* ಸಿಎಂ ಭೇಟಿಯಾಗಿ ಚರ್ಚಿಸಿದ ಹು-ಧಾ ಡೆವಲಪ್‌ಮೆಂಟ್ ಫೋರಂ* ಅಧ್ಯಯನ ಮಾಡಿದ ಫೋರಂ ನಿಯೋಗ* ಕೈಗಾರಿಕಾ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಡತ ಸಲ್ಲಿಕೆ
ಹುಬ್ಬಳ್ಳಿ(ಮಾ.04): ರಾಜ್ಯದಲ್ಲಿ ವಿಶೇಷ ಬಂಡವಾಳ ಹೂಡಿಕಾ ವಲಯ (SIR) ಸ್ಥಾಪನೆಗಾಗಿ ವಿಶೇಷ ಕಾನೂನು ಅನುಷ್ಠಾನಕ್ಕಾಗಿ ಕೋರಿಕೊಂಡ ಹುಬ್ಬಳ್ಳಿ ಡೆವಲಪ್ಮೆಂಟ್ ಫೋರಂ ನಿಯೋಗದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿಯಾದ ಹುಬ್ಬಳ್ಳಿ ಡೆವಲಪ್ಮೆಂಟ್ ಫೋರಂ(Hubballi Development Forum) ಪದಾಧಿಕಾರಿಗಳು ವಾಣಿಜ್ಯ ನಗರಿಯಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಸೇರಿ ಇನ್ನಿತರ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.
ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ವಿಷಯ ಪ್ರಸ್ತಾಪಿಸಿದರು. ಗುಜರಾತ್‌ನ ಅಹ್ಮದಾಬಾದ್ ಧೋಲೆರಾದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಜಾಗತಿಕ ಕೈಗಾರಿಕೆಗಳನ್ನು ಸೆಳೆಯುವ ಪ್ರಯತ್ನ ಆಗಿದೆ. ಫೋರಂ ನಿಯೋಗ ಅಲ್ಲಿಗೆ ತೆರಳಿ ಅಧ್ಯಯನ ಮಾಡಿದೆ. ಧಾರವಾಡ, ಕಲಬುರಗಿ, ಶಿವಮೊಗ್ಗ ಜಿಲ್ಲೆಗಳನ್ನು ಎಸ್‌ಐಆರ್ ವ್ಯಾಪ್ತಿಗೆ ಒಳಪಡಿಸಬೇಕಿದೆ. ಅದಕ್ಕಾಗಿ ವಿಶೇಷ ಕಾನೂನು ಮಂಡನೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಜಗದೀಶ ಶೆಟ್ಟರ್ ಅವರು ಕೈಗಾರಿಕಾ ಸಚಿವರಿದ್ದಾಗ ಈ ಕುರಿತಂತೆ ಎಸ್‌ಐಆರ್ ಕಾನೂನಿನ ಕರಡು ರೂಪಿಸಲಾಗಿದ್ದು, ಅದನ್ನು ಸದನದಲ್ಲಿ ಮಂಡಿಸುವ ಪ್ರಯತ್ನ ಆಗಬೇಕಿದೆ ಎಂಬ ಚರ್ಚೆ ಆಗಿದೆ.
Karnataka Budget 2022-23: ಉತ್ತರದ ಹೆಬ್ಬಾಗಿಲಿಗೆ ಸಿಎಂ ತೋರಣ..!
ಇನ್ನು, ರಾಷ್ಟ್ರೀಯ ವನ್ಯಜೀವಿ ಮಂಡಳಿ ಎದುರು ಇರುವಂತಹ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ವಿಚಾರವನ್ನು ಆದಷ್ಟು ಬೇಗ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಆಗಬೇಕು. ಅದರ ಜತೆಗೆ ಅಂಕೋಲಾದ ಬೇಲೇಕೇರಿ ಬಂದರು ಅಭಿವೃದ್ಧಿಗೆ ಡಿಪಿಆರ್(DPR) ಸಿದ್ಧವಾಗಿದ್ದು, ಅದಕ್ಕೆ ಅಗತ್ಯ ಅನುದಾನ ಮೀಸಲಿಡುವ ಹಾಗೂ ಕಾಮಗಾರಿ ನಡೆಸುವ ಕುರಿತು ಕ್ರಮ ಕೈಗೊಳ್ಳಲು ಎಂದು ಜಗದೀಶ ಶೆಟ್ಟರ್ ಒತ್ತಾಯಿಸಿದರು.
