Asianet Suvarna News Asianet Suvarna News

ಥಿಯೇಟರ್‌ಗಳಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗದಂತೆ ನಿರ್ಬಂಧಿಸಬಹುದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿವೆ ಮತ್ತು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ಅನುಮತಿಸಬೇಕೇ ಎಂದು ನಿರ್ಧರಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

cinema halls can disallow food beverages that moviegoers bring rules supreme court ash
Author
First Published Jan 3, 2023, 7:54 PM IST

ಜನರು ಸಿನಿಮಾ ಹಾಲ್‌ಗಳಿಗೆ (Cinema Halls)  ಆಹಾರವನ್ನು (Food) ತೆಗೆದುಕೊಂಡು ಹೋಗಬಹುದೇ ಎಂಬ ಕುರಿತು ಇಂದು ಸುಪ್ರೀಂಕೋರ್ಟ್‌ (Supreme Court) ಮಹತ್ವದ ತೀರ್ಪು ನೀಡಿದೆ. ಚಿತ್ರಮಂದಿರಗಳಲ್ಲಿ ಹೊರಗಿನ (Outside) ಆಹಾರವನ್ನು ನಿಷೇಧಿಸಬೇಕು (Ban) ಎಂಬ ಅರ್ಜಿಯ ವಿಚಾರಣೆಯನ್ನು (Plea Hearing) ನಡೆಸುತ್ತಿದ್ದ ನ್ಯಾಯಾಲಯ ಈ ವಿಚಾರದಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ (Multiplex) ಅಥವಾ ಥಿಯೇಟರ್‌ಗಳಿಗೆ (Theatres) ಅಧಿಕಾರ ನೀಡಿದೆ.  ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸುವ ಹಕ್ಕನ್ನು ಹೊಂದಿವೆ ಮತ್ತು ಹೊರಗಿನಿಂದ ಆಹಾರ ಮತ್ತು ಪಾನೀಯಗಳನ್ನು ಅನುಮತಿಸಬೇಕೇ ಎಂದು ನಿರ್ಧರಿಸಬಹುದು ಎಂದೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇನ್ನು, ಈ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳೊಬ್ಬರು,  "ನಾವು ಚಲನಚಿತ್ರಗಳಿಗೆ ಜಿಲೇಬಿಗಳನ್ನು ತೆಗೆದುಕೊಂಡು ಹೋಗಬೇಕೇ’’ ಎಂದು ಪ್ರಶ್ನೆ ಮಾಡಿದ್ದಾರೆ. 

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರ ನೇತೃತ್ವದ ಪೀಠವು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಈ ತೀರ್ಪು ನೀಡಿದೆ. ಜನರು ತಮಗೆ ಇಷ್ಟಬಂದ ಆಹಾರ ಮತ್ತು ನೀರನ್ನು ತೆಗೆದುಕೊಂಡು ಹೋಗಬಹುದು ಎಂದು ಈ ವಿಚಾರದಲ್ಲಿ ಥಿಯೇಟರ್‌ಗಳ ನಿರ್ಬಂದವನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು.

"ಸಿನಿಮಾ ಹಾಲ್‌ಗೆ ನೀವು ಆರೋಗ್ಯಕರವಾದ ಆಹಾರ ತೆಗೆದುಕೊಂಡು ಹೋಗಬೇಕು ಎಂಬುದಕ್ಕೆ ಅದು ಜಿಮ್ ಅಲ್ಲ. ಇದು ಮನರಂಜನೆಯ ಸ್ಥಳವಾಗಿದೆ, ಅಲ್ಲದೆ, ಚಿತ್ರಮಂದಿರವು ಖಾಸಗಿ ಆಸ್ತಿಯಾಗಿದೆ. ಈ ಹಿನ್ನೆಲೆ ಶಾಸನಬದ್ಧ ನಿಯಮಗಳಿಗೆ ಒಳಪಟ್ಟು ಮಾಲೀಕರು ಈ ವಿಚಾರವನ್ನು ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್‌ ದ್ವಿ ಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಜಮ್ಮು ಕಾಶ್ಮೀರ ಹೈಕೋರ್ಟ್‌ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌, 
ಶಸ್ತ್ರಾಸ್ತ್ರಗಳನ್ನು ಅನುಮತಿಸಲಾಗುವುದಿಲ್ಲ ಅಥವಾ ಜಾತಿ ಅಥವಾ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದರೆ ಪರವಾಗಿಲ್ಲ. ಆದರೆ ಅವರು ಸಿನಿಮಾ ಹಾಲ್‌ಗಳಿಗೆ ಯಾವುದೇ ಆಹಾರವನ್ನು ತರಬಹುದು ಎಂದು ಹೈಕೋರ್ಟ್ ಹೇಗೆ ಹೇಳುತ್ತದೆ..? ಎಂದೂ ದೇಶದ ಉನ್ನತ ನ್ಯಾಯಾಲಯ ಪ್ರಶ್ನೆ ಮಾಡಿದೆ.

