ಏಪ್ರಿಲ್‌ 1 ಹೊಸ ಆರ್ಥಿಕ ವರ್ಷದ ಆರಂಭ. ಈ ಹಿನ್ನೆಲೆಯಲ್ಲಿ ಏ.1ರಿಂದ ಯಾವೆಲ್ಲಾ ನಿಯಮಗಳು ಬದಲಾಗುತ್ತವೆ ಎಂಬ ವಿವರ ಇಲ್ಲಿದೆ.

ಏಪ್ರಿಲ್‌ 1 ಹೊಸ ಆರ್ಥಿಕ ವರ್ಷದ ಆರಂಭ. ಹೀಗಾಗಿ ಹಲವು ಆರ್ಥಿಕ ಬದಲಾವಣೆ ಮತ್ತು ಏರಿಳಿತಗಳಿಗೆ (Price Hike) ಏಪ್ರಿಲ್ ತಿಂಗಳು ಸಾಕ್ಷಿ ಆಗಲಿದೆ. ಈ ಹಿನ್ನೆಲೆಯಲ್ಲಿ ಏ.1ರಿಂದ ಯಾವೆಲ್ಲಾ ನಿಯಮಗಳು ಬದಲಾಗುತ್ತವೆ ಎಂಬ ವಿವರ ಇಲ್ಲಿದೆ.

ಔಷಧಗಳು ದುಬಾರಿ: ನೋವು ನಿವಾರಕಗಳು, ಆ್ಯಂಟಿ ವೈರಸ್‌ಗಳು ಸೇರಿದಂತೆ ಅನೇಕ ಔಷಧಗಳ ಬೆಲೆ ಏ.1ರಿಂದ ಏರಿಕೆಯಾಗಲಿದೆ. ಶೇ.10ರಷ್ಟುಬೆಲೆ ಏರಿಕೆಗೆ ಸರ್ಕಾರ ಅನುಮೋದನೆ ನೀಡಿದೆ. ಪ್ಯಾರಸಿಟಮಲ್‌, ಆ್ಯಂಟಿಬಯಾಟಿಕ್‌ ಅಜಿತ್ರೊಮೈಸಿನ್‌, ಬ್ಯಾಕ್ಟಿರಿಯಲ್‌ ಸೋಂಕು ನಿವಾರಕಗಳು, ಆ್ಯಂಟಿ ಅನೀಮಿಯಾ, ವಿಟಮಿನ್ಸ್‌ ಮತ್ತು ಮಿನರಲ್ಸ್‌ ಸೇರಿದಂತೆ 800 ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ.

ಕ್ರಿಪ್ಟೋ ಕರೆನ್ಸಿಗೆ ಹೊಸ ರೂಲ್ಸ್‌: ಏ.1ರಿಂದ ಕ್ರಿಪ್ಟೋಕರೆನ್ಸಿ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಡಿಜಿಟಲ್‌ ಕರೆನ್ಸಿ ಮೇಲೆ ಸರ್ಕಾರ ತೆರಿಗೆ ವಿಧಿಸಲಿದೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆ ವೇಳೆ ಗಳಿಸಿದ ಆದಾಯದ ಮೇಲೆ ಶೇ.30ರಷ್ಟನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಇವುಗಳ ಖರೀದಿ ವೆಚ್ಚವನ್ನು ಕ್ಯಾರಿಡ್‌ ಫಾರ್ವರ್ಡ್‌ ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ, ಕ್ರಿಪ್ಟೋ ವಹಿವಾಟಿಗೆ ಶೇ.1ರಷ್ಟುಟಿಡಿಎಸ್‌ ಕಡಿತಗೊಳಿಸಲಾಗುತ್ತದೆ. ಕ್ರಿಪ್ಟೋ ಆಸ್ತಿಯನ್ನು ಉಡುಗೊರೆಯಾಗಿ ಸ್ವೀಕರಿಸಿದರೆ, ಸ್ವೀಕರಿಸುವ ವ್ಯಕ್ತಿ ಅವುಗಳ ಮೇಲಿನ ತೆರಿಗೆ ಪಾವತಿಸಬೇಕು

