ಜಗದೀಶ ವಿರಕ್ತಮಠ 

ಬೆಳಗಾವಿ(ಮಾ.06): ಜಿಲ್ಲೆಯ ವಿಭಜನೆ ನಿರೀಕ್ಷೆ ಹೊಂದಿದ್ದ ಚಿಕ್ಕೋಡಿ ಭಾಗದ ಜನತೆಗೆ ರಾಜ್ಯ ಸರ್ಕಾರ 2020-21 ನೇ ಸಾಲಿನ ಬಜೆಟ್‌ನಲ್ಲಿ ಹುಸಿಗೊಳಿಸಿದೆ. ಇದರಿಂದಾಗಿ ಜಿಲ್ಲೆಯ ವಿಭಜನೆಯ ಕನಸು ಕಂಡಿದ್ದ ಹೋರಾಟಗಾರರು ತೀವ್ರ ನಿರಾಸೆಗೊಳಿಸಿದೆ. 

ಈ ಮೂಲಕ ಹೋರಾಟಗಾರರ ಕಿಚ್ಚನ್ನು ಹೆಚ್ಚಿಸುವ ಕಾರ್ಯವನ್ನು ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮಾಡಿದಂತಾಗಿದೆ. ಈಗಾಗಲೇ ಶೈಕ್ಷಣಿಕ ಜಿಲ್ಲೆಯಂದು ಕರೆಯಲ್ಪಡುವ ಚಿಕ್ಕೋಡಿಯನ್ನು ಪ್ರತ್ಯೇಕವಾಗಿ ಜಿಲ್ಲೆಯನ್ನಾ ಗಿಸಬೇಕು ಎಂದು ಕಳೆದ 10-15 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ನಂತರ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡುವ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಧ್ವನಿ ಎತ್ತದಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಾರಿಯ ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಮೊದಲಿಗೆ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ನಿರೀಕ್ಷೆ ಹೊಂದಿದ್ದರು. ಆದರೆ ಹೋರಾಟಗಾರರ ನಿರೀಕ್ಷೆ ಯನ್ನು ಹುಸಿಗೊಳಿಸಿದ್ದ ಸರ್ಕಾರದ ನಡೆ ಹಾಗೂ ಪ್ರತ್ಯೇಕ ಜಿಲ್ಲೆಯ ಜನಪ್ರತಿನಿಧಿಗಳ ವಿಭಜನೆಗೆ ಇಚ್ಛಾಶಕ್ತಿ ಕೊರತೆಯಿಂದ ಚಿಕ್ಕೋಡಿ ಭಾಗದ ಜನರು ಹಾಗೂ ಪ್ರತ್ಯೇಕ ಜಿಲ್ಲಾ ಹೋರಾಟ ಗಾರರಲ್ಲಿ ಅಸಮಾಧಾನ ಮೂಡಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾ ವಿಭಜನೆಗೆ ಹೆಚ್ಚಿನ ಒತ್ತು ನೀಡುತ್ತಾರೆಂಬ ಕುತೂಹಲದಲ್ಲಿ ಇದ್ದರು. ಬೆಳಗಾವಿಯಿಂದ ಅಥಣಿ, ರಾಯಬಾಗ ಸೇರಿದಂತೆ ಗಡಿಭಾಗದ ಹಳ್ಳಿಗಳು ಸುಮಾರು 200 ಕಿಮೀ ಅಂತರದಲ್ಲಿವೆ. ಯಾವುದೇ ಕೇಲಸ ಕಾರ್ಯಗಳನ್ನು ಮಾಡಿಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಬರಬೇಕಾದಲ್ಲಿ ಸುಮಾರು 3-4 ಗಂಟೆಗಳ ಕಾಲ ಪ್ರಯಾಣ ಬೆಳೆಸಬೇಕು. ಒಂದು ವೇಳೆ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿ ಇಲ್ಲದೇ ಹೊದಲ್ಲಿ ಆ ದಿನದ ಸಮಯವೇ ವ್ಯರ್ಥ. ಅಲ್ಲದೇ ಸಾವಿರಾರು ರುಪಾಯಿ ಖರ್ಚಾಗುತ್ತದೆ. ಇದರಿಂದಾಗಿ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪತ್ಯೇಕ ಜಿಲ್ಲೆಯನ್ನಾಗಿಸಿದ್ದಲ್ಲಿ ಚಿಕ್ಕೋಡಯಿಂದ 72 ಕಿ. ಮೀ.ದೂರದ ಅಥಣಿ, 25 ಕಿಮೀ ರಾಯಬಾಗ, 22 ಕಿಮೀ ಅಂತರದಲ್ಲಿರುವ ಹುಕ್ಕೇರಿ, ನಿಪ್ಪಾಣಿ ಹಾಗೂ ಕಾಗವಾಡ ತಾಲೂಕಿನ ಜನತೆಗೆ ಅನುಕೂ ಲವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. 

ನಿಯೋಜಿತ ಜಿಲ್ಲೆಯಾಗಿರುವ ಚಿಕ್ಕೋಡಿಯು 6,62,996 ಹೆಕ್ಟೇರನಷ್ಟು ವಿಸ್ತಿರ್ಣ ಹೊಂದಿದೆ. ಜತೆಗೆ ಚಿಕ್ಕೋಡಿ ಲೋಕಸಭೆ ಹಾಗೂ 8 ವಿಧಾನಸಭಾ ಕ್ಷೇತ್ರಗಳಿರುವುದರಿಂದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಹೋರಾಟಗಳು ನಡೆಯುತ್ತಲಿವೆ. ಇತ್ತ ಹೋರಾಟಗಾರರಿಗೆ ಭರವಸೆಗಳ ಮಾತುಗಳನ್ನಾಡುವ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕದೆ ಇಲ್ಲದ ಸಬೂಬು ಹೇಳುವ ಕಾರ್ಯ ಮಾಡುವತ್ತಿರುವುದರಿಂದ ಚಿಕ್ಕೋಡಿ ಭಾಗದ ಜನರು ಪ್ರತ್ಯೇಕ ಜಿಲ್ಲೆಯ ಕಂಡ ಕನಸ್ಸು ನನಸಾಗುತ್ತಿಲ್ಲ.