ಬೆಂಗಳೂರಿನಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಹುಡುