ಹೊಸ ರೂಪ ಪಡೆದ ಆದಾಯ ತೆರಿಗೆ ವೆಬ್ ಸೈಟ್; ತೆರಿಗೆದಾರರಿಗೆ ಹಲವು ಆಯ್ಕೆ ಲಭ್ಯ
ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಹೊಸ ರೂಪ ಪಡೆದಿದ್ದು, ತೆರಿಗೆದಾರರಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ. ಇದರಲ್ಲಿ ಅನೇಕ ಬಳಕೆದಾರಸ್ನೇಹಿ ಇಂಟರ್ ಫೇಸ್ ಹಾಗೂ ಹೊಸ ಆಯ್ಕೆಗಳನ್ನು ಪರಿಚಯಿಸಲಾಗಿದೆ.

ನವದೆಹಲಿ (ಆ.30): ಆದಾಯ ತೆರಿಗೆ ಇಲಾಖೆ ತನ್ನ ವೆಬ್ ಸೈಟ್ ಅನ್ನು ಮರುವಿನ್ಯಾಸಗೊಳಿಸಿ ಆ.26ರಂದು ಬಿಡುಗಡೆಗೊಳಿಸಿದೆ. ಮರುವಿನ್ಯಾಸಗೊಂಡ incometaxindia.gov.in ವೆಬ್ ಸೈಟ್ ನಲ್ಲಿ ಅನೇಕ ಬಳಕೆದಾರಸ್ನೇಹಿ ಇಂಟರ್ ಫೇಸ್ ಹಾಗೂ ಹೊಸ ಆಯ್ಕೆಗಳನ್ನು ಪರಿಚಯಿಸಲಾಗಿದೆ. ತೆರಿಗೆದಾರರಿಗೆ ಹೆಚ್ಚು ಅನುಕೂಲ ಕಲ್ಪಿಸಲು ಹಾಗೂ ಹೊಸ ತಂತ್ರಜ್ಞಾನದೊಂದಿಗೆ ಮುಂದುವರಿಯುವ ಉದ್ದೇಶದೊಂದಿಗೆ ಆದಾಯ ತೆರಿಗೆ ಇಲಾಖೆ ರಾಷ್ಟ್ರೀಯ ವೆಬ್ ಸೈಟ್ ಗೆ ಹೊಸ ರೂಪ ನೀಡಿದೆ. ಉದಯಪುರದಲ್ಲಿ ಆದಾಯ ತೆರಿಗೆ (ವ್ಯವಸ್ಥೆಗಳ) ನಿರ್ದೇಶನಾಲಯ ಆಯೋಜಿಸಿದ್ದ 'ಚಿಂತನ ಶಿಬಿರದಲ್ಲಿ' ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ನಿತಿನ್ ಗುಪ್ತಾ ಈ ವೆಬ್ ಸೈಟ್ ಗೆ ಚಾಲನೆ ನೀಡಿದರು. ಹಾಗಾದ್ರೆ ಈ ವೆಬ್ ಸೈಟ್ ನಲ್ಲಿ ಏನೆಲ್ಲ ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗಿದೆ? ತೆರಿಗೆದಾರರಿಗೆ ಯಾವೆಲ್ಲ ಮಾಹಿತಿಗಳು ಇದರ ಮೂಲಕ ಲಭ್ಯವಾಗಲಿವೆ? ಇಲ್ಲಿದೆ ಮಾಹಿತಿ.
ವೆಬ್ ಸೈಟ್ ನಲ್ಲಿ ಏನೆಲ್ಲ ಹೊಸದಿದೆ?
*ನೇರ ತೆರಿಗೆ ಕಾನೂನುಗಳ ಮಾಹಿತಿ: ಈ ವೆಬ್ ಸೈಟ್ ನಲ್ಲಿ ಆದಾಯ ತೆರಿಗೆ ಕಾಯ್ದೆ 1961 ಹಾಗೂ ಇತರ ಸಂಬಂಧಿತ ಕಾಯ್ದೆಗಳು, ನಿಯಮಗಳು, ಸುತ್ತೋಲೆಗಳು ಹಾಗೂ ಅಧಿಸೂಚನೆಗಳು ಸೇರಿದಂತೆ ಎಲ್ಲ ನೇರ ತೆರಿಗೆ ಕಾನೂನುಗಳ ಮಾಹಿತಿ ನೀಡಲಾಗಿದೆ. ಕಾನೂನುಗಳನ್ನು ಕ್ರಾಸ್ ರೆಫರೆನ್ಸ್ ಹಾಗೂ ಹೈಪರ್ ಲಿಂಕ್ ಮೂಲಕ ವಿವರಿಸಲಾಗಿದ್ದು, ಇದರಿಂದ ನಿಮಗೆ ಅಗತ್ಯವಾದ ಮಾಹಿತಿ ಪಡೆಯೋದು ಸುಲಭವಾಗಲಿದೆ.
*ಮೊಬೈಲ್ ಸ್ನೇಹಿ ಲೇಔಟ್: ವೆಬ್ ಸೈಟ್ ಅನ್ನು ತುಂಬಾ ಸುಂದರವಾಗಿ ಮನಸ್ಸಿಗೆ ಖುಷಿ ನೀಡುವಂತೆ ರೂಪಿಸಲಾಗಿದೆ. ಜೊತೆಗೆ ಬಳಕೆದಾರರಸ್ನೇಹಿ ಕೂಡ ಆಗಿದೆ. ಇನ್ನು ಮೊಬೈಲ್ ನಲ್ಲಿ ವೆಬ್ ಸೈಟ್ ತೆರೆದು ನೋಡಲು ಅನುಕೂಲವಾಗುವಂತಹ ಲೇಔಟ್ ರೂಪಿಸಲಾಗಿದೆ.
