ನವದೆಹಲಿ(ಮಾ.30): ಇನ್ನೊಂದು ವರ್ಷದೊಳಗೆ ದೇಶಾದ್ಯಂತ ಎಲ್ಲಾ ಜಮೀನು, ಜಾಗ ಹಾಗೂ ಪ್ಲಾಟ್‌ಗಳಿಗೆ ಆಧಾರ್‌ ರೀತಿಯ ವಿಶಿಷ್ಟ14 ಡಿಜಿಟ್‌ಗಳ ಸಂಖ್ಯೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ. ಇದು ಪೂರ್ಣಗೊಂಡ ನಂತರ ದೇಶದ ಎಲ್ಲಾ ಕೃಷಿ ಭೂಮಿ ಹಾಗೂ ಇನ್ನಿತರ ರೀತಿಯ ಭೂ ಒಡೆತನಗಳ ಸ್ಪಷ್ಟದಾಖಲೆ ಸರ್ಕಾರಕ್ಕೆ ಲಭಿಸಲಿದೆ ಮತ್ತು ಭೂ ಮಾಲಿಕರಿಗೂ ವ್ಯಾಜ್ಯಮುಕ್ತ ದಾಖಲೆಗಳು ಲಭಿಸಲಿವೆ ಎಂದು ಹೇಳಲಾಗಿದೆ.

‘ಭೂ ಆಧಾರ್‌’ ಎಂದು ಕರೆಯಬಹುದಾದ ‘ಯೂನಿಕ್‌ ಲ್ಯಾಂಡ್‌ ಪಾರ್ಸಲ್‌ ಐಡೆಂಟಿಫಿಕೇಶನ್‌ ನಂಬರ್‌’ (ಯುಎಲ್‌ಪಿಐಎನ್‌) ಎಂಬ 14 ಅಂಕಿಗಳ ಸಂಖ್ಯೆಯನ್ನು ಭೂ ಮಾಲಿಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಭೂ ಸಂಪನ್ಮೂಲಗಳ ಇಲಾಖೆಯು ಗ್ರಾಮೀಣಾಭಿವೃದ್ಧಿ ಸ್ಥಾಯಿ ಸಮಿತಿಗೆ ಇತ್ತೀಚೆಗೆ ತಿಳಿಸಿದೆ. ಈ ಕುರಿತ ಮಾಹಿತಿ ಲೋಕಸಭೆಗೂ ಕಳೆದ ವಾರ ಸಲ್ಲಿಕೆಯಾಗಿದೆ.

2019ರಲ್ಲೇ ಸರ್ಕಾರ ಇದನ್ನು ಜಾರಿಗೆ ತರುವ ಚಿಂತನೆ ಆರಂಭಿಸಿತ್ತು. ಈಗ ದೇಶದ 10 ರಾಜ್ಯಗಳಲ್ಲಿ ಈ ಯೋಜನೆ ಜಾರಿಯ ಹಂತದಲ್ಲಿದ್ದು, 2022ರ ಮಾಚ್‌ರ್‍ ಒಳಗೆ ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಲಿದೆ. ನಂತರದ ಒಂದೆರಡು ವರ್ಷದಲ್ಲಿ ಎಲ್ಲಾ ಭೂ ದಾಖಲೆಗಳನ್ನೂ ಡಿಜಿಟಲೀಕರಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಕಡಿಮೆಯಾಗುವುದರ ಜೊತೆಗೆ ವಂಚನೆ, ಭೂಮಿ ಒತ್ತುವರಿ, ಕಳವು ಇತ್ಯಾದಿಗಳು ಕಡಿಮೆಯಾಗಲಿವೆ. ವಿಶೇಷವಾಗಿ ಸರಿಯಾದ ದಾಖಲೆಗಳಿಲ್ಲದ ಗ್ರಾಮೀಣ ಭಾಗದ ಭೂಮಾಲಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಇದೇ ವೇಳೆ ಭೂಮಿಯ ಒಡೆತನದ ದಾಖಲೆಯ ಜೊತೆಗೆ ಜನರ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಯೋಜನೆ ಕೂಡ ಆರಂಭವಾಗಲಿದೆ. ಆದರೆ, ಇದು ಐಚ್ಛಿಕವಾಗಿರಲಿದೆ. ಇದಕ್ಕೆ ಪ್ರತಿ ದಾಖಲೆಗೆ 3 ರು. ಹಾಗೂ ಆಧಾರ್‌ ದಾಖಲೆಗಳನ್ನು ಸೀಡ್‌ ಮಾಡಲು 5 ರು. ಶುಲ್ಕ ವಿಧಿಸುವ ಸಾಧ್ಯತೆಯಿದೆ.

ಇನ್ನು, ಪ್ರತಿ ಜಿಲ್ಲೆಯಲ್ಲೂ ಆಧುನಿಕ ಭೂ ದಾಖಲೆಗಳ ಕೋಶ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಒಂದು ಜಿಲ್ಲೆಗೆ 50 ಲಕ್ಷ ರು. ವೆಚ್ಚವಾಗಲಿದೆ. ಜೊತೆಗೆ, ರೆವಿನ್ಯೂ ಕೋರ್ಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನೊಂದಿಗೆ ಭೂ ದಾಖಲೆಗಳನ್ನು ಜೋಡಿಸಲು ನಿರ್ಧರಿಸಲಾಗಿದ್ದು, ಅದಕ್ಕೆ 270 ಕೋಟಿ ರು. ಖರ್ಚಾಗಲಿದೆ. ಮುಂದಿನ ಹಂತದಲ್ಲಿ ಭೂ ದಾಖಲೆಗಳನ್ನು ಬ್ಯಾಂಕ್‌ಗಳ ಜೊತೆಗೆ ಲಿಂಕ್‌ ಮಾಡಲಾಗುವುದು ಎಂದು ಸ್ಥಾಯಿ ಸಮಿತಿ ತಿಳಿಸಿದೆ.