ಮನೆ ಬಾಗಿಲಿಗೇ ಬರುತ್ತೆ ಡೀಸೆಲ್‌!| ಈ ಸೇವೆ ಪಡೆಯಲು ಒಮ್ಮೆಗೆ ಕನಿಷ್ಠ 100 ಲೀ. ಡೀಸೆಲ್‌ ಖರೀದಿ ಕಡ್ಡಾಯ| ಅಪಾರ್ಟ್‌ಮೆಂಟ್‌ಗಳು, ಶಾಪಿಂಗ್‌ ಮಾಲ್‌, ಕೈಗಾರಿಕೆಗಳಿಗೆ ಇದು ಸಹಕಾರಿ| ದೇಶದ ವಿವಿಧೆಡೆ ಮೊಬೈಲ್‌ ಡೀಸೆಲ್‌ ವಿತರಣೆ ಕೇಂದ್ರಕ್ಕೆ ಬಿಪಿಸಿಎಲ್‌ ಚಿಂತನೆ

ನವದೆಹಲಿ[ಡಿ.08]: ಮೊಬೈಲ್‌ ಆ್ಯಪ್‌ ಮೂಲಕ ಆರ್ಡರ್‌ ಮಾಡಿದರೆ, ಮನೆ ಬಾಗಿಲಿಗೇ ಬಂದು ಡೀಸೆಲ್‌ ವಿತರಣೆ ಮಾಡುವ ವ್ಯವಸ್ಥೆಯನ್ನು ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ನೋಯ್ಡಾದಲ್ಲಿ ಆರಂಭಿಸಿದೆ.

ಬಿಪಿಸಿಎಲ್‌ನ ಈ ಕ್ರಮದಿಂದ ಭಾರೀ ಪ್ರಮಾಣದ ಡೀಸೆಲ್‌ ಖರೀದಿ ಮಾಡುವ ವಸತಿ ಸಮುಚ್ಚಯ(ಅಪಾರ್ಟ್‌ಮೆಂಟ್‌)ಗಳು, ಮಾಲ್‌ಗಳು, ಹಾಗೂ ಕೈಗಾರಿಕೋದ್ಯಮಗಳು ಪೆಟ್ರೋಲ್‌ ಬಂಕ್‌ಗಳಿಗೆ ತೆರಳದೆಯೇ, ತಾವಿದ್ದ ಸ್ಥಳದಲ್ಲಿಯೇ ಡೀಸೆಲ್‌ ಖರೀದಿಸಬಹುದು. ಇದಕ್ಕಾಗಿ ಸಂಸ್ಥೆ ಸಂಚಾರಿ ಡೀಸೆಲ್‌ ವಿತರಣಾ ಘಟಕ ರೂಪಿಸಿದೆ.

ಗ್ರಾಹಕರು ‘ಫಿಲ್‌ನೌ’ ಆ್ಯಪ್‌ನಲ್ಲಿ ಡೀಸೆಲ್‌ ಬುಕ್‌ ಮಾಡಿದರೆ, ಬಿಪಿಸಿಎಲ್‌ ಮನೆ ಬಾಗಿಲಿಗೇ ಬಂದು ಡೀಸೆಲ್‌ ವಿತರಣೆ ಮಾಡುತ್ತದೆ. ಆದರೆ, ಗ್ರಾಹಕರು ಈ ಸೇವೆಗೆ ಅರ್ಹವಾಗಲು ಒಂದು ಬಾರಿಗೆ ಕನಿಷ್ಠ 100 ಲೀಟರ್‌ ಡೀಸೆಲ್‌ ಅನ್ನು ಖರೀದಿ ಮಾಡಲೇಬೇಕು. ಕೈಗಾರಿಕೋದ್ಯಮಿಗಳು ಮತ್ತು ಇತರೆ ದೊಡ್ಡ ಸಂಸ್ಥೆಗಳಿಗೆ ನೆರವಾಗುವ ಉದ್ದೇಶದ ಈ ಯೋಜನೆಯನ್ನು ಶೀಘ್ರವೇ ದೇಶದ ಇತರೆ ಬೃಹತ್‌ ನಗರಗಳಲ್ಲೂ ಆರಂಭಿಸಲು ಬಿಪಿಸಿಎಲ್‌ ಚಿಂತನೆ ನಡೆಸಿದೆ.