ಆಕಳ ಗೊಬ್ಬರ ಬರೀ ಗೊಬ್ಬರವಲ್ಲ. ಅದು ಆದಾಯದ ಮೂಲ. ಗೊಬ್ಬರದಿಂದ ಅನೇಕ ವಸ್ತುಗಳನ್ನು ಈ ಉತ್ಪಾದಿಸಲಾಗ್ತಿದೆ. ಅದನ್ನು ಮನೆಯಲ್ಲೇ ಕುಳಿತು ಮಾರಾಟ ಮಾಡುವ ಮೂಲಕ ನೀವು ಹಣ ಸಂಪಾದನೆ ಮಾಡ್ಬಹುದು.
ಒಂದೇ ಆದಾಯ ನೆಚ್ಚಿಕೊಂಡು ಜೀವನ ನಡೆಸೋದು ಈಗ ಕಷ್ಟಸಾಧ್ಯ. ಹಾಗಾಗಿ ಬಹುತೇಕರು ಮನೆಯಲ್ಲಿ ಮಾಡಬಹುದಾದ ಆನ್ಲೈನ್ ಬ್ಯುಸಿನೆಸ್ (Online Business) ಹುಡುಕಾಡ್ತಾರೆ. ಪಾರ್ಟ್ ಟೈಂ ಇಲ್ಲ ಫುಲ್ ಟೈಂ ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ರೆ ಆಕಳ ಗೊಬ್ಬರವನ್ನು ನೀವು ವ್ಯಾಪಾರವಾಗಿ ಪರಿವರ್ತಿಸಬಹುದು. ಆಕಳ ಗೊಬ್ಬರ ಮಾರಾಟ ಮಾಡೋದು ಬೇಡ, ಹಸುವಿನ ಗೊಬ್ಬರ (Cow dung)ದಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಅದನ್ನು ಆನ್ಲೈನ್ ಮತ್ತು ಆಫ್ಲೈನ್ ಮಾರಾಟ ಮಾಡಿ ನೀವು ಹಣ ಸಂಪಾದನೆ ಮಾಡ್ಬಹುದು.
ಹಸುವಿನ ಸಗಣಿಯಿಂದ ತಯಾರಿಸಿದ ಉತ್ಪನ್ನಗಳು ನಗರಗಳಲ್ಲಿ ಸುಲಭವಾಗಿ ಲಭ್ಯವಿಲ್ಲ. ಹಾಗಾಗಿ ಜನರು ಅದನ್ನು ಆನ್ಲೈನ್ನಲ್ಲಿ ಖರೀದಿಸುತ್ತಾರೆ. ಸಗಣಿ, ಗೋಮೂತ್ರಕ್ಕೆ ಆನ್ಲೈನ್ ನಲ್ಲಿ ಬಹು ಬೇಡಿಕೆ ಇದೆ. ಕಡಿಮೆ ವೆಚ್ಚದಲ್ಲಿ ನೀವು ಪ್ರಾರಂಭಿಸಬಹುದಾದ ಹಸುವಿನ ಸಗಣಿಯಿಂದ ಮಾಡಿದ ಉತ್ಪನ್ನಗಳ 10 ಬ್ಯುಸಿನೆಸ್ ಐಡಿಯಾ ಇಲ್ಲಿದೆ.
ಹಸುವಿನ ಸಗಣಿ ಬೆರಣಿ : ಭಾರತದ ಕೆಲ ಪೂಜೆ, ಹಸುವಿನ ಸಗಣಿ ಇಲ್ಲದೆ ಅಪೂರ್ಣ. ನೀವು ಅದನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದನೆ ಮಾಡ್ಬಹುದು. ಅದಕ್ಕೆ ಹೆಚ್ಚಿನ ಹಣ ಮತ್ತು ಸ್ಥಳಾವಕಾಶದ ಅಗತ್ಯವಿಲ್ಲ. ಈ ವ್ಯವಹಾರವನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಳಲ್ಲಿ ಮಾಡಬಹುದು. ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿ ಈಗಾಗಲೇ ಆನ್ಲೈನ್ ನಲ್ಲಿ ಲಭ್ಯವಿದೆ. ಅಮೆಜಾನ್ನಲ್ಲಿ 8 ರಿಂದ 10 ತುಂಡುಗಳ ಸಗಣಿ ಬೆರಣಿ ಪ್ಯಾಕೆಟ್ ಬೆಲೆ 1000 ರೂಪಾಯಿಗಳಿಂದ 2000 ರೂಪಾಯಿಗೆ ಮಾರಾಟವಾಗ್ತಿದೆ.
