ಹಿರಿಯ ನಾಗರಿಕರಿಗೆ ಈ ಎರಡು ಯೋಜನೆಗಳು ಬೆಸ್ಟ್; ಪ್ರತಿ ತಿಂಗಳು ಪಿಂಚಣಿ ಫಿಕ್ಸ್ !
ಹಿರಿಯ ನಾಗರಿಕರು ಹಣವನ್ನು ಹೂಡಿಕೆ ಮಾಡುವಾಗ ಸುರಕ್ಷತೆಗೆ ಹೆಚ್ಚಿನ ಗಮನ ನೀಡೋದು ಅಗತ್ಯ. ಏಕೆಂದ್ರೆ ಆ ವಯಸ್ಸಿನಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಅವರಿಗೆ ಕಷ್ಟ. ಹಿರಿಯ ನಾಗರಿಕರಿಗಾಗಿಯೇ ಕೆಲವು ಯೋಜನೆಗಳಿದ್ದು, ಅವುಗಳಲ್ಲಿ ಪ್ರಧಾನ ಮಂತ್ರಿ ವಯೋ ವಂದನ ಯೋಜನೆ (ಪಿಎಂವಿವಿವೈ) ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್) ಪ್ರಮುಖವಾದವು.
Business Desk:ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ ಹಣವನ್ನು ಎಲ್ಲೆಂದರಲ್ಲಿ ಹೂಡಿಕೆ ಮಾಡೋದು ಹಿರಿಯ ನಾಗರಿಕರಿಗೆ ಸಾಧ್ಯವಿಲ್ಲ. ಹೂಡಿಕೆ ವಿಚಾರದಲ್ಲಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡೋದಿಲ್ಲ. ಹೀಗಾಗಿ ರಿಟರ್ನ್ ಭರವಸೆ ನೀಡುವ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿರಿಯ ನಾಗರಿಕರು ಇಷ್ಟಪಡುತ್ತಾರೆ. ಇದು ಸಹಜ ಕೂಡ. ವೃದ್ಧಾಪ್ಯದಲ್ಲಿ ಅದೂ ಹಣಕಾಸಿನ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಹೀಗಿರುವಾಗ ಹಿರಿಯ ನಾಗರಿಕರಿಗೆ ಎಂದೇ ರೂಪಿಸಿರುವ ಕೆಲವು ಯೋಜನೆಗಳಿವೆ. ಅವುಗಳಲ್ಲಿ ಪ್ರಧಾನ ಮಂತ್ರಿ ವಯೋ ವಂದನ ಯೋಜನೆ (ಪಿಎಂವಿವಿವೈ) ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್) ಪ್ರಮುಖವಾದವು. ಈ ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲವಿದೆ. ಹೀಗಾಗಿ ಈ ಎರಡೂ ಯೋಜನೆಗಳು ಹಿರಿಯ ನಾಗರಿಕರಿಗೆ ಸುರಕ್ಷಿತ. ಜೊತೆಗೆ ನಿರಂತರ ಬಡ್ಡಿ ಆದಾಯ ಕೂಡ ನೀಡುತ್ತವೆ. ಹಾಗಾದ್ರೆ ಈ ಎರಡು ಯೋಜನೆಗಳ ವಿಶೇಷತೆಗಳೇನು? ಇವುಗಳಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.
ಪ್ರಧಾನಮಂತ್ರಿ ವಯೋ ವಂದನಾ ಯೋಜನೆ (PMVVY)
ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ನಿರ್ವಹಿಸುತ್ತದೆ. ಪ್ರಧಾನಮಂತ್ರಿ ವಯೋ ವಂದನಾ ಯೋಜನೆಯಲ್ಲಿ ಹೂಡಿಕೆ (Invest) ಮಾಡಿದ್ರೆ 10 ವರ್ಷಗಳ ಕಾಲ ಮಾಸಿಕ ನಿಗದಿತ ಪಿಂಚಣಿ (Pension) ವಾರ್ಷಿಕ ಶೇ.7.40 ದರದಲ್ಲಿ ಲಭಿಸುತ್ತದೆ. ಅಂದ್ರೆ ನಿಮ್ಮ ಹೂಡಿಕೆಯನ್ನು(Investment) ಆಧರಿಸಿ ಮಾಸಿಕ 10,000ರೂ.ನಿಂದ 9,250 ರೂ. ಪಿಂಚಣಿ (Pension) ಪಡೆಯಬಹುದು. ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಇನ್ನು ಪಿಂಚಣಿ ಹಣವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪಡೆಯಬಹುದು.
