ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಯಾವುದೇ ಹೊಸ ತೆರಿಗೆ ವಿಧಿಸದೆ, ಹಾಲಿ ತೆರಿಗೆ ಹೆಚ್ಚಿಸದೆ, ಎಲ್ಲ ವರ್ಗಗಳನ್ನು ಸ್ಪರ್ಶಿಸುವ, ಹತ್ತು ಹಲವು ಹೊಸ ಯೋಜನೆಗಳನ್ನು ಒಳಗೊಂಡ 2023-24ನೇ ಸಾಲಿನ 3,09,182 ಕೋಟಿ ರು. ಗಾತ್ರದ ‘ಉಳಿತಾಯ ಆಯವ್ಯಯ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ್ದಾರೆ.

ಬೆಂಗಳೂರು (ಫೆ.18): ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಯಾವುದೇ ಹೊಸ ತೆರಿಗೆ ವಿಧಿಸದೆ, ಹಾಲಿ ತೆರಿಗೆ ಹೆಚ್ಚಿಸದೆ, ಎಲ್ಲ ವರ್ಗಗಳನ್ನು ಸ್ಪರ್ಶಿಸುವ, ಹತ್ತು ಹಲವು ಹೊಸ ಯೋಜನೆಗಳನ್ನು ಒಳಗೊಂಡ 2023-24ನೇ ಸಾಲಿನ 3,09,182 ಕೋಟಿ ರು. ಗಾತ್ರದ ‘ಉಳಿತಾಯ ಆಯವ್ಯಯ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಕರ್ಷಕ ಜನಪ್ರಿಯ ಯೋಜನೆ ಪ್ರಕಟಿಸದೆ, ರೈತರು, ಮಹಿಳೆಯರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೆ ಅನುಕೂಲವಾಗುವ ಕಾರ್ಯಕ್ರಮ ಪ್ರಕಟಿಸಿದ್ದಾರೆ. ಒಟ್ಟಾರೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ಮಾತು ಪಾಲಿಸಬೇಕೆಂಬ ನಿಲುವನ್ನು ಬಜೆಟ್‌ನಲ್ಲಿ ಸರ್ಕಾರ ಪಾಲಿಸಿದೆ. 

ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಪ್ರಮಾಣ 3 ಲಕ್ಷ ರು.ಗಳಿಂದ 5 ಲಕ್ಷ ರು.ಗಳಿಗೆ ಹೆಚ್ಚಳ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ‘ಶ್ರಮ ಶಕ್ತಿ’ ಮೂಲಕ ಪ್ರತಿ ತಿಂಗಳು ತಲಾ 500 ರು. ಸಹಾಯಧನ, ರೈತರಿಗೆ 2 ಲಕ್ಷ ರು. ಜೀವ ವಿಮೆ ಒದಗಿಸುವ ‘ಜೀವನ್‌ ಜ್ಯೋತಿ ವಿಮಾ’, ‘ಗೃಹಿಣಿ ಶಕ್ತಿ’ ಅಡಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1,800 ಕೋಟಿ ರು.ಗಳಷ್ಟುಶೂನ್ಯ ಬಡ್ಡಿ ದರದ ಸಾಲ, ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 40 ಕೋಟಿ ರು. ವೆಚ್ಚದಲ್ಲಿ ಉಪಧನ (ಗ್ರಾಚುಯಿಟಿ) ಘೋಷಿಸಿದ್ದಾರೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನದ ಬಗ್ಗೆ ಬಜೆಟ್‌ ಭಾಷಣದಲ್ಲಿ ಭರವಸೆ ನೀಡದಿದ್ದರೂ ಅನುದಾನ ಮೀಸಲಿಟ್ಟಿದ್ದಾರೆ. ಜತೆಗೆ 1 ಲಕ್ಷ ಹುದ್ದೆ ಭರ್ತಿಯ ಮಾತು ಕೊಟ್ಟಿದ್ದಾರೆ.

ಬೆಂಗಳೂರಲ್ಲಿ ಸಿಗ್ನಲ್‌ ಫ್ರೀ- ಟ್ರಾಫಿಕ್‌ ಮುಕ್ತ ಸಂಚಾರಕ್ಕೆ ಒತ್ತು: ಕಸದ ವೈಜ್ಞಾನಿಕ ವಿಲೇವಾರಿ

ಉಳಿತಾಯ ಬಜೆಟ್‌ ಮಂಡನೆ: ಕಳೆದ ಬಾರಿ ಕೊರೋನಾ ಆರ್ಥಿಕ ಸಂಕಷ್ಟದಿಂದ (2022-23) 14,699 ಕೋಟಿ ರು.ಗಳ ರಾಜಸ್ವ ಕೊರತೆ ಬಜೆಟ್‌ ಮಂಡಿಸಿದ್ದ ಬೊಮ್ಮಾಯಿ, ಒಂದೇ ವರ್ಷದಲ್ಲಿ ರಾಜ್ಯದ ಆರ್ಥಿಕತೆಯನ್ನು ಚೇತರಿಕೆ ಹಾದಿಗೆ ಮರಳಿಸಿರುವಂತೆ 402 ಕೋಟಿ ರು.ಗಳ ಉಳಿತಾಯ ಬಜೆಟ್‌ ಮಂಡಿಸಿದ್ದಾರೆ. 2023-24ನೇ ಸಾಲಿನಲ್ಲಿ 1.64 ಲಕ್ಷ ಕೋಟಿ ರು. ಸ್ವಂತ ತೆರಿಗೆ, 11 ಸಾವಿರ ಕೋಟಿ ರು. ತೆರಿಗೆಯೇತರ ಆದಾಯ, 37,252 ಕೋಟಿ ರು. ಕೇಂದ್ರದ ತೆರಿಗೆ ಪಾಲು, 13,005 ಕೋಟಿ ರು. ಕೇಂದ್ರದ ಅನುದಾನದ ರೂಪದಲ್ಲಿ ನಿರೀಕ್ಷಿಸಲಾಗಿದೆ. 