ಸಾವಯವ ಬಣ್ಣ : ಹಸುವಿನ ಸಗಣಿಯಿಂದ ಸಾವಯವ ಬಣ್ಣವನ್ನು ತಯಾರಿಸಲಾಗುತ್ತಿದೆ. ಛತ್ತೀಸ್ಗಢದ ಗೋಶಾಲೆಯಲ್ಲಿ ಸಾವಯವ ಬಣ್ಣ ಉತ್ಪಾದಿಸಲಾಗುತ್ತಿರುವುದು ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಬಣ್ಣಕ್ಕಿಂತ ಈ ಬಣ್ಣವನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಖಾದಿ ಇಂಡಿಯಾ ಹಸುವಿನ ಸಗಣಿಯಿಂದ ತಯಾರಿಸಿದ ವೇದಿಕ್ ಬಣ್ಣವನ್ನು ಬಿಡುಗಡೆ ಮಾಡಿದೆ. ಈ ವ್ಯವಹಾರದಿಂದ ನೀವು ತಿಂಗಳಿಗೆ 2 ರಿಂದ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಕಾಗದ ಮತ್ತು ಬ್ಯಾಗ್ : ಕಾಗದ ಮತ್ತು ಕ್ಯಾರಿ ಬ್ಯಾಗ್ಗಳನ್ನು ಸಹ ಹಸುವಿನ ಸಗಣಿಯಿಂದ ತಯಾರಿಸಲಾಗ್ತಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್ ಮೇಡ್ ಕಾಗದ ಸಂಸ್ಥೆಯಲ್ಲಿ ಸಗಣಿಯಿಂದ ಬ್ಯಾಗ್ ತಯಾರಿಸಲಾಗ್ತಿದೆ. ಹಸುವಿನ ಸಗಣಿಯಿಂದ ಕಾಗದ ತಯಾರಿಸುವ ವಿಧಾನವನ್ನು ಇಲ್ಲಿ ಕಲಿಸಲಾಗುತ್ತದೆ.
ಹಲ್ಲಿನ ಪುಡಿ : ಹಸುವಿನ ಸಗಣಿ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಸಗಣಿ, ಗೋ ಮೂತ್ರ ಬಳಸಿ ಹಲ್ಲಿನ ಪುಡಿ ಮತ್ತು ಸೋಪುಗಳನ್ನು ತಯಾರಿಸಲಾಗುತ್ತದೆ. ಹಸುವಿನ ಸಗಣಿಯಿಂದ ತಯಾರಿಸಿದ ಟೂತ್ಪೇಸ್ಟ್ ಗೆ ಬೇಡಿಕೆ ಹೆಚ್ಚಾಗ್ತಿದ್ದು, ನೀವು ಈ ಬ್ಯುಸಿನೆಸ್ ಶುರು ಮಾಡ್ಬಹುದು.
ದೀಪ : ಜೇಡಿಮಣ್ಣಿನಂತೆ ಹಸುವಿನ ಸಗಣಿಯಿಂದ ದೀಪವನ್ನು ತಯಾರಿಸಲಾಗುತ್ತದೆ. ದೀಪಾವಳಿಯಂದು, ದೀಪಗಳು ಮತ್ತು ಹಸುವಿನ ಸಗಣಿಯಿಂದ ಮಾಡಿದ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ದೀಪಗಳನ್ನು ಮಣ್ಣಿನ ದೀಪಗಳಂತೆ ಶುದ್ಧವೆಂದು ಪರಿಗಣಿಸಲಾಗುತ್ತದೆ. ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ.
ಹಸುವಿನ ಸಗಣಿ ಸ್ಟಿಕ್ಕರ್ : ಹಸುವಿನ ಸಗಣಿಯಿಂದ ಮಾಡಿದ ಸ್ಟಿಕ್ಕರ್ಗಳು ಮೊಬೈಲ್ ವಿಕಿರಣವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ. ಹಸುವಿನ ಸಗಣಿಯಿಂದ ಅನೇಕ ರೀತಿಯ ಕರಕುಶಲ ವಸ್ತುಗಳನ್ನು ಸಹ ತಯಾರಿಸಬಹುದು. ಮನೆ ಅಲಂಕಾರ ವಸ್ತುಗಳು, ಹೂಮಾಲೆಗಳು, ಬಳೆಗಳನ್ನು ಸಹ ತಯಾರಿಸಿ ಮಾರಾಟ ಮಾಡಬಹುದು.
ಕೀಟನಾಶಕ -ಫಿನೈಲ್ ವ್ಯವಹಾರ : ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ಬಳಸಿ ಕೀಟನಾಶಕ ತಯಾರಿಸಿ ಅದನ್ನು ಮಾರಾಟ ಮಾಡ್ಬಹುದು. ಇದು ನೈಸರ್ಗಿಕ ಕೀಟನಾಶಕವಾಗಿದೆ. ಈ ಬ್ಯುಸಿನೆಸ್ ನಲ್ಲಿ ನೀವು ತಿಂಗಳಿಗೆ 5 ರಿಂದ 10 ಲಕ್ಷ ರೂಪಾಯಿ ಗಳಿಸಬಹುದು.
