ಪುಣೆಯ ಭಾಗ್ಯಲಕ್ಷ್ಮಿ ಡೈರಿ, ಪ್ರಮುಖ ಸೆಲೆಬ್ರಿಟಿಗಳಿಗೆ ಹಾಲು ಪೂರೈಸುವಲ್ಲಿ ಹೆಸರುವಾಸಿಯಾಗಿದೆ. ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ಇಲ್ಲಿಂದಲೇ ಹಾಲು ಪಡೆಯುತ್ತಾರೆ. ದೇವೇಂದ್ರ ಶಾ ಮಾಲೀಕತ್ವದ ಈ ಡೈರಿ, 26 ಎಕರೆ ಪ್ರದೇಶದಲ್ಲಿ 2,000ಕ್ಕೂ ಹೆಚ್ಚು ಹೋಲ್‌ಸ್ಟೈನ್ ಹಸುಗಳನ್ನು ಹೊಂದಿದೆ. ಇಲ್ಲಿ ದಿನಕ್ಕೆ 25,000 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಗುಣಮಟ್ಟ, ನೈರ್ಮಲ್ಯ ಮತ್ತು ತ್ವರಿತ ವಿತರಣೆಯಿಂದಾಗಿ ಈ ಡೈರಿ ಪ್ರಸಿದ್ಧಿ ಪಡೆದಿದೆ.

ಸೆಲೆಬ್ರಿಟಿ (celebrity)ಗಳ ವೈಯಕ್ತಿಕ ಜೀವನ ತಿಳಿಯುವ ಆಸಕ್ತಿ ಜನಸಾಮಾನ್ಯರಿಗಿರುತ್ತದೆ. ಅವರು ಯಾವ ಬಟ್ಟೆ ಹಾಕ್ತಾರೆ, ಮನೆಯಲ್ಲಿ ಹೇಗಿರ್ತಾರೆ, ಏನು ತಿನ್ನುತ್ತಾರೆ ಎಂಬುದನ್ನು ತಿಳಿಯಲು ಇಷ್ಟಪಡ್ತಾರೆ. ಭಾರತದ ಸೆಲೆಬ್ರಿಟಿಗಳು ಯಾವ ಹಾಲು ಕುಡಿತಾರೆ, ಅವರ ಮನೆಗೆ ಯಾವ ಡೈರಿ, ಹಾಲು ಒದಗಿಸುತ್ತೆ ಎನ್ನುವ ಕುತೂಹಲಕಾರಿ ಪ್ರಶ್ನೆಗೆ ನಾವಿಂದು ಉತ್ತರ ನೀಡ್ತೇವೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಭಾಗ್ಯಲಕ್ಷ್ಮಿ ಡೈರಿ (Bhagyalakshmi Diary), ಭಾರತದ ಕೆಲವು ಸೆಲೆಬ್ರಿಟಿಗಳಿಗೆ ಪ್ರೀಮಿಯಂ ಹಾಲನ್ನು ಪೂರೈಸುವಲ್ಲಿ ಹೆಸರುವಾಸಿಯಾಗಿದೆ. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಷನ್ ವರೆಗೆ ಎಲ್ಲರೂ ಈ ಡೈರಿಯಿಂದಲೇ ಹಾಲು ಖರೀದಿಸುತ್ತಾರೆ. ಭಾಗ್ಯಲಕ್ಷ್ಮಿ ಡೈರಿಯ ಹಾಲಿನ ಬೆಲೆ ಲೀಟರ್ ಗೆ 90 ರೂಪಾಯಿ.

ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ದಕ್ಷಿಣ ಭಾರತದ ಶ್ರೀಮಂತಿಕೆ ತೋರಿಸಿದ ಸೀಬೆ ಹಣ್ಣು ವ್ಯಾಪಾರಿ ಮಹಿಳೆ!

ಭಾಗ್ಯಲಕ್ಷ್ಮಿ ಡೈರಿ ಮಾಲೀಕ ಯಾರು? : ಸೆಲೆಬ್ರಿಟಿಗಳಿಗೆ ಹಾಲು ಒದಗಿಸುವ ಈ ಡೈರಿ ಮಾಲೀಕ ದೇವೇಂದ್ರ ಶಾ. ಡೈರಿ ಉದ್ಯಮಕ್ಕೆ ಪ್ರವೇಶ ಮಾಡುವ ಮೊದಲು ದೇವೇಂದ್ರ ಶಾ ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಕೇವಲ 175 ಗ್ರಾಹಕರೊಂದಿಗೆ ಪ್ರೈಡ್ ಆಫ್ ಕೌಸ್ ಪ್ರಾರಂಭಿಸಿದ್ದರು ದೇವೇಂದ್ರ ಶಾ. ಆದ್ರೀಗ ಮುಂಬೈ ಮತ್ತು ಪುಣೆಯಲ್ಲಿ 22,000 ಕ್ಕೂ ಹೆಚ್ಚು ಗ್ರಾಹಕರನ್ನು ಡೈರಿ ಹೊಂದಿದೆ.

