2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!
2025ರಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ₹1.5 ಲಕ್ಷ ಕೋಟಿ ಮೌಲ್ಯದ ಐಪಿಓಗಳು ಬರಲಿವೆ. 34 ಕಂಪನಿಗಳು ಈಗಾಗಲೇ ಸೆಬಿ ಅನುಮೋದನೆ ಪಡೆದಿದ್ದು, ಇನ್ನೂ 55 ಕಂಪನಿಗಳು ಅನುಮತಿಗಾಗಿ ಕಾಯುತ್ತಿವೆ.
ಬೆಂಗಳೂರು (ಡಿ.10): ಭಾರತೀಯ ಷೇರು ಮಾರುಕಟ್ಟೆಯಲ್ಲಿ 18 ತಿಂಗಳ ಕನಸಿನ ಓಟ ಮುಕ್ತಾಯಗೊಂಡು ಈಗ ಚಂಚಲತೆ ಆರಂಭವಾಗಿದೆ. ಈಗ ಪ್ರತಿದಿನ ಏಳುಬೀಳುಗಳ ಸರದಿ. ಇಂಥ ಮಾರುಕಟ್ಟೆ ಚಂಚಲತೆ ನಡುವೆಯೂ ಕಂಪನಿಗಳು ಪಬ್ಲಿಕ್ ಆಗುವ ಟ್ರೆಂಡ್ ಇನ್ನೂ ಬಲಿಷ್ಠವಾಗಿದೆ. 2025ರಲ್ಲಿ ಬರೋಬ್ಬರಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಐಪಿಓ ಅಂದರೆ ಆರಂಭಿಕ ಸಾರ್ವಜನಿಕ ಹೂಡಿಕೆ ಬರೋ ಹಾದಿಯಲ್ಲಿದೆ. 2025ರ ವರ್ಷಕ್ಕೆ ಈಗಾಗಲೇ 34 ಕಂಪನಿಗಳು ಐಪಿಒಗಳಿಗೆ ಅಗತ್ಯವಾದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅನುಮೋದನೆಯನ್ನು ಪಡೆದುಕೊಂಡಿವೆ. ಇದರ ಒಟ್ಟಾರೆ ಮೊತ್ತ 41, 462 ಕೋಟಿ ರೂಪಾಯಿ. ಇನ್ನೂ 55 ಸಂಸ್ಥೆಗಳು ಸೆಬಿ ಅನುಮತಿಗಾಗಿ ಕಾಯುತ್ತಿದ್ದು, ಇದರ ಮೌಲ್ಯ 98, 672 ಕೋಟಿ ರೂಪಾಯಿ ಆಗಿದೆ. ಸೆಬಿಯಿಂದ ಅನುಮೋದನ ಪಡೆದುಕೊಂಡ ಬಳಿಕ ಐಪಿಒಗೆ ಬರಲು ಕಂಪನಿಗಳಿಗೆ ಒಂದು ವರ್ಷದ ಕಾಲಾವಕಾಶ ಇರುತ್ತದೆ.
ಆಕ್ಸಿಸ್ ಸೆಕ್ಯುರಿಟೀಸ್‌ನ ರಾಜೇಶ್ ಪಾಲ್ವಿಯಾ ಈ IPO ಗುರಿಗಳನ್ನು ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಕಾರಾತ್ಮಕ ಮಾರುಕಟ್ಟೆಯ ಭಾವನೆಯ ಹೊರತಾಗಿಯೂ, ದೇಶೀಯ ಹೂಡಿಕೆದಾರರ (ಡಿಐಐ)ಹಣದ ಒಳಹರಿವು ದೃಢವಾಗಿದೆ. ವಿದೇಶಿ ಹೂಡಿಕೆದಾರರು ಸೆಕೆಂಡರಿ ಮಾರುಕಟ್ಟೆಗಳಲ್ಲಿ ನಿವ್ವಳ ಮಾರಾಟಗಾರರಾಗಿದ್ದರೂ, ಅವರು ಪ್ರಾಥಮಿಕ ಮಾರುಕಟ್ಟೆ ವಿತರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಮುಂದುವರೆಸುತ್ತಾರೆ ಎಂದು ಹೇಳಿದ್ದಾರೆ.
