ಬೆಂಗಳೂರು :  ರಾಷ್ಟ್ರೀಕೃತ ವಲಯದ ಕೆನರಾ ಬ್ಯಾಂಕ್‌ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ 318 ಕೋಟಿ ರು. ನಿವ್ವಳ ಲಾಭ ಗಳಿಸಿರುವುದಾಗಿ ಪ್ರಕಟಿಸಿದೆ.

ನಗರದ ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಪಿ.ವಿ.ಭಾರತಿ ಅವರು, ಕಳೆದ ವರ್ಷ ಬ್ಯಾಂಕ್‌ ಇದೇ ಅವಧಿಯಲ್ಲಿ ಗಳಿಸಿದ್ದ 126 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಡಿ.31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಈ ಬಾರಿಯ ಲಾಭದ ಪ್ರಮಾಣ ಶೇ.152ರಷ್ಟುಹೆಚ್ಚಳವಾಗಿದೆ ಎಂದರು.

ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು 2,357 ಕೋಟಿ ಲಾಭಗಳಿಸಿದೆ. ನಿವ್ವಳ ಬಡ್ಡ ಆದಾಯ 3,814 ಕೋಟಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3679 ಕೋಟಿ ನಷ್ಟಿತ್ತು. ಮುಂಗಡಗಳ ಮೇಲಿನ ಬಡ್ಡಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ.25.18 ಬೆಳವಣಿಗೆಯಾಗಿದೆ. ಬಂಡವಾಳದ ಮೇಲಿನ ಬಡ್ಡಿಯಲ್ಲಿ ಶೇ.9.83 ಪ್ರಗತಿಯಾಗಿದೆ ಎಂದು ವಿವರಿಸಿದರು.

ಆರ್ಥಿಕ ವರ್ಷದ ಅಂತ್ಯಕ್ಕೆ ನಾವು ನಿರೀಕ್ಷಿತ ಗುರಿ ಸಾಧಿಸುವ ಹಾದಿಯಲ್ಲಿ ಮುನ್ನುಗುತ್ತಿದ್ದೇವೆ. ಕೃಷಿ, ಮನೆ, ಕೈಗಾರಿಕೆಗಳು, ವಾಹನಗಳ ಮೇಲಿನ ಸಾಲ ನೀಡಿಕೆಯೂ ಸಹ ಹೆಚ್ಚಾಗಿದೆ. ಜಾಗತಿಕ ವಹಿವಾಟು 9.93 ಕೋಟಿ ಮುಟ್ಟಿದ್ದು ಠೇವಣಿ 5.76 ಲಕ್ಷ ಕೋಟಿ ಇದೆ. ಒಟ್ಟಾರೆ ಮುಂಗಡ 4.17 ಕೋಟಿ ದಾಖಲಾಗಿದೆ. ಆದಾಯೇತರ ಸಾಲ ವಸೂಲಾತಿಯಲ್ಲಿ (ಎನ್‌ಪಿಎ) ಬ್ಯಾಂಕ್‌ನ ಹಲವು ದಿಟ್ಟಕ್ರಮಗಳಿಂದ 1990ರಷ್ಟು ಹಿಂದಿನ ಹಳೆಯ ಬಾಕಿ ವಸೂಲಾತಿ ಮಾಡಲಾಗಿದೆ. ಪ್ರಗತಿಯ ಹಾದಿಯಲ್ಲಿ ಬ್ಯಾಂಕ್‌ ಸಾಗುತ್ತಿದೆ ಎಂದು ತಿಸಿದರು.

ಒಟ್ಟಾರೆ ಜಾಗತಿಕ ವ್ಯವಹಾರ .9.93 ಲಕ್ಷ ಕೋಟಿಗೆ ಹೆಚ್ಚಿದ್ದು, ಇದರಿಂದ ವರ್ಷದಿಂದ ವರ್ಷಕ್ಕೆ 13.20ರಷ್ಟುಬೆಳವಣಿಗೆಯಾಗಿದೆ. ಜಾಗತಿಕ ಠೇವಣಿ 5.76 ಲಕ್ಷ ಕೋಟಿ, ಮುಂಗಡಗಳು(ನಿವ್ವಳ) 4.17 ಲಕ್ಷ ಕೋಟಿನಷ್ಟಾಗಿದೆ. ಕೃಷಿ ಸಾಲ ಪ್ರಮಾಣ ಶೇ.11.20ರಷ್ಟು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ ಶೇ.11.47ರಷ್ಟು, ಗೃಹ ಸಾಲ ಶೇ.20.41ರಷ್ಟು, ವಾಹನ ಸಾಲ ಶೇ.34.40ರಷ್ಟಕ್ಕೆ ತಲುಪಿದೆ ಎಂದು ಭಾರತಿ ಅವರು ವಿವರಿಸಿದರು.

ಕೃಷಿ ಸಾಲ ತೀರಲು 1300 ಕೋಟಿ ಕೊಡಬೇಕು

ಕೆನರಾ ಬ್ಯಾಂಕ್‌ಗೆ ರೈತರಿಂದ ಒಟ್ಟಾರೆ 4097 ಕೋಟಿಗಳಿಗೂ ಹೆಚ್ಚು ಕೃಷಿ ಸಾಲದ ಬಾಕಿ ಬರಬೇಕಿದೆ. ಆದರೆ, ಇದರಲ್ಲಿ ಪ್ರಸ್ತುತ ರಾಜ್ಯ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯಡಿ 2.42 ರೈತರು ಅರ್ಹತೆ ಪಡೆಯುತ್ತಾರೆ. ಇವರೆಲ್ಲರ ಸಾಲ ತೀರಿಸಲು ಸರ್ಕಾರದಿಂದ 1300 ಕೋಟಿ ನೀಡಬೇಕಾಗುತ್ತದೆ ಎಂದು ಬ್ಯಾಂಕ್‌ನ ಮತ್ತೊಬ್ಬ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ.ರಾವ್‌ ಸುದ್ದಿಗಾರರ ಪ್ರಶ್ನೆಗೆ ವಿವರಣೆ ನೀಡಿದರು.