ಬೆಂಗಳೂರು[ಜು.31]: ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರು ಮೈಂಡ್‌ ಟ್ರೀ ಸಂಸ್ಥೆಯ ಸಹ ಸಂಸ್ಥಾಪಕರಲ್ಲದೇ ಹಲವು ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಕಾಫಿ ಡೇ ಮಳಿಗೆಗಳನ್ನು ಆರಂಭಿಸುವ ಮೂಲಕ ಕಾಫಿ ರಾಜ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಸಾಕಷ್ಟುಸಂಸ್ಥೆಗಳಲ್ಲಿ ಹೂಡಿಕೆಯನ್ನು ಸಹ ಮಾಡಿದ್ದಾರೆ. ಸಿದ್ಧಾರ್ಥ ಅವರ ಉದ್ಯಮಗಳ ವಿವರ ಇಂತಿದೆ:

* ಕಾಫಿ ಡೇ

ಕಾಫಿ ಡೇ ಗ್ಲೋಬಲ್‌ ಲಿ. ಸಂಸ್ಥೆಯು 1600 ಮಳಿಗೆಯನ್ನು ಹೊಂದಿದ್ದು, 54 ಸಾವಿರ ವೆಂಡಿಂಗ್‌ ಯಂತ್ರಗಳನ್ನು ಮತ್ತು 500ಕ್ಕೂ ಅಧಿಕ ಎಕ್ಸ್‌ಪ್ರೆಸ್‌ ಮಳಿಗೆಗಳನ್ನು ಹೊಂದಿದೆ. 2019ರ ಮಾಚ್‌ರ್‍ ಅಂತ್ಯಕ್ಕೆ 2200 ಕೋಟಿ ರು. ಆದಾಯದ ಗುರಿ ಹೊಂದಿತ್ತು. 20 ಸಾವಿರ ಟನ್‌ ಕಾಫಿ ಪುಡಿ ರಫ್ತು ಮಾಡುತ್ತಿತ್ತು. ಚಿಕ್ಕಮಗಳೂರಿನಲ್ಲಿ ಕಾಫಿ ಸಾಮಗ್ರಿಗಳ ಉತ್ಪನ್ನ ಕಾರ್ಖಾನೆ ಇದ್ದು, 30 ಎಕರೆ ಪ್ರದೇಶವಾಗಿದೆ. ಇದರ ಮೌಲ್ಯವು 150-200 ಕೋಟಿ ರು. ಎಂದು ಅಂದಾಜಿಸಲಾಗಿದೆ. 30 ಎಕರೆ ಹಾಸನದಲ್ಲಿದ್ದು, ಅದರ ಮೌಲ್ಯ 150 ಕೋಟಿ ರು. ಎಂದು ಅಂದಾಜಿಸಲಾಗಿದೆ. ಪರೋಕ್ಷ ಮತ್ತು ಪ್ರತ್ಯಕ್ಷವಾಗಿ 18000ಕ್ಕಿಂತ ಮಂದಿ ಕೆಲಸ ಮಾಡುತ್ತಿದ್ದಾರೆ.

* ಕಾಫಿ ಎಸ್ಟೇಟ್‌

ಕಾಫಿ ಬೆಳೆಯುವ ದೊಡ್ಡ ತೋಟವನ್ನು ಸಿದ್ಧಾರ್ಥ ತಮ್ಮ ಕುಟುಂಬದವರ ಹೆಸರಲ್ಲಿ ಹೊಂದಿದ್ದರು. 12 ಸಾವಿರ ಎಕರೆಗಿಂತ ಹೆಚ್ಚು ಎಸ್ಟೇಟ್‌ ಇದ್ದು, ಅಲ್ಲಿ ಕಾಫಿ ಬೆಳೆಯಲಾಗುತ್ತದೆ. ಶೇ.70ರಷ್ಟುಪ್ರದೇಶದಲ್ಲಿ ಎರಡು ಸಾವಿರ ಟನ್‌ ಅರೆಬಿಕಾ ಮತ್ತು 1200 ಟನ್‌ ರೋಬಸ್ಟಾಕಾಫಿ ಬೆಳೆಯಲಾಗುತ್ತಿತ್ತು. ಮುಂದಿನ 2-3 ವರ್ಷದಲ್ಲಿ 6500 ಟನ್‌ ಕಾಫಿ ಬೆಳೆಯುವ ಗುರಿಯನ್ನು ಹೊಂದಲಾಗಿತ್ತು. ಎಸ್ಟೇಟ್‌ 2 ಸಾವಿರ ಕೋಟಿ ರು.ಗಿಂತ ಹೆಚ್ಚು ಮೌಲ್ಯದ್ದಾಗಿದ್ದು, ಸುಮಾರು 3500 ಮಂದಿ ಉದ್ಯೋಗ ಮಾಡುತ್ತಿದ್ದಾರೆ. ತೋಟದಲ್ಲಿ ಸಿಲ್ವರ್‌ ಓಕ್‌ ಟ್ರೀಗಳನ್ನು ಹೊಂದಿದ್ದು, ಸುಮಾರು 9 ಲಕ್ಷ ಮರಗಳಿವೆ. ಮಾತ್ರವಲ್ಲ, ಇತರೆ ಮರಗಳು ಇದ್ದು, ಒಟ್ಟಾರೆ ಮರದ ಮೌಲ್ಯ ಒಂದು ಸಾವಿರ ಕೋಟಿ ರು. ಇರಬಹುದು ಎಂದು ಅಂದಾಜಿಸಲಾಗಿದೆ.

