Asianet Suvarna News Asianet Suvarna News

ತಳ್ಳುಗಾಡಿಗಾಗಿ ಕಣ್ಣೀರು ಹಾಕಿದ ಬೆಂಗಳೂರಿನ ವೃದ್ಧೆ ವಿಡಿಯೋ ವೈರಲ್;ಟೀಕೆಗೆ ಬೆದರಿ ಹಿಂತಿರುಗಿಸಿದ ಬಿಬಿಎಂಪಿ!

ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ರಸ್ತೆಬದಿ ವ್ಯಾಪಾರ ನಡೆಸುತ್ತಿದ್ದ 70 ವರ್ಷದ ವೃದ್ಧ ಮಹಿಳೆಯ ತಳ್ಳುಗಾಡಿಯನ್ನು ಬಿಬಿಎಂಪಿ ವಶಪಡಿಸಿಕೊಂಡಿತ್ತು.ಮಹಿಳೆ ತಳ್ಳುಗಾಡಿಗಾಗಿ ಅಳುತ್ತಿರುವ ವಿಡಿಯೋ ವೈರಲ್ ಆಗಿದ್ದು,ಈಗ ಬಿಬಿಎಂಪಿ ಗಾಡಿ ಹಿಂತಿರುಗಿಸಿದೆ. 
 

Bengalurus 70 year old corn seller gets her seized cart back from the BBMP after Twitter row anu
Author
First Published Jul 28, 2023, 3:12 PM IST | Last Updated Jul 28, 2023, 3:14 PM IST

ಬೆಂಗಳೂರು (ಜು.28): ಜೋಳ ಮಾರಾಟ ಮಾಡಲು ಬಳಸುತ್ತಿದ್ದ ತನ್ನ ತಳ್ಳುಗಾಡಿ ಕಾಣೆಯಾಗಿದೆ ಎಂದು  70 ವರ್ಷದ ವೃದ್ಧೆ ಕಬ್ಬನ್ ಪಾರ್ಕ್ ಹೊರಭಾಗದಲ್ಲಿ ಅಳುತ್ತಿರುವ ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಬುಧವಾರ ಆ ಮಹಿಳೆಗೆ ತಳ್ಳುಗಾಡಿಯನ್ನು ಹಿಂತಿರುಗಿಸಲಾಗಿದೆ. ಕಳೆದ ವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಬದಿಯಲ್ಲಿ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಅನೇಕ ವ್ಯಾಪಾರಿಗಳ ತಳ್ಳುಗಾಡಿಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಮಧ್ಯ ಪ್ರವೇಶಿಸಿದ್ದರು ಹಾಗೂ ಈಕೆಯಂತಹ ವ್ಯಾಪಾರಿಗಳು ಬೆಂಗಳೂರಿನ ಸಂಸ್ಕೃತಿ, ಸಂಪ್ರದಾಯ ಹಾಗೂ ನೆನಪುಗಳನ್ನು ಸಂರಕ್ಷಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ತಕ್ತಪಡಿಸಿದ್ದರು. ಇನ್ನು ಕಬ್ಬನ್ ಪಾರ್ಕ್ ಹೊರಭಾಗದಲ್ಲಿ ಕುಳಿತು, ಕಾಣಿಯಾಗಿರುವ ತನ್ನ ತಳ್ಳುಗಾಡಿಯ ಬಗ್ಗೆ ಚಿಂತಿತರಾಗಿರುವ ವೃದ್ಧೆಯ ವಿಡಿಯೋ ಅನ್ನು ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಚೆಟ್ಟಿ ರಾಜ್ ಗೋಪ್ ಹಂಚಿಕೊಂಡಿದ್ದರು. ಟ್ವಿಟರ್ ನಲ್ಲಿ ಶೇರ್ ಆಗಿದ್ದ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ತಳ್ಳುಗಾಡಿಯನ್ನು ಹಿಂತಿರುಗಿಸುವಂತೆ ಬಿಬಿಎಂಪಿಗೆ ಆಗ್ರಹಿಸಿದ್ದರು. 

ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿರುವ ಪ್ರಿಯಾ, 'ಕಳೆದ ಮೂರು ದಶಕಗಳಿಂದ ಈ ಬಡ ವೃದ್ಧ ಮಹಿಳೆ ಕಬ್ಬನ್ ಪಾರ್ಕ್ ಬಳಿ ಜೋಳ ಮಾರಾಟ ಮಾಡುತ್ತಿದ್ದಾರೆ. ಶನಿವಾರ ಆಕೆಯ ತಳ್ಳುಗಾಡಿಯನ್ನು ವಶಪಡಿಸಿಕೊಂಡು ಬಿಬಿಎಂಪಿ ಟ್ರಕ್ ಗೆ ಹಾಕಲಾಗಿತ್ತು. ಆದರೂ ಆಕೆ ಪ್ರತಿದಿನ ಪಾರ್ಕ್ ಗೆ ಬಳಿ ಬಂದು ಕಣ್ಣೀರು ಹಾಕುತ್ತಾರೆ. ದಯವಿಟ್ಟು ಆಕೆಯ ತಳ್ಳುಗಾಡಿಯನ್ನು ಹಿಂತಿರುಗಿಸಿ' ಎಂದು ಟ್ವೀಟ್ ಮಾಡಿದ್ದರು. 