ಇದನ್ನೂ ಓದಿ:ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಧರಣಿ, ಬೆಲೆಯೇರಿಕೆ ಮುಕ್ತ ಭಾರತಕ್ಕೆ ಕಾಂಗ್ರೆಸ್ ಅಭಿಯಾನ

ಪಿಎಫ್‌ ಮೇಲೆ ತೆರಿಗೆ: ಕೇಂದ್ರ ಸರ್ಕಾರ ಏ.1ರಿಂದ ಹೊಸ ಆದಾಯ ತೆರಿಗೆ ಕಾನೂನನ್ನು ಜಾರಿ ಮಾಡಲಿದೆ. ಇದರ ಪರಿಣಾಮ ಅಸ್ತಿತ್ವದಲ್ಲಿರುವ ಪಿಎಫ್‌ ಖಾತೆಗಳನ್ನು ಎರಡು ಭಾಗಗಳಾಗಿ ವಿಭಾಗಿಸಲಾಗುತ್ತದೆ. ಅದರ ಮೇಲೆ ತೆರಿಗೆ ಕೂಡ ವಿಧಿಸಲಾಗುತ್ತದೆ. ಅಂದರೆ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಕೊಡುಗೆ ಎರಡೂ ಸೇರಿ ವಾರ್ಷಿಕ 2.50 ಲಕ್ಷ ರು. ಮೀರುವ ಪಿಎಫ್‌ ಖಾತೆಗಳಿಗೆ ಇನ್ಮುಂದೆ ಸರ್ಕಾರ ತೆರಿಗೆ ವಿಧಿಸಲಿದೆ. ಆದರೆ ಸರ್ಕಾರಿ ನೌಕರರಿಗೆ ಮಾತ್ರ ಗರಿಷ್ಠ ಮಿತಿಯನ್ನು 5ಲಕ್ಷ ರು.ಗೆ ನಿಗದಿಪಡಿಸಲಾಗಿದೆ.

ಅಂಚೆ ಉಳಿತಾಯ ಖಾತೆಗೆ ಬ್ಯಾಂಕ್‌ ಖಾತೆ ಕಡ್ಡಾಯ: ಏ.1ರಿಂದ ಅಂಚೆ ಕಚೇರಿಯ ಸಣ್ಣ ಉಳಿತಾಯ ಖಾತೆ ನಿಯಮಗಳು ಬದಲಾಗಲಿವೆ. ಹೊಸ ನಿಯಮಗಳ ಪ್ರಕಾರ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಉಳಿತಾಯ ಖಾತೆ ಅಥವಾ ಬ್ಯಾಂಕ್‌ ಖಾತೆ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಏಕೆಂದರೆ, ಈ ಸಣ್ಣ ಉಳಿತಾಯ ಖಾತೆಗಳಿಂದ ಬರುವ ಬಡ್ಡಿದರವನ್ನು ಉಳಿತಾಯ ಖಾತೆಗೆ ಇನ್ಮುಂದೆ ನೇರವಾಗಿ ಜಮೆ ಮಾಡಲಾಗುತ್ತದೆ. ಈಗಾಗಲೇ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಅದನ್ನು ಪೋಸ್ಟ್‌ ಆಫೀಸ್‌ನ ಸಣ್ಣ ಉಳಿತಾಯ ಖಾತೆಗೆ ಲಿಂಕ್‌ ಮಾಡಬಹುದು.

ಮನೆಕೊಳ್ಳುವವರಿಗೆ ಶಾಕ್‌: ಏ.1ರಿಂದ ಕೇಂದ್ರ ಸರ್ಕಾರ ಸೆಕ್ಷನ್‌ 80ಇಇಎ ಅಡಿಯಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ನೀಡಲಾಗುತ್ತಿರುವ ತೆರಿಗೆ ವಿನಾಯ್ತಿಯನ್ನು ರದ್ದು ಮಾಡಲಿದೆ. 2019-20ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 45 ಲಕ್ಷ ರು.ವರೆಗಿನ ಮನೆ ಖರೀದಿದಾರರಿಗೆ 1.50 ಲಕ್ಷ ರು.ಗಳ ಹೆಚ್ಚುವರಿ ಆದಾಯ ತೆರಿಗೆ ಪ್ರಯೋಜನವನ್ನು ಘೋಷಿಸಿತ್ತು.

