ನವದೆಹಲಿ(ಜ.28): ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಏರ್ ಇಂಡಿಯಾ ಮಾರಾಟದ ನಿರ್ಧಾರವನ್ನು ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡುವ ನಿರ್ಧಾರ,  ದೇಶದ್ರೋಹಿ ಕೆಲಸ ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ನಷ್ಟದ ನೆಪ ಹೇಳಿ ಏರ್ ಇಂಡಿಯಾ ಸಂಸ್ಥೆಯನ್ನು ಮಾರಾಟ ಮಾಡಲು ಹೊರಟಿರುವುದು ದೇಶ ವಿರೋಧಿ ಕೆಲಸವಾಗಿದ್ದು, ಇದರ ಬದಲು ಸಂಸ್ಥೆಗೆ ಆರ್ಥಿಕ ಸಹಾಯ ನೀಡಿ ಅದನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಸ್ವಾಮಿ ಸಲಹೆ ನೀಡಿದ್ದಾರೆ.

ಅಲ್ಲದೇ ಏರ್ ಇಂಡಿಯಾ ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ದ, ಕಾನೂನು ಹೋರಾಟ ಮಾಡುವುದಾಗಿ ಸ್ವಾಮಿ ಬೆದರಿಕೆ ಕೂಡ ಹಾಕಿದ್ದಾರೆ.

ಮತ್ತೆ ಸೇಲ್‌ಗಿದೆ ಏರ್‌ ಇಂಡಿಯಾ: 100% ಷೇರು ಮಾರಲು ಕೇಂದ್ರ ಸಜ್ಜು!

ಪ್ರಧಾನಿ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸುತ್ತಲೇ ಬಂದಿರುವ ಸ್ವಾಮಿ, ಕೇಂದ್ರ ಹಣಕಾಸು ಸಚಿವೆಯ ಕಾರ್ಯವೈಖರಿ ವಿರುದ್ಧ ಕಿಡಿಕಾರುತ್ತಿದ್ದಾರೆ.

5 ಟ್ರಿಲಿಯನ್ ಆರ್ಥಿಕತೆ ಹೊಂದುವುದಾಗಿ ಹೇಳುವ ಪ್ರಧಾನಿ ಮೋದಿ, ಹೀಗೆ ಒಂದೊಂದಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುವುದು ಸಲ್ಲ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.

ಇನ್ನು ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಸರ್ಕಾರ ದಿವಾಳಿಯಾಗಿದ್ದು ಹಣಕ್ಕಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಮಾರಾಟ ಮಾಡಲು ಹೊರಟಿದೆ ಎಂದು ಆರೋಪಿಸಿದೆ.

ಏರ್ ಇಂಡಿಯಾದಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಬಿಟ್ಟುಕೊಡಲು ಸರ್ಕಾರ ತೀರ್ಮಾನಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಚಿಸುವವರು ಮಾರ್ಚನಲ್ಲಿ ಇ - ಬಿಡ್ ಸಲ್ಲಿಸಬೇಕು ಎಂದು ಸರ್ಕಾರ ಗಡುವು ನೀಡಿದೆ.