*ಕಾನೂನು, ಸೆಕ್ಷನ್, ನಿಯಮಗಳು ಹಾಗೂ ತೆರಿಗೆ ಒಪ್ಪಂದಗಳ ಹೋಲಿಕೆ: ಇನ್ನು ಈ ವೆಬ್ ಸೈಟ್ ಬಳಕೆದಾರರಿಗೆ ವಿವಿಧ ಕಾಯ್ದೆಗಳು, ಸೆಕ್ಷನ್ ಗಳು, ನಿಯಮಗಳು ಹಾಗೂ ತೆರಿಗೆ ಒಪ್ಪಂದಗಳನ್ನು ಹೋಲಿಸಿ ನೋಡಲು ಅವಕಾಶ ನೀಡಿದೆ. ಇದು ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ ವಿವಿಧ ತೆರಿಗೆ ನಿಬಂಧನೆಗಳ ನಡುವಿನ ವ್ಯತ್ಯಾಸ ಅರಿಯಲು ಹಾಗೂ ಅದರ ಪ್ರಯೋಜನಗಳನ್ನು ಅರಿತುಕೊಳ್ಳಲು ನೆರವು ನೀಡುತ್ತದೆ.
*ಮೆಗಾ ಮೆನು: ಈ ವೆಬ್ ಸೈಟ್ ದೊಡ್ಡ ಅಥವಾ ಮೆಗಾ ಮೆನು ಹೊಂದಿದ್ದು, ಇದರಲ್ಲಿ ವಿಷಯಗಳನ್ನು ಹೆಚ್ಚು ಸಮರ್ಪಕವಾಗಿ ಹಾಗೂ ಬಳಕೆದಾರರಸ್ನೇಹಿ ವಿಧಾನದಲ್ಲಿ ಜೋಡಿಸಲಾಗಿದೆ. ಇನ್ನು ಈ ಮೆಗಾ ಮೆನುವಿನಲ್ಲಿ ಹೊಸ ಫೀಚರ್ ಗಳು ಹಾಗೂ ಕಾರ್ಯಗಳ ಮಾಹಿತಿ ಕೂಡ ಇದೆ. ಹಾಗೆಯೇ ಹೊಸ ಬಟನ್ ಗಳು ಹಾಗೂ ಇಂಡಿಕೇಟರ್ಸ್ ಕೂಡ ನೀಡಲಾಗಿದೆ.
*ಐಟಿಆರ್ ಸಲ್ಲಿಕೆಗೆ ನೆರವು ನೀಡುವ ತೆರಿಗೆ ಸಾಧನಗಳು: 'Taxpayer Services Module'ವಿವಿಧ ತೆರಿಗೆ ಸಾಧನಗಳನ್ನು ಒಳಗೊಂಡಿದ್ದು, ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಮಾಡಲು ನೆರವು ನೀಡುತ್ತವೆ. ಈ ಟೂಲ್ ನಲ್ಲಿ ಕ್ಯಾಲ್ಕುಲೇಟರ್, ಇ-ಫೈಲಿಂಗ್ ಅಸಿಸ್ಟೆನ್ಸ್ ಹಾಗೂ ರೀಫಂಡ್ ಟ್ರ್ಯಾಕರ್ ಕೂಡ ಇದೆ.
ಐಟಿಆರ್ ಸಲ್ಲಿಕೆ ಮಾಡಿದ್ರೆ ಸಾಲದು ವೆರಿಫೈ ಮಾಡಿ, ಇಲ್ಲವಾದ್ರೆ ಬೀಳುತ್ತೆ 5 ಸಾವಿರ ದಂಡ: ಐಟಿ ಇಲಾಖೆ
*ಅಂತಿಮ ಗಡುವಿನ ಅಲರ್ಟ್: ಇನ್ನು ತೆರಿಗೆದಾರರಿಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಅಂತಿಮ ಗಡುವಿನ ಅಲರ್ಟ್ ನೀಡುವ ವ್ಯವಸ್ಥೆಯನ್ನು ಕೂಡ ಈ ವೆಬ್ ಸೈಟ್ ನಲ್ಲಿ ಸೇರ್ಪಡೆಗೊಳಿಸಲಾಗಿದೆ. ರಿವರ್ಸ್ ಕೌಂಟ್ ಡೌನ್ಸ್, ಟೂಲ್ ಟಿಪ್ಸ್ ಮುಂತಾದವುಗಳ ಮೂಲಕ ತೆರಿಗೆದಾರರಿಗೆ ಅಂತಿಮ ಗಡುವನ್ನು ನೆನಪಿಸುವ ಕೆಲಸವನ್ನು ಈ ವೆಬ್ ಸೈಟ್ ಮಾಡುತ್ತದೆ. ಹಾಗೆಯೇ ಸಂಬಂಧಪಟ್ಟ ವೆಬ್ ಸೈಟ್ ಗಳ ಲಿಂಕ್ ಗಳನ್ನು ಕೂಡ ಹೊಂದಿದ್ದು, ಅದರ ಮೂಲಕ ತೆರಿಗೆದಾರರು ಸುಲಭವಾಗಿ ಆ ಪೋರ್ಟಲ್ ಗೆ ಭೇಟಿ ನೀಡಿ ತೆರಿಗೆ ಸಂಬಂಧಿ ಕೆಲಸಗಳನ್ನು ಪೂರ್ಣಗೊಳಿಸಬಹುದು.