ ಪ್ರಮಾಣ ವಿತ್ತೀಯ ಮಾನದಂಡಗಳ ಒಳಗೆಯೇ ಇದೆ. ರಾಜ್ಯ ಜಿಡಿಪಿಯ ಶೇ.3 ಒಳಗೆ ಫಿಸಿಕಲ್‌ ಡಿಫಿಸಿಟ್‌ ಇರಬೇಕು. ನಮ್ಮದು ಅದರ ಒಳಗೆಯೇ ಇದೆ. ನಾವು ಕೊರೋನಾ ಸಂಕಷ್ಟದ ನಡುವೆಯೇ ನಮ್ಮ ಅವಧಿಯಲ್ಲಿ 2 ಲಕ್ಷ ಕೋಟಿ ರು. ಸಾಲ ಮಾಡಿದ್ದೇವೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯ ಸುಭೀಕ್ಷವಾಗಿದ್ದರೂ ಅವರು ಯಾಕೆ 2 ಲಕ್ಷ ಕೋಟಿ ರು. ಸಾಲ ಮಾಡಿದರು ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳು ಆರೋಪ ಮಾಡುವಂತೆ ಆರ್ಥಿಕ ಅಶಿಸ್ತು ಇಲ್ಲ. ಚುನಾವಣೆ ಘೋಷಣೆಗಳನ್ನೂ ನಾವು ಮಾಡಿಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಕೇಂದ್ರದ ಸರಾಸರಿಗಿಂತ ನಮ್ಮ ಜಿಎಸ್‌ಟಿ ಸಂಗ್ರಹ ಹೆಚ್ಚಿದೆ. ನಾವು ಕೃಷಿ, ಉತ್ಪಾದನೆ ಹಾಗೂ ಸೇವಾ ವಲಯ ಮೂರೂ ವಲಯಗಳಲ್ಲಿ ಸಾಧನೆ ಮಾಡಿದ್ದೇವೆ. ಅತ್ಯಂತ ದಕ್ಷ ಆಡಳಿತ ನಿರ್ವಹಣೆ ನೀಡುವ ಮೂಲಕ ಕಳೆದ ಬಜೆಟ್‌ನ ಶೇ.90ರಷ್ಟುಯೋಜನೆ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಮಾಡಿದ್ದೇವೆ. ಹಲವು ಅನುಷ್ಠಾನ ಹಂತದಲ್ಲಿವೆ. ಈಗಾಗಲೇ 2022-23ನೇ ಸಾಲಿನ ಬಜೆಟ್‌ನ ಶೇ.76ರಷ್ಟುವೆಚ್ಚ ಸಾಧಿಸಿದ್ದೇವೆ. ಇದರ ಅರ್ಥ ಬಜೆಟ್‌ ಅನುಷ್ಠಾನ ಆಗಿದೆ ಎಂಬುದು. ಇದು ಪ್ರತಿಪಕ್ಷಗಳಿಗೆ ಅರ್ಥವಾಗಿಲ್ಲ ಎಂದು ಕಿಡಿಕಾರಿದರು.

ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಣದೀಪ್‌ ಸಿಂಗ್‌ ಸುರ್ಜೇವಾಲ

ಕಾರ್ಯ ಅನುಷ್ಠಾನ ವರದಿ: ಕಳೆದ ಬಜೆಟ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನ ವೆಚ್ಚ ಮಾಡಲಾಗಿದೆ. 2.04 ಲಕ್ಷ ಕೋಟಿ ರು. ವೆಚ್ಚ ಮಾಡಿದ್ದು, ಯಾವ ಯೋಜನೆಗೆ ಎಷ್ಟುವೆಚ್ಚವಾಗಿದೆ ಎಂಬುದನ್ನು ಅನುಷ್ಠಾನ ವರದಿಯಲ್ಲಿ ಉಲ್ಲೇಖಿಸಿದ್ದೇವೆ. ವಿಪಕ್ಷಗಳೂ ವರದಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.