ನವದೆಹಲಿ(ಅ.27): ಕೊರೋನಾದಿಂದ ಹದಗೆಟ್ಟಿರುವ ದೇಶದ ಆರ್ಥಿಕತೆಗೆ ಮರುಜೀವ ನೀಡಲು 20 ಲಕ್ಷ ಕೋಟಿ ರು. ಮೊತ್ತದ ಆತ್ಮನಿರ್ಭರ ಪ್ಯಾಕೇಜ್‌ ಸೇರಿದಂತೆ ಮೂರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ದೀಪಾವಳಿ ಕೊಡುಗೆಯಾಗಿ 4ನೇ ಆರ್ಥಿಕ ಪ್ಯಾಕೇಜ್‌ ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ.

ಈ ಪ್ಯಾಕೇಜ್‌ ಮುಖ್ಯವಾಗಿ ಲಾಕ್‌ಡೌನ್‌ನಿಂದ ಹಾಗೂ ಬೇಡಿಕೆ ಕುಸಿತದಿಂದ ಕಂಗೆಟ್ಟಿರುವ ಉದ್ದಿಮೆಗಳಿಗೆ ಆರ್ಥಿಕ ಉತ್ತೇಜನ ನೀಡುವ ರೂಪದಲ್ಲಿರುತ್ತದೆ. ಜೊತೆಗೆ, ದೇಶಾದ್ಯಂತ 1ರಿಂದ 4ನೇ ಹಂತದ ನಗರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರೋತ್ಸಾಹ ನೀಡಲಿದೆ. ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ, ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಉದ್ದಿಮೆಗಳಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಹಿಂದೆ ಉದ್ದೇಶಿಸಿದ್ದಂತೆ ನಗರ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಬಿಡುವ ಸಾಧ್ಯತೆಯಿದೆ. ಅದರ ಬದಲು ಮೂಲಸೌಕರ್ಯ ನಿರ್ಮಾಣಕ್ಕೆ ಉತ್ತೇಜನ ನೀಡಲು 20-25 ದೊಡ್ಡ ಯೋಜನೆಗಳನ್ನು ಜಾರಿಗೊಳಿಸುವ ಸಾಧ್ಯತೆಯಿದ್ದು, ಅದರಲ್ಲಿ ನವಿ ಮುಂಬೈ ಮತ್ತು ಗ್ರೇಟರ್‌ ನೋಯ್ಡಾದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯೂ ಸೇರಿರುತ್ತದೆ ಎಂದು ಮೂಲಗಳು ಹೇಳಿವೆ.