ನವದೆಹಲಿ(ಜ.04): ಕರ್ನಾಟಕದ ಕೆಜಿಎಫ್‌ನಲ್ಲಿ 1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್‌ (ಭಾರತ್‌ ಅಥ್‌ರ್‍ ಮೂವ​ರ್‍ಸ್) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಈ ಕಂಪನಿಯಲ್ಲಿನ ಶೇ.26ರಷ್ಟುಷೇರುಗಳನ್ನು ಮಾರಾಟ ಮಾಡಲು ಹಾಗೂ ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನೂ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿದೆ.

ಬೆಮೆಲ್‌ನಲ್ಲಿ ಸದ್ಯ ಸರ್ಕಾರದ ಶೇ.54.03ರಷ್ಟುಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಗಳಿಸಿದೆ. ಇದೀಗ ಶೇ.26ರಷ್ಟುಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕೆ ಇಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರು. ಆದಾಯ ಹರಿದು ಬರುವ ನಿರೀಕ್ಷೆ ಇದೆ. ಶುಕ್ರವಾರ ಷೇರುಪೇಟೆಯಲ್ಲಿ ಬೆಮೆಲ್‌ ಕಂಪನಿಯ ಪ್ರತಿ ಷೇರು 974.25 ರು.ಗೆ ವಹಿವಾಟು ಮುಕ್ತಾಯಗೊಳಿಸಿದೆ.

ಷೇರು ವಿಕ್ರಯ ಎರಡು ಹಂತಗಳಲ್ಲಿ ನಡೆಯಲಿದೆ. ಮಾ.1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್‌ ಕಾಂತಾ ಪಾಂಡೆ ಅವರು ಟ್ವೀಟ್‌ ಮಾಡಿದ್ದಾರೆ. ಷೇರು ವಿಕ್ರಯಕ್ಕಾಗಿ ಕೇಂದ್ರ ಸರ್ಕಾರ ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸಂಸ್ಥೆಯನ್ನು ಸಲಹೆಗಾರ ಸಂಸ್ಥೆಯನ್ನಾಗಿ ನೇಮಕ ಮಾಡಿದೆ.

ರಕ್ಷಣೆ, ರೈಲು, ವಿದ್ಯುತ್‌, ಗಣಿಗಾರಿಕೆ ಹಾಗೂ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಬೆಮೆಲ್‌ ಕಂಪನಿ ತೊಡಗಿಸಿಕೊಂಡಿದ್ದು, 2019-20ರಲ್ಲಿ 3028.82 ಕೋಟಿ ರು. ಆದಾಯವನ್ನು ಗಳಿಸಿದೆ. 2020ರ ಮಾ.31ಕ್ಕೆ ಅನುಗುಣವಾಗಿ 9795 ಕೋಟಿ ರು. ಆರ್ಡರ್‌ಗಳನ್ನು ಹೊಂದಿದೆ.