ಈ ವಿಡಿಯೋದಲ್ಲಿ ವೃದ್ಧ ವ್ಯಾಪಾರಿ ಮಹಿಳೆ ಸೆಲ್ವಮ್ಮ ಕೂಡ ಮಾತನಾಡಿದ್ದು, ತನ್ನ ತಳ್ಳುಗಾಡಿ ಕಾಣೆಯಾಗಿದ್ದು,  ಬಿಬಿಎಂಪಿ ಅಧಿಕಾರಿಗಳು ಕಬ್ಬನ್ ಪಾರ್ಕ್ ಹೊರಭಾಗದಲ್ಲಿ ಪಾದಚಾರಿ ಮಾರ್ಗವನ್ನು ಕ್ಲಿಯರ್ ಮಾಡಲು ಟ್ರಕ್ ನಲ್ಲಿ ಇದನ್ನು ಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದರು. ಈ ವಿಡಿಯೋ ಇಂಟರ್ನೆಟ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ನೆಟ್ಟಿಗರು ತಳ್ಳುಗಾಡಿಯನ್ನು ವೃದ್ಧೆಗೆ ಹಿಂತಿರುಗಿಸುವಂತೆ ಬಿಬಿಎಂಪಿಯನ್ನು ಆಗ್ರಹಿಸಿದ್ದರು ಕೂಡ. 

ಈ ಪ್ರಕರಣದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಬೆಂಗಳೂರು ಸೆಂಟ್ರಲ್ ಎಂಪಿ ಪಿಸಿ ಮೋಹನ್, 'ಕಳೆದ ಮೂರು ದಶಕಗಳಿಂದ ಕಬ್ಬನ್ ಪಾರ್ಕ್ ನಲ್ಲಿ ಜೋಳ ಹಾಗೂ ಇತರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದ ಬಡ ವೃದ್ಧ ಮಹಿಳೆ ತಳ್ಳುಗಾಡಿಯನ್ನು ಬಿಬಿಎಂಪಿ ಹಿಂತಿರುಗಿಸಿದೆ ಎಂಬುದನ್ನು ತಿಳಿಸಲು  ಸಂತಸಪಡುತ್ತೇನೆ. ಆಕೆಯಂತಹ ರಸ್ತೆಬದಿ ವ್ಯಾಪಾರಿಗಳು ನಗರದ ಸಂಸ್ಕೃತಿ, ಸಂಪ್ರದಾಯ ಹಾಗೂ ನೆನಪುಗಳನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆಕೆಯಂತಹ   ಮಾರಾಟಗಾರರು ತಮ್ಮ ವ್ಯಾಪಾರವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಬಹುದು ಎಂದು ತಿಳಿಸಿದ್ದಾರೆ.

ಆಕೆಯಂತಹ ವ್ಯಾಪಾರಿಗಳು ಯಾವುದೇ ಸಮಸ್ಯೆಯಿಲ್ಲದೆ ವ್ಯಾಪಾರ ಮುಂದುವರಿಸಬಹುದು. 'ನಗರಕ್ಕೆ ಸಾಕಷ್ಟು ಕೊಡುಗೆ ನೀಡುವ ಇಂಥ ಕಠಿಣ ಪರಿಶ್ರಮಪಡುವ ವ್ಯಕ್ತಿಗಳನ್ನು ಗೌರವಿಸುವ ಹಾಗೂ ನೆರವು ನೀಡುವ ಕಾರ್ಯವನ್ನು ನಾವು ಮುಂದುವರಿಸಬೇಕು. ಅವರ ಕೆಲಸ ಬಗ್ಗೆ ಅವರಿಗಿರುವ ಬದ್ಧತೆಯನ್ನು ನಾವು ಸಂಭ್ರಮಿಸಬೇಕು ಹಾಗೂ ಸಂರಕ್ಷಿಸಬೇಕು. ಇನ್ನು ಇವರಂತಹ ರಸ್ತೆಬದಿ ವ್ಯಾಪಾರಿಗಳು ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸೋದನ್ನು ಮುಂದುವರಿಸುವಂತೆ ನಾವು ನೋಡಿಕೊಳ್ಳಬೇಕು' ಎಂದು ಅವರು ತಿಳಿಸಿದ್ದಾರೆ.

ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೀಗ 8200 ಕೋಟಿ ರೂ ಆಸ್ತಿಗೆ ಒಡೆಯ!

ಬೀದಿಬದಿ ವ್ಯಾಪಾರಿಗಳ ಕಾಯ್ದೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಪಾದಾಚಾರಿ ಮಾರ್ಗಗಳ ಮಧ್ಯೆ ಬಿಬಿಎಂಪಿ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ. ಹೀಗಿರುವಾಗ ಬಿಬಿಎಂಪಿ ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಹೀಗಿರುವಾಗ ಆಕೆಯ ಆದಾಯದ ಏಕೈಕ ಮೂಲವನ್ನು ಕಸಿದುಕೊಳ್ಳುವುದು ಎಷ್ಟು ಸರಿ? ಎಂದು ಆಕೆ ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios