ನವದೆಹಲಿ(ಜ.25): ‘ಕೇಂದ್ರ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿ ‘ಹಗಲು ದರೋಡೆ’ ನಡೆಸುತ್ತಿರುವ ಆನ್‌ಲೈನ್‌ ಇ ಕಾಮರ್ಸ್‌ ತಾಣಗಳಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಝೊಮ್ಯಾಟೋ, ಸ್ವಿಗ್ಗಿಯಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಒತ್ತಾಯಿಸಿದೆ.

ಈ ಕುರಿತು ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿರುವ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌, ‘2020ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಗ್ರಾಹಕರ ರಕ್ಷಣಾ (ಇ ಕಾಮರ್ಸ್‌) ಕಾಯ್ದೆ 2020ರ ಅನ್ವಯ, ಎಲ್ಲಾ ಇ ಕಾಮರ್ಸ್‌ ಕಂಪನಿಗಳು ತಾವು ಮಾರಾಟ ಮಾಡುವ ವಸ್ತುಗಳು ಉತ್ಪಾದನೆಯಾದ ದೇಶ ಮತ್ತು ಉತ್ಪಾದನೆ ಮಾಡಿದ ಕಂಪನಿಯ ಹೆಸರು ಸ್ಪಷ್ಟವಾಗಿ ದಾಖಲಿಸುವುದು ಕಡ್ಡಾಯ.

ಆದರೆ ಇ ಕಾಮರ್ಸ್‌ ಕಂಪನಿಗಳು ಇದನ್ನು ನಮೂದಿಸದೇ ನಿಯಮ ಉಲ್ಲಂಘಿಸಿ ಜನರನ್ನು ಹಗಲು ದರೋಡೆ ಮಾಡುತ್ತಿವೆ. ಜೊತೆಗೆ ಇದು ಕೇಂದ್ರದ ನಿಯಮಗಳ ಉಲ್ಲಂಘನೆ ಕೂಡಾ ಹೌದು. ಹೀಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.