ಹೈಕೋರ್ಟ್ ತನ್ನ ವ್ಯಾಪ್ತಿ ಮೀರಿದೆ ಮತ್ತು ವಿಶೇಷವಾಗಿ ಮಕ್ಕಳಿಗೆ ಉಚಿತ ಆಹಾರ ಮತ್ತು ಶುದ್ಧ ನೀರನ್ನು ಒದಗಿಸುವಂತೆ ಚಿತ್ರಮಂದಿರಗಳಿಗೆ ನಿರ್ದೇಸನ ನೀಡಿರುವುದು ಸರಿಯಲ್ಲ ಎಂದೂ ಸುಪ್ರೀಮಕೋರ್ಟ್‌ ನ್ಯಯಮೂರ್ತಿ ಹೇಳಿದ್ದಾರೆ. ಸಿನಿಮಾ ನೋಡಬೇಕೋ ಬೇಡವೋ ಎಂಬುದು ವೀಕ್ಷಕರ ಆಯ್ಕೆಯಾಗಿದ್ದು, ಆದರೆ ಒಮ್ಮೆ ಥಿಯೇಟರ್‌ಗೆ ಬಂದರೆ ಮ್ಯಾನೇಜ್‌ಮೆಂಟ್‌ನ ನಿಯಮಗಳನ್ನು ಪಾಲಿಸಬೇಕು ಎಂದೂ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ಹೇಳಿದೆ. 

ಈ ತೀರ್ಪು ನೀಡುವ ಮುನ್ನ ವಿವರಿಸುತ್ತಿರುವ ವೇಳೆ ಕೆಲ ವಾದಗಳು ಹಾಸ್ಯಮಯವಾಗಿತ್ತು ಎಂದು ತಿಳಿದುಬಂದಿದೆ. "ಸಿನಿಮಾ ಹಾಲ್‌ನಲ್ಲಿ ಯಾರಾದರೂ ಜಿಲೇಬಿ ತಿನ್ನಲು ಪ್ರಾರಂಭಿಸಿದರೆ ಅದನ್ನು ಥಿಯೇಟರ್ ಆಡಳಿತವು ತಡೆಯಬಹುದು. ವೀಕ್ಷಕರು ತಮ್ಮ ಅಂಟಿಕೊಂಡಿರುವ ಬೆರಳುಗಳಿಂದ ಆಸನಗಳ ಮೇಲೆ ಒರೆಸಿದರೆ, ನಂತರ ಸ್ವಚ್ಛಗೊಳಿಸಲು ದುಡ್ಡು ಯಾರು ಕೊಡುತ್ತಾರೆ..? 

ಅಲ್ಲದೆ, ಜನರು ತಂದೂರಿ ಚಿಕನ್ ಅನ್ನೂ ತರಬಹುದು. ಆಗ ಮಲ್ಟಿಪ್ಲೆಕ್ಸ್‌ನಲ್ಲಿ ಮೂಳೆಗಳಿವೆ ಎಂದು ದೂರುಗಳು ಬರಬಹುದು. ಅದು ಜನರಿಗೆ ತೊಂದರೆಯಾಗಬಹುದು. ಅಲ್ಲದೆ, ಯಾರೂ ಅವರನ್ನು ಪಾಪ್‌ಕಾರ್ನ್ ಖರೀದಿಸಲು ಒತ್ತಾಯಿಸುವುದಿಲ್ಲ’’ ಎಂದೂ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ಉಚಿತ ನೀರು ಕೊಡಬೇಕೆಂದು ಬೇಕಾದ್ರೆ ಹೇಳಬಹುದು. ಆದರೆ, ಮಲ್ಟಿಪ್ಲೆಕ್ಸ್‌ ಅಥವಾ ಥಿಯೇಟರ್‌ನವರು ನಿಂಬು ಪಾನಿಯನ್ನು ₹ 20 ಕ್ಕೆ ಮಾರುತ್ತಾರೆ ಎಂದು ಭಾವಿಸೋಣ, ಆದರೆ, ಜನರು ಇದನ್ನು ವಿರೋಧಿಸಿ, ನಾನು ನಿಂಬೆ ಹಣ್ಣನ್ನು ಹೊರಗಿನಿಂದ ಖರೀದಿಸಿ ಫ್ಲಾಸ್ಕ್‌ನಲ್ಲಿ ಹಿಸುಕಿ ಥಿಯೇಟರ್ ಒಳಗೆ ಅದನ್ನು ತಯಾರಿಸುತ್ತೇನೆ ಎಂದು ಹೇಳಲಾಗುವುದಿಲ್ಲ ಎಂದೂ ಅವರು ವಿಚಾರಣೆ ವೇಳೆ ಅಭಿಪ್ರಾಯ ಪಟ್ಟಿದ್ದಾರೆ. 

Follow Us:
Download App:
  • android
  • ios