ಬೆಂಗಳೂರು ಮುಂಬೈ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಮಾದರಿ ಯೋಜನೆ ಕುರಿತು ಹೆಚ್ಚಿನ ಒತ್ತು ನೀಡಬೇಕಿದೆ. ಧಾರವಾಡವನ್ನು ಒಳಗೊಂಡು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನಿಯೋಗ ಕೇಳಿಕೊಂಡಿತು. ಗುಜರಾತ್ ಮಾದರಿಯಲ್ಲಿ ಈ ಭಾಗದಲ್ಲಿ ಆಹಾರ ಉತ್ಪಾದನೆ ಹಾಗೂ ಜವಳಿ ಕ್ಷೇತ್ರಕ್ಕಾಗಿ ತಲಾ 500 ಎಕರೆಯನ್ನು ಗುರುತಿಸಬೇಕು ಎಂದು ಕೋರಿಕೊಳ್ಳಲಾಗಿದೆ.
ಇದರ ಜೊತೆಗೆ ಎಫ್‌ಎಂಸಿಜಿ (Fast Moving Consumer Goods) ಸ್ಥಾಪನೆಗೆ ಈಗಾಗಲೆ ಧಾರವಾಡದ ಮಮ್ಮಿಗಟ್ಟಿಯ ಬಳಿ 500 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇದಕ್ಕಾಗಿ ರಚಿಸಲಾಗಿದ್ದ ಉಲ್ಲಾಸ್ ಕಾಮತ್ ಅವರ ನೇತೃತ್ವದ ಸಮಿತಿ ವರದಿಯನ್ನೂ ನೀಡಿದೆ. ಕೈಗಾರಿಕಾ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದ್ದು, ಅಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣ ಮುಂದಕ್ಕೆ ಹೋಗಿಲ್ಲ. ಈ ಕುರಿತಂತೆಯೂ ಹೆಚ್ಚಿನ ಚಿಂತನೆ ಆಗಬೇಕಿದೆ ಎಂದು ಮನವಿ ಮಾಡಿದೆ.
ಇನ್ನು, ಸ್ಟಾರ್ಟ್ ಅಪ್ ಕುರಿತಂತೆ ಈ ಭಾಗದಲ್ಲಿ ಲಾಂಚ್ ಪಾರ್ಕ್ (ಸ್ಟಾರ್ಟ್ ಅಪ್ ಸ್ಥಾಪನೆಗೆ ಆದ್ಯತಾ ಸ್ಥಳ) ಸ್ಥಾಪಿಸಬೇಕು. ಅದಕ್ಕಾಗಿ ಗಾಮನಗಟ್ಟಿ, ಇಟಗಟ್ಟಿ ಪ್ರದೇಶದಲ್ಲಿ ಸುಮಾರು ನೂರು ಎಕರೆ ಮೀಸಲು ಇಡಲು ಮುಂದಾಗಬೇಕು ಎಂದು ಪ್ರಮುಖರು ಕೋರಿದ್ದಾರೆ.
Hubballi: ನಿತಿನ್ ಗಡ್ಕರಿಯನ್ನು ಹಾಡಿ ಹೊಗಳಿದ ಮಲ್ಲಿಕಾರ್ಜುನ ಖರ್ಗೆ
ಸಭೆಯಲ್ಲಿ ಹುಬ್ಬಳ್ಳಿ ಡೆವಲಪ್ಮೆಂಟ್ ಫೋರಂ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಫೋರಂನ ಎಂ.ವಿ. ಕರಮರಿ, ನಂದಕುಮಾರ, ಜಗದೀಶ ಹಿರೇಮಠ, ಗೋವಿಂದ ಜೋಶಿ, ಯುವ ಉದ್ಯಮಿ ಸಂತೋಷ ಹುರುಳಿಕೊಪ್ಪಿ ಮತ್ತು ಇತರರು ನಿಯೋಗದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಜತೆಗೆ ವಿಶೇಷ ಬಂಡವಾಳ ಹೂಡಿಕಾ ವಲಯ (ಎಸ್‌ಐಆರ್) ಸ್ಥಾಪನೆ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಸೇರಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
