ಮುಂಬೈ(ಜ.22): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 50000 ಅಂಕಗಳ ಗಡಿ ದಾಟಿ ಹೊಸ ಇತಿಹಾಸ ರಚಿಸಿದೆ. ಗುರುವಾರ ವಹಿವಾಟು ಆರಂಭವಾಗುತ್ತಲೇ 300ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್‌ ಸಾರ್ವಕಾಲಿಕ ಗರಿಷ್ಠವಾದ 50126 ಅಂಕಗಳವರೆಗೆ ತಲುಪಿತ್ತು. ಆದರೆ ದಿನದಂತ್ಯಕ್ಕೆ ಹೂಡಿಕೆದಾರರು, ಏರಿಕೆಯ ಲಾಭ ಪಡೆಯಲು ಮುಂದಾದ ಹಿನ್ನೆಲೆಯಲ್ಲಿ ಬುಧವಾರ ಮುಕ್ತಾಯಕ್ಕಿಂತ 167 ಅಂಕ ಇಳಿದು 49624 ಅಂಕಗಳಲ್ಲಿ ಮುಕ್ತಾಯಗೊಂಡಿತು. ಇದೇ ವೇಳೆ ನಿಫ್ಟಿಕೂಡಾ 54 ಅಂಕ ಇಳಿದು, 14590ರಲ್ಲಿ ಮುಕ್ತಾಯವಾಯಿತು.

ಸೂಚ್ಯಂಕ ಮೊದಲ ಬಾರಿಗೆ 50000 ಅಂಕಗಳ ಗಡಿದಾಟಿದ್ದು ಷೇರುಪೇಟೆಗೆ ಮಾತ್ರವಲ್ಲ, ಹೂಡಿಕೆದಾರರ ಪಾಲಿಗೆ ಬಹುದೊಡ್ಡ ವಿಷಯ. ಷೇರುಪೇಟೆ, ದೇಶದ ಆರ್ಥಿಕತೆಯ ಮುಖವಾಣಿ ಇದ್ದಂತೆ. ಹೀಗಾಗಿ ಇದು ಮಹತ್ವದ ಬೆಳವಣಿಗೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್ಥಿಕತೆಗೆ ಮತ್ತೆ ಚೇತರಿಕೆಗೆ ಹಾದಿಗೆ ಮರಳಿರುವುದು, ಅಮೆರಿಕದಲ್ಲಿ ನೂತನ ಅಧ್ಯಕ್ಷರ ಪದಗ್ರಹಣದಿಂದ ಅಲ್ಲಿನ ಆರ್ಥಿಕತೆ ಚೇತರಿಕೆ ಮತ್ತು ಜಾಗತಿಕ ಷೇರುಪೇಟೆಯ ಏರಿಕೆಯ ಶುಭ ಸುದ್ದಿ, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಭರ್ಜರಿ ಏರಿಕೆಗೆ ಕಾರಣವಾಗಿತ್ತು. ಆದರೆ ಆದರೆ ಪೇಟೆ ಏರಿರುವಾಗ, ಷೇರು ಮಾರಿಕೊಂಡು ಲಾಭ ಮಾಡಿಕೊಳ್ಳುವ ಪ್ರವೃತ್ತಿಯನ್ನು ಸಾಂಸ್ಥಿಕ ಹೂಡಿಕೆದಾರರು ತೋರಿದ ಹಿನ್ನೆಲೆಯಲ್ಲಿ ದಿನದಂತ್ಯಕ್ಕೆ ಸೂಚ್ಯಂಕ 167 ಅಂಕ ಇಳಿಕೆ ಕಾಣುವಂತಾಯಿತು. ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್‌, ಎನ್‌ಟಿಪಿಸಿ, ಸನ್‌ಫಾರ್ಮಾ ಮತ್ತು ಐಟಿಸಿ ಕಂಪನಿಗಳ ಷೇರುಗಳು ದಿನದಂತ್ಯಕ್ಕ ಭಾರೀ ಇಳಿಕೆ ಕಂಡಿತ್ತು ಒಟ್ಟಾರೆ ಸೆನ್ಸೆಕ್ಸ್‌ ಅನ್ನು ಕೆಳಗೆಳೆಯಿತು.

10 ತಿಂಗಳಲ್ಲಿ ಡಬ್ಬಲ್‌:

2014ರ ಮೇ 16ರಂದು ಪ್ರಕಟವಾದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಲೇ ಸೆನ್ಸೆಕ್ಸ್‌ 1000ಕ್ಕೂ ಹೆಚ್ಚು ಅಂಕ ಏರಿಕೆ ಮೂಲಕ ಮೊದಲ ಬಾರಿಗೆ 25000 ಅಂಕಗಳ ಗಡಿ ದಾಟಿತ್ತು. ಆ ಲೆಕ್ಕದಲ್ಲಿ 7 ತಿಂಗಳಲ್ಲಿ ಸೆನ್ಸೆಕ್ಸ್‌ ದ್ವಿಗುಣಗೊಂಡಿದೆ. ಆದರೆ 2020ರ ಕೋವಿಡ್‌ ಲಾಕ್ಡೌನ್‌ ಅವಧಿಯಲ್ಲಿ ಅಂದರೆ ಮಾಚ್‌ರ್‍ನಲ್ಲಿ ಸೆನ್ಸೆಕ್ಸ್‌ ಭಾರೀ ಕುಸಿತ ಕಂಡು 25900 ಅಂಕಗಳ ಗಡಿಗೆ ತಲುಪಿತ್ತು. ಅ ಲೆಕ್ಕದಲ್ಲಿ ನೋಡಿದರೆ ಕೇವಲ 10 ತಿಂಗಳಲ್ಲಿ ಸೆನ್ಸೆಕ್‌ ಡಬ್ಬಲ್‌ ಆಗಿದೆ.