* ಟಂಗ್ಲೀನ್‌

ಬೆಂಗಳೂರಿನ ಮೈಸೂರು ರಸ್ತೆಯಲ್ಲಿನ ಸಂಸ್ಥೆಯು 90 ಎಕರೆ ವ್ಯಾಪ್ತಿಯಲ್ಲಿದೆ. ಇದರಿಂದ 250 ಕೋಟಿ ರು. ಆದಾಯ ಬರುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಇದಲ್ಲದೇ, ಮಂಗಳೂರಿನಲ್ಲಿ 21 ಎಕರೆ ಪ್ರದೇಶದಲ್ಲಿ ಕಂಪನಿಯ ಘಟಕ ಇದೆ. ಬೆಂಗಳೂರಿನಲ್ಲಿನ ಆಸ್ತಿಯ ಮೌಲ್ಯವು 3600 ಕೋಟಿ ರು. ಇದ್ದು, ಮಂಗಳೂರಿನಲ್ಲಿನ ಆಸ್ತಿಯನ್ನು ಸೇರಿಸಿದರೆ ಒಟ್ಟು ಮೌಲ್ಯವು 4 ಸಾವಿರ ಕೋಟಿ ರು. ಆಗುತ್ತದೆ.

* ಕೆಫೆ ಕಾಫಿ ಡೇ (ಸಿಸಿಡಿ) ವೆಂಡಿಂಗ್‌

ಮುಂದಿನ ಮೂರೂವರೆ ವರ್ಷದಲ್ಲಿ 45 ಸಾವಿರ ವೆಂಡಿಂಗ್‌ ಯಂತ್ರಗಳನ್ನು ಅಳವಡಿಸುವ ಗುರಿಯನ್ನು ಈ ಕಂಪನಿ ಹೊಂದಿದೆ. ಕೋಕ್‌ ಮತ್ತು ಐಟಿಸಿ ಸಂಸ್ಥೆಯ ಸಹಭಾಗಿತ್ವ ಹೊಂದುವ ಕುರಿತು ಚರ್ಚೆಗಳು ಆರಂಭಗೊಂಡಿದ್ದವು. ಸ್ಥಳೀಯ ಮಾರುಕಟ್ಟೆಯಲ್ಲಿ ಸುಮಾರು 30 ಸಾವಿರ ಟನ್‌ನಷ್ಟುಕಾಫಿಯನ್ನು ಈ ಕಂಪನಿ ಮೂಲಕ ಸಂಗ್ರಹಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಾಫಿ ಬ್ರಾಂಡ್‌ಗಳಿಗೆ ಗ್ರೀನ್‌ ಕಾಫಿಯನ್ನು ರಫ್ತು ಮಾಡುತ್ತಿದೆ.

* ಸಿಕಲ್‌

ಇದು ಸಾರಿಗೆ ಸಂಸ್ಥೆಯಾಗಿದ್ದು, ಶೇ.60ರಷ್ಟುಷೇರು ಸಿದ್ಧಾರ್ಥ ಬಳಿ ಇದೆ. ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ 5000 ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ. 1300 ಟ್ರಕ್‌ಗಳು ಸಂಚರಿಸುತ್ತಿವೆ.

* ವೇ2ವೆಲ್ತ್‌

ಇದು ಹಣಕಾಸು ಸಂಸ್ಥೆಯಾಗಿದ್ದು, ಸುಮಾರು 5 ಕೋಟಿ ರು. ಪ್ರತಿ ವರ್ಷ ಲಾಭ ಮಾಡುತ್ತಿದೆ. 400 ಕೋಟಿ ರು. ವ್ಯವಹಾರ ನಡೆಯುತ್ತಿದೆ.

* ಮ್ಯಾಗ್ನಸಾಫ್ಟ್‌

ಈ ಸಂಸ್ಥೆಯಲ್ಲಿ ಶೇ.80ರಷ್ಟುಪಾಲುದಾರಿಕೆಯನ್ನು ಸಿದ್ಧಾರ್ಥ ಹೊಂದಿದ್ದಾರೆ. ಈ ವ್ಯವಹಾರದಲ್ಲಿ 15 ಕೋಟಿ ರು. ಲಾಭ ಗಳಿಕೆಯಾಗುತ್ತಿದೆ.

* ಸೆರಾಯ್‌

ಚಿಕ್ಕಮಗಳೂರು, ಕಬಿನಿ ಮತ್ತು ಬಂಡಿಪುರದಲ್ಲಿ ಈ ಕಂಪನಿ ಐಷಾರಾಮಿ ರೆಸಾರ್ಟ್‌ಗಳನ್ನು ಹೊಂದಿದೆ. ಅಂಡಮಾನ್‌ನಲ್ಲಿನ ಬೇರ್‌ಫುಟ್‌ ರೆಸಾರ್ಟ್‌ನಲ್ಲಿ ಷೇರು ಹೊಂದಿದೆ.