2024ರಲ್ಲಿ ಇಲ್ಲಿಯವರೆಗೆ ವಿದೇಶಿ ಹೂಡಿಕೆದಾರರು (ಎಫ್‌ಐಐ) ಸೆಕೆಂಡರಿ ಮಾರುಕಟ್ಟೆಯಲ್ಲಿ 1.02 ಲಕ್ಷ ಕೋಟಿ ರೂಪಾಯಿಗಳನ್ನು ಮಾರಾಟ ಮಾಡಿದ್ದರೆ, ಪ್ರೈಮರಿ ಮಾರುಕಟ್ಟೆಯಲ್ಲಿ 1.11 ಲಕ್ಷ ಕೋಟಿ ರೂಪಾಯಿಯಷ್ಟು ಖರೀದಿ ಮಾಡಿದ್ದಾರೆ. ಪ್ರೈಮ್ ಡೇಟಾಬೇಸ್ ಮಾಹಿತಿಯ ಪ್ರಕಾರ, 2024ರಲ್ಲಿ ಇಲ್ಲಿಯವರೆಗೂ 75 ಭಾರತೀಯ ಕಂಪನಿಗಳು ಮೇನ್‌ಬೋರ್ಡ್ ಐಪಿಓಗಳ ಮೂಲಕ 1.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಇದು ಮುಂದಿನ ವರ್ಷಕ್ಕೂ ಮುಂದುವರಿಯಲಿದೆ. 2024 ಐಪಿಓ ಪಾಲಿಗೆ ದಾಖಲೆಯ ವರ್ಷ. 2023ರಲ್ಲಿ 57 ಕಂಪನಿಗಳು ಐಪಿಒ ಇಂದ 49, 435 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದರೆ, 2022ರಲ್ಲಿ 40 ಕಂಪನಿಗಳ ಐಪಿಒಗಳಿಂದ 59, 301 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ದಾಖಲೆಯ 143 ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗಳನ್ನು (DRHPs) 2024 ರಲ್ಲಿ SEBI ಗೆ ಸಲ್ಲಿಸಲಾಗಿದೆ. 2023ರಲ್ಲಿ 84 ಹಾಗೂ 2022ರಲ್ಲ 89 ಡಿಆರ್‌ಎಚ್‌ಪಿಗಳು ಸಲ್ಲಿಕೆ ಆಗಿದ್ದವು.
ಮುಂಬರುವ ದಿನಗಳಲ್ಲಿ ಪ್ರಖ್ಯಾತ ಸ್ಟಾರ್ಟ್‌ಅಪ್ ಆಗಿರುವ ಜೆಪ್ಟೋ, ವಾಲ್‌ಮಾರ್ಟ್ ಮಾಲೀಕತ್ವದ ಫ್ಲಿಪ್‌ಕಾರ್ಟ್, ಇಂದಿರಾ ಐವಿಎಫ್ ಮತ್ತು ಎಚ್‌ಡಿಎಫ್‌ಸಿ ಕ್ರೆಡೆಲಿಯಾ ಐಪಿಒಗೆ ಇಳಿಯಲಿದೆ. ಇಂದಿರಾ ಐವಿಎಫ್, ಐಪಿಒ ಮೂಲಕ 400 ಮಿಲಿಯನ್ ಡಾಲರ್ ಸಂಗ್ರಹ ಮಾಡುವ ಗುರಿ ಹೊಂದಿದ್ದರೆ, Zepto, Flipkart ಮತ್ತು HDFC Credila ತಲಾ $1 ಶತಕೋಟಿಯನ್ನು ಸಂಗ್ರಹಿಸುವ ಗುರಿ ಹೊಂದಿದೆ.
