ನವದೆಹಲಿ(ಮಾ.21): ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ಇದೆ. ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಜು.1ರಿಂದ ನೀಡಲಾಗುತ್ತದೆ ಎಂದು ಘೋಷಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟುತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಕೊರೋನಾ ಕಾರಣ ಅವರಿಗೆ 2020ರ ಜ.1, ಜು.1 ಹಾಗೂ 2021ರ ಜ.1ರ ಡಿಎ ಕಂತು ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಒಮ್ಮೆಲೇ ಜುಲೈ 1ರಂದು ತಡೆ ಹಿಡಿದ 3 ಕಂತು ಸೇರಿ ಒಟ್ಟು 4 ಕಂತಿನ ಡಿಎ (17 + 3 + 4 + 4) ಬಿಡುಗಡೆ ಆಗಲಿದ್ದು, ಇದರಿಂದಾಗಿ ಶೇ.28ರಷ್ಟುಡಿಎ ಪಡೆದಂತಾಗುತ್ತದೆ.

7 ನೇ ವೇತನ ಆಯೋಗದ (ಸಿಪಿಸಿ) ಪ್ರಕಾರ ಉದ್ಯೋಗಿಯೊಬ್ಬರು 21,000 ಮೂಲ ವೇತನ ಪಡೆಯುತ್ತಿದ್ದರೆ, 7ನೇ ಸಿಪಿಸಿ ವೇತನ 52,970 ರು. (21000*2.57) ಆಗಲಿದೆ. ಜೊತೆಗೆ 7ನೇ ವೇತನ ಆಯೋಗದ ತುಟ್ಟಿಭತ್ಯೆ, ಎಚ್‌ಆರ್‌ಎ ಹಾಗೂ ಪ್ರಯಾಣ ಭತ್ಯೆ ಸೌಲಭ್ಯಕ್ಕೂ ಅರ್ಹರಾಗುತ್ತಾರೆ.