ಪಿಪಿಎಫ್ ಖಾತೆ ಅವಧಿ 15 ವರ್ಷ, ಆ ಬಳಿಕ ಖಾತೆದಾರ ಏನ್ ಮಾಡ್ಬಹುದು?
ಪ್ರಧಾನಮಂತ್ರಿ ವಯೋ ವಂದನಾ (PMVVY) ಯೋಜನೆಯಲ್ಲಿ ಮಾಡಿದ ಹೂಡಿಕೆಯಿಂದ ಮಾಸಿಕ ಪಿಂಚಣಿ ವಿತ್ ಡ್ರಾ ಮಾಡಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ನೀವು ಬ್ಯಾಂಕ್ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡೋ ಬದಲು PMVVYಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಬಡ್ಡಿದರ ಲಭಿಸುತ್ತದೆ. ಈ ಯೋಜನೆಯು 2023ರ ಮಾರ್ಚ್ 31ರ ತನಕ ಮಾತ್ರ ಲಭ್ಯವಿದೆ. ಈ ಯೋಜನೆಯನ್ನು ಆಪ್ಲೈನ್ ಹಾಗೂ ಆನ್ ಲೈನ್ ಮುಖಾಂತರ ಖರೀದಿ ಮಾಡಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಅಂಚೆ ಇಲಾಖೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (SCSS) 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಹೂಡಿಕೆ ಮಾಡಬಹುದು. ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ಮಾತ್ರ ವಯೋಮಾನ ಸಡಿಲಿಕೆ ನೀಡಲಿದ್ದು, 55 ವರ್ಷದಿಂದ 60 ವರ್ಷಗಳ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 1000 ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು. ಗರಿಷ್ಠ 15ಲಕ್ಷ ರೂ. ಹೂಡಿಕೆ ಮಾಡಬಹುದು. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು. ಹೂಡಿಕೆದಾರರು ಬಯಸಿದ್ರೆ ಮತ್ತೆ ಮೂರು ವರ್ಷ ವಿಸ್ತರಿಸಲು ಅವಕಾಶವಿದೆ. ಎಸ್ ಸಿಎಸ್ ಎಸ್ ಗೆ ಪ್ರಸ್ತುತ ಶೇ.7.6 ಬಡ್ಡಿದರ ನೀಡಲಾಗುತ್ತಿದೆ.
KYC ಅಂದ್ರೇನು? ಅದ್ರ ಲಾಭವೇನು ಗೊತ್ತಾ?
ಖಾತೆ ತೆರೆದು ಒಂದು ವರ್ಷದ ಬಳಿಕ ಠೇವಣಿ ಮೊತ್ತದ ಶೇ.1.5ರಷ್ಟನ್ನು ಕಡಿತ ಮಾಡಿ ಅವಧಿಗೂ ಮುನ್ನ ಯೋಜನೆಯನ್ನು ಕ್ಲೋಸ್ ಮಾಡಲು ಅವಕಾಶ ನೀಡಲಾಗಿದೆ. ಹಾಗೆಯೇ ಎರಡು ವರ್ಷ ಮೇಲ್ಪಟ್ಟಿದ್ರೆ ಖಾತೆ ಕ್ಲೋಸ್ ಮಾಡಿದ ಬಳಿಕ ಠೇವಣಿ ಮೊತ್ತದ ಶೇ.1ರಷ್ಟನ್ನು ಕಡಿತ ಮಾಡಲಾಗುತ್ತದೆ. ಈ ಯೋಜನೆಯಡಿ ಠೇವಣಿಯಿಟ್ಟ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಪ್ರಯೋಜನ ಕ್ಲೈಮ್ ಮಾಡಲು ಅವಕಾಶವಿದೆ.