ಮಾರುಕಟ್ಟೆ ಬಲವಾಗಿರುವ ಕಾರಣ, ಐಪಿಒ ಡ್ರಾಫ್ಟ್ ಫೈಲಿಂಗ್‌ನಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡು ಬಂದಿದೆ. 2024ರಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ವರ್ಷದಿಂದ ಶೇ. 13ರಷ್ಟು ಏರಿಕೆ ಕಂಡಿವೆ. 2023ರಲ್ಲಿ ಇದು ಶೇ. 20ರಷ್ಟು ಲಾಭ ನೀಡಿತ್ತು.2023 ರಲ್ಲಿ ಪ್ರಭಾವಶಾಲಿ 45% ರಿಟರ್ನ್ಸ್ ಬಳಿಕ BSE ಮಿಡ್‌ಕ್ಯಾಪ್ ಮತ್ತು BSE ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು 2024 ರಲ್ಲಿ 30% ನಷ್ಟು ಏರಿಕೆಯಾಗಿದೆ.
ಇದರೊಂದಿಗೆ ಐಪಿಒ ಮೂಲಕ ಪ್ರಖ್ಯಾತ ಕಂಪನಿಗಳಾದ ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸಸ್ (12500 ಕೋಟಿ ಐಪಿಒ), ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ (15 ಸಾವಿರ ಕೋಟಿ), ಎನ್‌ಎಸ್‌ಡಿಎಲ್ (4500 ಕೋಟಿ), ಡಾ.ಅಗರ್‌ವಾಲ್ ಹೆಲ್ತ್ ಕೇರ್ (3500 ಕೋಟಿ), ಹೆಕ್ಸಾವೇರ್ ಟೆಕ್ನಾಲಜೀಸ್ (9500 ಕೋಟಿ), ಏಥರ್ ಎನರ್ಜಿ (4500 ಕೋಟಿ), ಜೆಎಸ್‌ಡಬ್ಲ್ಯು ಸಿಮೆಂಟ್ (4 ಸಾವಿರ ಕೋಟಿ) ಹಾಗೂ ಹೀರೋ ಫಿನ್‌ಕಾರ್ಪ್ (3600 ಕೋಟಿ) ಕಂಪನಿಗಳು ಮಾರುಕಟ್ಟೆಗ ಬರಲಿವೆ.
SM Krishna passes away: 'ಸಾರ್ವಜನಿಕವಾಗಿ ಡೈವೋರ್ಸ್ ಕೊಟ್ಟಾಗಿದೆ, ಇನ್ಯಾಕೆ ಮಾತು..' ಎಂದಿದ್ದರು ಪತ್ನಿ ಪ್ರೇಮಾ ಕೃಷ್ಣ!
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ದುರ್ಬಲ ಕಾರ್ಪೊರೇಟ್ ಗಳಿಕೆಗಳು, ನಿಧಾನಗತಿಯ ಆರ್ಥಿಕತೆ ಮತ್ತು ದ್ವಿತೀಯ ಮಾರುಕಟ್ಟೆಗಳಲ್ಲಿ ಮುಂದುವರಿದ ವಿದೇಶಿ ಹೊರಹರಿವು ಸೇರಿದಂತೆ ಅಲ್ಪಾವಧಿಯ ಸಮಸ್ಯೆಗಳು ಮುಂದುವರಿದರೂ, ಭಾರತೀಯ ಮಾರುಕಟ್ಟೆಯ ದೀರ್ಘಾವಧಿಯ ಮೂಲಭೂತ ಅಂಶಗಳು ಬಲವಾಗಿರುತ್ತವೆ ಎಂದು ತಜ್ಞರು ಒಪ್ಪಿಕೊಂಡಿದ್ದಾರೆ. ಕಡಿಮೆ-ಗುಣಮಟ್ಟದ IPO ಗಳು ಸವಾಲುಗಳನ್ನು ಎದುರಿಸಬಹುದಾದರೂ, ಬಲವಾದ ಲಾಭದಾಯಕತೆ ಮತ್ತು ಸ್ಪಷ್ಟ ವ್ಯಾಪಾರ ಗೋಚರತೆಯನ್ನು ಹೊಂದಿರುವ ಸುಸ್ಥಾಪಿತ ಕಂಪನಿಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಕನ್ನಡದ ಪ್ರಖ್ಯಾತ ನಟಿಯನ್ನು ಮದುವೆಯಾಗುವ ಪ್ರಪೋಸಲ್ ಎಸ್‌ಎಂ ಕೃಷ್ಣಗೆ ಇತ್ತು, ಮುಂದಾಗಿದ್ದೇನು?