7 ಸೇವೆಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ತೆಗೆದು ಹಾಕುವ ನಿರ್ಣಯ| ಜಿಎಸ್‌ಟಿ ಕುರಿತು ಮಹತ್ವದ ನಿರ್ಣಯ ಕೈಗೊಂಡ ಕೇಂದ್ರ ಸರ್ಕಾರ| ಸಿನಿಮಾ ಟಿಕೆಟ್, ಟಿವಿ(32 ಇಂಚಿನ) ಡಿಜಿಟಲ್ ಕ್ಯಾಮರಾಗಳು, ವಿಡಿಯೋ ಗೇಮ್ ಕನ್ಸೋಲ್| ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ಶೇ. 18 ರ ಜಿಎಸ್‌ಟಿ ವ್ಯಾಪ್ತಿಗೆ| ಹೊಸ ಜಿಎಸ್‌ಟಿ ದರಗಳು ಜನೆವರಿ 1, 2019ರಿಂದ ಜಾರಿಗೆ ಬರಲಿದೆ
ನವದೆಹಲಿ(ಡಿ.22): ಮಹತ್ವದ ಬೆಳವಣಿಗೆಯೊಂದರಲ್ಲಿ 7 ಸೇವೆಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ತೆಗೆದು ಹಾಕುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ಸಿನಿಮಾ ಟಿಕೆಟ್, ಟಿವಿ(32 ಇಂಚಿನ) ಡಿಜಿಟಲ್ ಕ್ಯಾಮರಾಗಳು, ವಿಡಿಯೋ ಗೇಮ್ ಕನ್ಸೋಲ್‌ಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಅಲ್ಲದೇ ಲಿಥಿಯಂ ಬ್ಯಾಟರಿಗಳು, ಅಯೋನ್ ಬ್ಯಾಟರಿಗಳನ್ನೂ ಕೂಡ ಶೇ.28 ರ ಜಿಎಸ್‌ಟಿ ವ್ಯಾಪ್ತಿಯಿಂದ ಶೇ. 18 ರ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ.
ಈ ಎಲ್ಲ ವಸ್ತುಗಳನ್ನು ಇದೀಗ ಶೇ. 18 ರ ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದ್ದು, ಪ್ರಮುಖವಾಗಿ ಸಿನಿಮಾ ಟಿಕೆಟ್ ಮತ್ತು ಟಿವಿಯನ್ನು ಶೇ. 28 ರ ಜಿಎಸ್‌ಟಿಯಿಂದ ತೆಗೆದಿದ್ದು ಜನರಿಗೆ ಖುಷಿಯ ವಿಚಾರ ಎಂದು ಹೇಳಬಹುದು.
ಇನ್ನು ಈ ಎಲ್ಲಾ ವಸ್ತುಗಳನ್ನು ಶೇ. 28 ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಟ್ಟ ಪರಿಣಾಮ, ಈ ವ್ಯಾಪ್ತಿಯಲ್ಲಿ ಇದೀಗ ಕೇವಲ ಲಕ್ಸುರಿ ಅಥವಾ ಐಷಾರಾಮಿ ವಸ್ತುಗಳಷ್ಟೇ ಸೇರಿವೆ. ಅಲ್ಲದೇ ಸಿಮೆಂಟ್ ಮತ್ತು ಆಟೋ ಬಿಡಿಭಾಗಗಳನ್ನು ಶೇ.28ರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ನಿರಾಕರಿಸಲಾಗಿದೆ.
ಇದೇ ವೇಳೆ ಹೊಸ ಜಿಎಸ್‌ಟಿ ದರಗಳು ಜನೆವರಿ 1, 2019ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ಬೊಕ್ಕಸಕ್ಕೆ ಸುಮಾರು 5500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದೂ ಜೇಟ್ಲಿ ಮಾಹಿತಿ ನೀಡಿದ್ದಾರೆ.
