ನವದೆಹಲಿ(ನ.20): ವಿಶ್ವದ ಗಮನ ಸೆಳೆದಿದ್ದ ನೋಟು ಅಮಾನ್ಯೀಕರಣದಿಂದ ಉಂಟಾಗಿದ್ದ ಪರಿಣಾಮದ ಕುರಿತು ಸಿಎಜಿ ವರದಿ ತಯಾರಿಸುತ್ತಿದ್ದು, ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ವರದಿ ಸಿದ್ಧವಾಗಲಿದೆ. 

ಭಾರತದ ಆರ್ಥಿಕತೆ ಮೇಲೆ ನೋಟು ಅಮಾನ್ಯೀಕರಣ ಬೀರಿದ್ದ ಪರಿಣಾಮವನ್ನು ವರದಿಯಲ್ಲಿ ವಿವರಿಸಲಾಗುತ್ತದೆ. ಆದರೆ 2019 ಚುನಾವಣಾ ವರ್ಷವಾಗಿರುವುದರಿಂದ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 

ಈ ನಡುವೆ ಅಮಾನ್ಯೀಕರಣದ ಕುರಿತಾದ ವರದಿ ತಯಾರಿಕೆಯಿಂದ ಸರ್ಕಾರಕ್ಕೆ ಉಂಟಾಗಬಹುದಾದ ಮುಜುಗರವನ್ನು ತಡೆಯುವುದಕ್ಕೆ ಬೇಕಂತಲೇ ಸಿಎಜಿ ವಿಳಂಬ ಮಾಡುತ್ತಿದೆ ಎಂದು 60 ನಿವೃತ್ತ ಅಧಿಕಾರಿಗಳು ಸಿಎಜಿಗೆ ಪತ್ರ ಬರೆದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ ನೋಟು ನಿಷೇಧದ ಕುರಿತು ಆಡಿಟ್ ವರದಿಯ ಬಗ್ಗೆ 20 ತಿಂಗಳ ಹಿಂದೆ ಸಿಎಜಿ ಶಶಿಕಾಂತ್ ಶರ್ಮ  ನೀಡಿದ್ದ ಭರವಸೆಯ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದು ಈ ಅಧಿಕಾರಿಗಳು ಆರೋಪಿಸಿದ್ದಾರೆ.

ನೋಟು ನಿಷೇಧ ಸಿಎಜಿ ವ್ಯಾಪ್ತಿಯ ಹೊರಗಿರುವ ಬ್ಯಾಂಕಿಂಗ್ ಹಾಗೂ ಹಣಕಾಸು ವಹಿವಾಟಿನ ವಿಷಯವಾಗಿದೆ, ಆದರೆ ಅದರಿಂದ ಉಂಟಾಗಿರಬಹುದಾದ ಆರ್ಥಿಕ ಪರಿಣಾಮಗಳ ಬಗ್ಗೆ ಆಡಿಟ್ ಅಥವಾ ಲೆಕ್ಕಪರಿಶೋಧನೆಯನ್ನು ಕೇಳುವುದು ತನ್ನ ವ್ಯಾಪ್ತಿಗೆ ಒಳಪಡುವ ವಿಷಯವಾಗಿದೆ.

ಪ್ರಮುಖವಾಗಿ ತೆರಿಗೆ ಆದಾಯಕ್ಕೆ ಸಂಬಂಧಿಸಿದಂತೆ ನೋಟು ನಿಷೇಧದಿಂದ ಉಂಟಾದ ಪರಿಣಾಮದ ಬಗ್ಗೆ ಆಡಿಟ್ ಕೇಳಬಹುದು ಎಂದು ಸಿಎಜಿ ಶಶಿಕಾಂತ್ ಶರ್ಮ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.

ಈಗ ಸಿಎಜಿ ತಯಾರಿಸುತ್ತಿರುವ ವರದಿ ಬಜೆಟ್ ಅಧಿವೇಶನದ ವೇಳೆಗೆ ಸಿದ್ಧವಾಗಲಿದ್ದು, ಅದನ್ನು ಸರ್ಕಾರ ಸದನದಲ್ಲಿ ಮಂಡಿಸುತ್ತದೆಯೇ, ಇಲ್ಲವೇ ಎಂಬುದು ಕುತೂಹಲದ ವಿಷಯವಾಗಿದೆ.