ನವದೆಹಲಿ, [ಜ.02]: ಸಾರ್ವಜನಿಕ ವಲಯದ 3 ಪ್ರಮುಖ ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.

ಇಂದು [ಬುಧವಾರ] ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. 

ಭಾರತೀಯ ಬ್ಯಾಂಕಿಂಗ್‌ ಇತಿಹಾಸದಲ್ಲೇ ಮೂರು ಪ್ರಮುಖ ಬ್ಯಾಂಕ್‌ಗಳ ವಿಲೀನ ಇದೇ ಮೊದಲಾಗಿದೆ. ಕೇಂದ್ರದ ಒಪ್ಪಿಗೆ ಮೇರೆಗೆ ಇನ್ಮುಂದೆ ಬ್ಯಾಂಕ್ ಆಫ್ ಬರೋಡಾ ಜತೆ ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ವಿಲೀನವಾಗಲಿವೆ. 

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌, ವಿಲೀನದ ನಂತರ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ನೌಕರರು ಬ್ಯಾಂಕ್‌ ಆಫ್‌ ಬರೋಡಾಗೆ ವರ್ಗಾವಣೆಯಾಗಲಿದ್ದಾರೆ. 

ದೇನಾ ಬ್ಯಾಂಕ್‌ನ 1000 ಷೇರು ಹೊಂದಿರುವವರಿಗೆ ಬ್ಯಾಂಕ್‌ ಆಫ್‌ ಬರೋಡಾದ 110 ಈಕ್ವಿಟಿ ಷೇರು ದೊರೆಯಲಿದೆ. ಅದೇ ರೀತಿ ವಿಜಯ ಬ್ಯಾಂಕ್‌ನ 1000 ಷೇರು ಹೊಂದಿರುವವರಿಗೆ 402 ಈಕ್ವಿಟಿ ಷೇರು ದೊರೆಯಲಿದೆ ಎಂದು ಹೇಳಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಪರ್ಯಾಯ ಕಾರ್ಯ ಯೋಜನೆ ಸಮಿತಿಯ ಸಭೆಯಲ್ಲಿ ಮೂರು ಬ್ಯಾಂಕ್‌ಗಳ ವಿಲೀನಕ್ಕೆ ಅನುಮೋದನೆ ನೀಡಲಾಯಿತು. 

ಈ ವಿಲೀನದ ನಂತರ ಬ್ಯಾಂಕ್‌ ಆಫ್‌ ಬರೋಡಾ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.