ನವದೆಹಲಿ[ಜ.07]: 1038 ಕೋಟಿ ರು. ಕಪ್ಪುಹಣವನ್ನು ಹಾಂಕಾಂಗ್‌ಗೆ 2014-15ರಲ್ಲಿ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 51 ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

51 ಕಂಪನಿಗಳಲ್ಲಿ ಚೆನ್ನೈ ಮೂಲದ ಮಾಲೀಕರೇ ಹೆಚ್ಚಿದ್ದು, ಯಾವುದೇ ಲೆಕ್ಕಪತ್ರವಿಲ್ಲದ 1038 ಕೋಟಿ ರು. ಹಣವನ್ನು ಹಾಂಕಾಂಗ್‌ಗೆ ಇವರು ವರ್ಗಾವಣೆ ಮಾಡಿದ್ದರು. ಬ್ಯಾಂಕ್‌ ಆಫ್‌ ಇಂಡಿಯಾ, ಎಸ್‌ಬಿಐ ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಅನಾಮಧೇಯ ಅಧಿಕಾರಿಗಳು ಇದಕ್ಕೆ ಸಾಥ್‌ ನೀಡಿದ್ದರು ಎಂದು ಆರೋಪಿಸಲಾಗಿದೆ.

ಇದೇ 4 ಬ್ಯಾಂಕ್‌ಗಳಲ್ಲಿ 48 ಕಂಪನಿಗಳ 51 ಖಾತೆಗಳು ಇದ್ದವು. ಈ ಹಣವನ್ನು ಸಾಗಿಸಲೆಂದೇ ಖಾತೆ ಸೃಷ್ಟಿಮಾಡಲಾಗಿತ್ತು ಎಂದು ಸಿಬಿಐ ಶಂಕಿಸಿದೆ.

ಚೆನ್ನೈ ಮೂಲದ ಕಂಪನಿಗಳು ಸಣ್ಣ ಪ್ರಮಾಣದ ವಸ್ತುಗಳನ್ನು ಆಮದು ಮಾಡಿಕೊಂಡು, ಅವುಗಳಿಗೆ ಪಾವತಿ ರೂಪದಲ್ಲಿ ಭಾರೀ ಪ್ರಮಾಣದ ಹಣವನ್ನು ವಿದೇಶಕ್ಕೆ ರವಾನಿಸಿದ್ದರು. ಖರೀದಿಸಿದ ವಸ್ತುವಿಗೂ, ಪಾವತಿ ಮಾಡಿದ ಹಣಕ್ಕೂ ತಾಳೆ ಆಗಿರಲಿಲ್ಲ. ವಿಚಾರಣೆ ವೇಳೆ ಇದು ಕಪ್ಪು ಹಣ ವರ್ಗಾವಣೆಗೆ ಹೂಡಿದ ತಂತ್ರ ಎಂಬುದು ಬೆಳಕಿಗೆ ಬಂದಿತ್ತು.