ಬೀಜಿಂಗ್(ಅ.20)‌: ಇಡೀ ವಿಶ್ವಕ್ಕೆ ಕೊರೋನಾ ಕಂಟಕ ತಂದು, ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡಿರುವ ಚೀನಾ, ತಾನು ಮಾತ್ರ ಭರ್ಜರಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ಜನವರಿಯಿಂದ ವಿತ್ತೀಯ ವರ್ಷ ಹೊಂದಿರುವ ಚೀನಾದ 3ನೇ ತ್ರೈಮಾಸಿಕ ವರದಿ ಸೋಮವಾರ ಪ್ರಕಟವಾಗಿದ್ದು, ಆರ್ಥಿಕತೆ ಭರ್ಜರಿ ಶೇ.4.9ರಷ್ಟುಪ್ರಗತಿ ಸಾಧಿಸಿದೆ.

ಕೊರೋನಾದಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಚೀನಾ ಆರ್ಥಿಕತೆ ಶೇ.6.8 ಕುಸಿತ ಕಂಡಿತ್ತು. ಇದು ಕಳೆದ 44 ವರ್ಷಗಳಲ್ಲೇ ಅತ್ಯಂತ ಕಳಪೆ ಸಾಧನೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಆರ್ಥಿಕತೆ ಚೇತರಿಕೆಗೆ ಸರ್ಕಾರ ಕೈಗೊಂಡ ವಿವಿಧ ಕ್ರಮಗಳು ಮತ್ತು ಸಾರ್ವಜನಿಕರ ಬಳಕೆ ಹೆಚ್ಚಿಸಲು ಜಾರಿಗೆ ತಂದ ಯೋಜನೆಗಳ ಫಲವಾಗಿ 2ನೇ ತ್ರೈಮಾಸಿಕದಲ್ಲಿ ಶೇ.3.2ರಷ್ಟುಚೇತರಿಕೆ ಕಂಡುಬಂದಿತ್ತು. ಮೂರನೇ ತ್ರೈಮಾಸಿಕದ ವೇಳೆಗೆ ಚೇತರಿಕೆ ಪ್ರಮಾಣ ಶೇ.4.9ಕ್ಕೆ ಏರಿದೆ.

ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಚೀನಾ ಸರ್ಕಾರ, ವಿತ್ತೀಯ ವೆಚ್ಚ ಹೆಚ್ಚಿಸಿತ್ತು, ತೆರಿಗೆ ರಿಯಾಯಿತಿಗಳನ್ನು ಪ್ರಕಟಿಸಿತ್ತು, ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿತ್ತು ಮತ್ತು ಬ್ಯಾಂಕ್‌ಗಳು ಸರ್ಕಾರದಲ್ಲಿ ಇಡಬೇಕಾದ ಸುರಕ್ಷತಾ ಠೇವಣಿ ಪ್ರಮಾಣ ಇಳಿಕೆ ಮಾಡಿತ್ತು.

ವಿಶ್ವದಲ್ಲೇ ಮೊದಲಿಗೆ ಕೊರೋನಾ ಪತ್ತೆಯಾದರೂ ಅದನ್ನು ಶೀಘ್ರವೇ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ ಚೀನಾ, ಮುಂದಿನ ದಿನಗಳಲ್ಲಿ ರಫ್ತು ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಆರ್ಥಿಕ ಪ್ರಾಬಲ್ಯವನ್ನು ಮತ್ತಷ್ಟುವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.