ಭಾಗ್ಯಲಕ್ಷ್ಮಿ ಡೈರಿ ವಿಶೇಷತೆ : ಈ ಫಾರ್ಮ್ 26 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ. 2,000 ಡಚ್ ಹೋಲ್‌ಸ್ಟೈನ್ ಹಸುಗಳು ಫಾರ್ಮ್ ನಲ್ಲಿವೆ. ಇವುಗಳ ಬೆಲೆ 90,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗಿದೆ. ಈ ಫಾರ್ಮ್ ಪ್ರತಿದಿನ 25,000 ಲೀಟರ್‌ಗಳಿಗಿಂತ ಹೆಚ್ಚು ಹಾಲು ಉತ್ಪಾದಿಸುತ್ತದೆ. ಗುಣಮಟ್ಟು ಹಾಗೂ ನೈರ್ಮಲ್ಯಕ್ಕೆ ಈ ಫಾರ್ಮ್ ಹೆಸರುವಾಸಿ. 

ಇಲ್ಲಿರುವ ಹಸುಗಳಿಗೆ ಸೋಯಾಬೀನ್, ಜೋಳದ ಮೇವು, ಅಲ್ಫಾಲ್ಫಾ ಹುಲ್ಲು ಮತ್ತು ಕಾಲೋಚಿತ ತರಕಾರಿಗಳಂತಹ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಇಲ್ಲಿನ ಹಸುಗಳಿಗೆ RO ಶುದ್ಧೀಕರಿಸಿದ ನೀರನ್ನು ನೀಡಲಾಗುತ್ತದೆ. ಮಲಗಲು, ನಿಲ್ಲಲ್ಲು ರಬ್ಬರ್ ಮ್ಯಾಟ್‌ ಹಾಕಲಾಗಿದೆ. ಪ್ರತಿ ದಿನ ಮೂರು ಬಾರಿ ಹಸುಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಅಲ್ಲದೆ ಪ್ರತಿ ದಿನ ಹಾಲು ಕರೆಯುವ ಮೊದಲು ಅವುಗಳ ತೂಕ ಮತ್ತು ತಾಪಮಾನವನ್ನು ಪರಿಶೀಲಿಸಲಾಗುತ್ತದೆ. ಅನಾರೋಗ್ಯಕರ ಹಸುಗಳಿಂದ ಹಾಲನ್ನು ತೆಗೆದುಕೊಳ್ಳುವುದಿಲ್ಲ. ಅಂಥ ಹಸುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಹಸುಗಳ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಲಾಗುತ್ತದೆ. ಅವರ ಆರೋಗ್ಯ ಕಾಪಾಡಲು, ಅವುಗಳನ್ನು ಶಾಂತವಾಗಿಡಲು ಮತ್ತು ಒತ್ತಡ ಮುಕ್ತವಾಗಿಡಲು 24 ಗಂಟೆ ಮೃದುವಾದ ಸಂಗೀತವನ್ನು ನುಡಿಸಲಾಗುತ್ತದೆ.

ಅಂಬಾನಿ ಅದಾನಿಗಿಂತಲೂ ಶ್ರೀಮಂತನಾಗಿದ್ದ ವಿಜಯಪತ್ ಈಗ ಬಾಡಿಗೆ ಮನೆಯಲ್ಲಿ ವಾಸ

ನೈರ್ಮಲ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಲ್ಲಿ ಮಾನವ ಸ್ಪರ್ಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹಾಲು ಕರೆಯುವ ಯಂತ್ರವನ್ನು ಬಳಸಲಾಗುತ್ತದೆ. ಕೊಳವೆ ಮೂಲಕ ಹರಿಯುವ ಹಾಲು ಪಾಶ್ಚೀಕರಣಕ್ಕೆ ಒಳಗಾಗಿ ಏಳು ನಿಮಿಷದಲ್ಲಿ ಬಾಟಲಿ ಸೇರುತ್ತದೆ. ಈ ವ್ಯವಸ್ಥೆಯಲ್ಲಿ ಒಂದೇ ಬಾರಿ 50 ಹಸುಗಳ ಹಾಲು ಕರೆಯಬಹುದು. 

ತ್ವರಿತ ವಿತರಣೆ : ಹಸುವಿನಿಂದ ಕರೆದ ಹಾಲನ್ನು ಹೆಚ್ಚು ಸಮಯ ಸಂಗ್ರಹಿಸಲಾಗುವುದಿಲ್ಲ. ಮೂರು ಗಂಟೆಯೊಳಗೆ ಎಲ್ಲ ಗ್ರಾಹಕರಿಗೆ ಹಾಲನ್ನು ತಲುಪಿಸಲಾಗುತ್ತದೆ. ವ್ಯಾನ್ 168 ಕಿಲೋಮೀಟರ್ ದೂರದವರೆಗೆ ಹಾಲನ್ನೊದಗಿಸುತ್ತದೆ. ಬೆಳಿಗ್ಗೆ 5.30 ರಿಂದ 7. 30ರವರೆಗೆ ಹಾಲನ್ನು ಸರಬರಾಜು ಮಾಡಲಾಗುತ್ತದೆ. ಗ್ರಾಹಕರಿಗೆ ಲಾಗಿನ್ ಐಡಿ ನೀಡಲಾಗಿದ್ದು, ಅದ್ರ ಸಹಾಯದಿಂದ ಅವರು ಹಾಲನ್ನು ಆರ್ಡರ್ ಮಾಡಬಹುದು ಮತ್ತು ರದ್ದು ಮಾಡಬಹುದು. ಭಾಗ್ಯಲಕ್ಷ್ಮಿ ಡೈರಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟಕ್ಕೆ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಸೆಲೆಬ್ರಿಟಿಗಳು ಈ ಡೈರಿಗೆ ಆಕರ್ಷಿತರಾಗಿದ್ದಾರೆ.