ಥರ್ಡ್‌ ಪಾರ್ಟಿ ವಿಮೆ ದುಬಾರಿ: ಹೊಸ ಬೈಕು ಅಥವಾ ಕಾರು ಖರೀದಿ ಏ.1ರಿಂದ ದುಬಾರಿಯಾಗಲಿದೆ. ಥರ್ಡ್‌ ಪಾರ್ಟಿ ಮೋಟಾರ್‌ ವಿಮೆಯನ್ನು ಹೆಚ್ಚಿಸುವುದಾಗಿ ರಸ್ತೆ ಮತ್ತು ಸಾರಿಗೆ ಸಚಿವಾಲಯ ಘೋಷಿಸಿದೆ. ಇದರಿಂದಾಗಿ ಗ್ರಾಹಕರು ಕಾರು ಅಥವಾ ಬೈಕು ಕೊಳ್ಳಲು ಶೇ.17ರಿಂದ 23ರಷ್ಟುಹೆಚ್ಚುವರಿ ಹಣ ನೀಡಬೇಕಾಗುತ್ತದೆ.

ಇದನ್ನೂ ಓದಿ:ಇಂಧನ ಬೆಲೆ ಏರಿಕೆಗೆ ಏನು ಕಾರಣ? ಸಚಿವೆ ನಿರ್ಮಲಾ ಕೊಟ್ಟ ಉತ್ತರವಿದು

ಜಿಎಸ್‌ಟಿ ನಿಮಯ ಸರಳ: ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ… ಮಂಡಳಿಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಇ-ಚಲನ್‌ಗಳ ವಿತರಣೆಯ ವಹಿವಾಟಿನ ಮಿತಿಯನ್ನು ಹಿಂದಿನ 50 ಕೋಟಿ ರುಪಾಯಿ ನಿಗದಿತ ಮಿತಿಯಿಂದ 20 ಕೋಟಿ ರುಪಾಯಿಗೆ ಇಳಿಸಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ?: ಪ್ರತಿ ತಿಂಗಳಂತೆ ಏಪ್ರಿಲ್ ಮೊದಲ ದಿನದಂದು ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಬದಲಾವಣೆ ಆಗಬಹುದು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

ವಿಶೇಷ ಎಫ್‌ಡಿ ರದ್ದು:  ಕೊರೋನಾ ಸಮಯದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಎಚ್‌ಡಿಎಫ್‌ಸಿ, ಬ್ಯಾಂಕುಗಳು ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಯನ್ನು ಜಾರಿಗೊಳಿಸಿದ್ದವು. ಸದ್ಯ ಏ.1ರಿಂದ ಈ ಯೋಜನೆಯನ್ನು ರದ್ದು ಮಾಡಲು ಕೆಲ ಬ್ಯಾಂಕುಗಳು ನಿರ್ಧರಿಸಿವೆ.

ತಂಬಾಕು ಮಾರಲು ಪರವಾನಗಿ ಬೇಕು: ಜಾರ್ಖಂಡನ ನಗರ ಪ್ರದೇಶಗಳಲ್ಲಿ ಏ.1ರಿಂದ ಪರವಾನಗಿ ಇಲ್ಲದೆ ತಂಬಾಕು ಮಾರುವಂತಿಲ್ಲ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ತಿಳಿಸಿದ್ದಾರೆ.

ಮ್ಯುಚುವಲ್‌ ಫಂಡ್‌ಗೆ ಯುಪಿಐ: ಏಪ್ರಿಲ್ 1ರಿಂದ, ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯ ಪಾವತಿಯನ್ನು ಚೆಕ್‌, ಬ್ಯಾಂಕ್‌ ಡ್ರಾಫ್‌್ಟಅಥವಾ ಇತರ ಯಾವುದೇ ಭೌತಿಕ ಮಾಧ್ಯಮದ ಮೂಲಕ ಮಾಡಲು ಸಾಧ್ಯವಿಲ್ಲ. ಇನ್ಮುಂದೆ ಮ್ಯೂಚುವಲ… ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಯುಪಿಐ ಅಥವಾ ನೆಟ್‌ಬ್ಯಾಂಕಿಂಗ್‌ ಕಡ್ಡಾಯವಾಗಿ ಬಳಸಬೇಕು.