ನವದೆಹಲಿ(ಡಿ.21): ನೀವು ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮುಂತಾದ ಆನ್‌ಲೈನ್‌ ಇ-ಕಾಮರ್ಸ್‌ ತಾಣಗಳಲ್ಲಿ ಆಗಾಗ ಶಾಪಿಂಗ್‌ ಮಾಡುತ್ತೀರಾ? ಹಾಗಿದ್ದರೆ ಹುಷಾರಾಗಿರಿ! ಕಳೆದ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಇ-ಕಾಮರ್ಸ್‌ ಕಂಪನಿಗಳು ನಡೆಸಿದ ‘ಬಿಗ್‌ ಬಿಲಿಯನ್‌ ಡೇ’ ವೇಳೆ ಚೀನಾದ ಹ್ಯಾಕರ್‌ಗಳು ಲಕ್ಷಾಂತರ ಭಾರತೀಯ ಗ್ರಾಹಕರಿಗೆ ಟೋಪಿ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ದೆಹಲಿ ಮೂಲದ ಸೈಬರ್‌ಪೀಸ್‌ ಫೌಂಡೇಶನ್‌ ಎಂಬ ಸೈಬರ್‌ ಭದ್ರತೆ ಸಂಸ್ಥೆ ಇದನ್ನು ಪತ್ತೆಹಚ್ಚಿದೆ.

ಚೀನಾದ ಗಾಂಗ್‌ಡಾಂಗ್‌ ಹಾಗೂ ಹೆನಾನ್‌ ಪ್ರಾಂತದಲ್ಲಿರುವ ಹ್ಯಾಕರ್‌ಗಳು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಗ್ರಾಹಕರಿಗೆ ಲಿಂಕ್‌ಗಳನ್ನು ಕಳುಹಿಸಿ, ಇದನ್ನು ಕ್ಲಿಕ್‌ ಮಾಡಿದರೆ ನಿಮಗೆ ಒಪ್ಪೋ ಎಫ್‌17 ಫೋನ್‌ ಬಹುಮಾನ ಬಂದಿದೆಯೇ ಎಂಬುದು ತಿಳಿಯುತ್ತದೆ ಎಂದಿದ್ದಾರೆ. ಕ್ಲಿಕ್‌ ಮಾಡಿದ ಗ್ರಾಹಕರಿಗೆ ‘ನಿಮಗೆ ಬಹುಮಾನ ಬಂದಿದೆ. ಈ ಲಿಂಕನ್ನು ವಾಟ್ಸಾಪ್‌ನಲ್ಲಿ ಎಲ್ಲರಿಗೂ ಕಳುಹಿಸಿ’ ಎಂಬ ಸೂಚನೆ ಕಳಿಸಿದ್ದಾರೆ. ವಾಟ್ಸಾಪ್‌ನಲ್ಲಿ ಆ ಲಿಂಕ್‌ ಸ್ವೀಕರಿಸಿ ಕ್ಲಿಕ್‌ ಮಾಡಿದವರೆಲ್ಲರ ಮೊಬೈಲ್‌ಗೆ ‘ಸ್ಪಿನ್‌ ದಿ ಲಕ್ಕಿ ವೀಲ್‌ ಸ್ಕಾ್ಯಮ್‌’ ಮಾದರಿಯ ವೈರಸ್‌ ಅಂಟಿಕೊಂಡಿದೆ. ಜನರು ತಮಗೆ ಮೊಬೈಲ್‌ ಫೋನ್‌ ಬಹುಮಾನ ಬಂದಿದೆ ಎಂದು ಭಾವಿಸಿ ಮೋಸಹೋಗಿದ್ದಾರೆ ಎಂದು ಸೈಬರ್‌ಪೀಸ್‌ ಫೌಂಡೇಶನ್‌ ಹೇಳಿದೆ.

ವಿಶೇಷವೆಂದರೆ ವಂಚಕರು ತಮ್ಮ ಡೊಮೇನ್‌ಗಳನ್ನು ಪ್ರಸಿದ್ಧ ‘ಅಲಿಬಾಬಾ’ ಕಂಪನಿಯ ಕ್ಲೌಡ್‌ ಕಂಪ್ಯೂಟಿಂಗ್‌ ಪ್ಲಾಟ್‌ಫಾರಂನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಇಂತಹ ಇ-ಕಾಮರ್ಸ್‌ ಹಗರಣಗಳು ಹೊಸತಲ್ಲ. ಆದರೆ, ಚೀನಾದ ಸೈಬರ್‌ ಯುದ್ಧೋನ್ಮಾದದ ಸಂಸ್ಥೆಗಳು ಭಾರತದ ಮೇಲೆ ಈಗ ಪದೇಪದೇ ಇಂತಹ ಅಸ್ತ್ರ ಪ್ರಯೋಗಿಸುತ್ತಿರುವುದು ಆತಂಕಕಾರಿ ಎಂದು ಫೌಂಡೇಶನ್‌ ಅಭಿಪ್ರಾಯಪಟ್ಟಿದೆ.