ಆದಾಗ್ಯೂ 77,750 ಕೋಟಿ ರು.ಹಣ ಸಾಲ ಪಡೆಯಲು ಪ್ರಸ್ತಾಪಿಸಲಾಗಿದೆ. ತನ್ಮೂಲಕ 2023-24ರ ಅಂತ್ಯಕ್ಕೆ ರಾಜ್ಯದ ಸಾಲದ ಪ್ರಮಾಣ 5.64 ಲಕ್ಷ ಕೋಟಿ ರು.ಗಳಷ್ಟಾಗಲಿದೆ. ವಿವಿಧ ತೆರಿಗೆಗಳ ಸಂಗ್ರಹ ಉತ್ತಮವಾಗಿರುವುದರಿಂದ ತೆರಿಗೆ ಹೆಚ್ಚಿಸುವ ಗೋಜಿಗೆ ಹೋಗದೆ, ಹೆಚ್ಚಿನ ಸಾಲ ಪಡೆಯುವುದಕ್ಕೂ ಮಿತಿ ಹಾಕಿಕೊಂಡು ಈ ಬಾರಿಯ ಬಜೆಟ್‌ ಗಾತ್ರವನ್ನು ಹಿಗ್ಗಿಸಲಾಗಿದೆ. ಕಳೆದ ಆರ್ಥಿಕ ವರ್ಷದ ಬಜೆಟ್‌ಗೆ (2.65 ಲಕ್ಷ ಕೋಟಿ) ಹೋಲಿಸಿದರೆ 3,09,182 ಕೋಟಿ ರು.ಗೆ ಹೆಚ್ಚಾಗಿದ್ದು, ಕಳೆದ ವರ್ಷಕ್ಕಿಂತ 42 ಸಾವಿರ ಕೋಟಿ ರು.ಗಳಷ್ಟು(ಶೇ.16) ದಾಖಲೆ ಪ್ರಮಾಣದಲ್ಲಿ ಗಾತ್ರ ಹೆಚ್ಚಿಸಲಾಗಿದೆ.

ಸ್ಥಳೀಯವಾರು ಕಾರ್ಯಕ್ರಮ: ಸ್ಥಳೀಯರ ಹಲವಾರು ವರ್ಷಗಳ ಒತ್ತಾಯಗಳಿಗೆ ಸ್ಪಂದಿಸಿರುವಂತೆ ಕೆ.ಸಿ. ವ್ಯಾಲಿ ಸೇರಿದಂತೆ ಸಂಬಂಧಿತ ಯೋಜನೆಗಳಲ್ಲಿ ಟರ್ಶರಿ ಮಟ್ಟಕ್ಕೆ ನೀರನ್ನು ಶುದ್ಧೀಕರಿಸುವ ಭರವಸೆ ನೀಡಿದ್ದಾರೆ. ಇದು ಕೋಲಾರ, ಚಿಕ್ಕಬಳ್ಳಾಪುರ ಜನರ ಮೇಲೆ ಪರಿಣಾಮ ಬೀರಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ- 3ನೇ ಹಂತಕ್ಕೆ ಶೀಘ್ರ ಭೂ ಪರಿಹಾರ ಕಲ್ಪಿಸುವುದಾಗಿ ತಿಳಿಸಿ 5 ಸಾವಿರ ಕೋಟಿ ರು. ಅನುದಾನ ಒದಗಿಸಲಾಗಿದೆ. ಕಳಸಾ ಬಂಡೂರಿ ನಾಲಾ ಯೋಜನೆಗೆ ಒಂದು ಸಾವಿರ ಕೋಟಿ ರು. ಒದಗಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ ಸೇರಿದಂತೆ ಸ್ಥಳೀಯವಾಗಿ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಕಾರ್ಯಕ್ರಮಗಳನ್ನು ಅಳೆದು ತೂಗಿ ಘೋಷಿಸಿದಂತಿದೆ.

ಟೈಲರ್‌ಗಳ ಮಕ್ಕಳಿಗೂ ಬರಲಿದೆ ರೈತ ವಿದ್ಯಾನಿಧಿ, ವಿದ್ಯಾರ್ಥಿಗಳಿಗೆ ಮಕ್ಕಳ ಬಸ್ಸು ಬಿಟ್ಟ ಸಿಎಂ!

ತವರು ಜಿಲ್ಲೆಯ ಪ್ರೇಮ: ಬಜೆಟ್‌ನಲ್ಲಿ ತವರು ಜಿಲ್ಲೆ ಹಾವೇರಿಗೂ ಸಹ ಹೆಚ್ಚಿನ ಯೋಜನೆ, ಕಾರ್ಯಕ್ರಮ ನೀಡಿದ್ದಾರೆ. ಸವಣೂರಿಗೆ ತಾಯಿ ಮಕ್ಕಳ ಆಸ್ಪತ್ರೆ,ಹಾವೇರಿ ಜಿಲ್ಲೆಯಲ್ಲಿ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ, ಹಾವೇರಿ ಎಂಜಿನಿಯರಿಂಗ್‌ ಕಾಲೇಜನ್ನು ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಉನ್ನತೀಕರಿಸಲು ನಿರ್ಧಾರ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ.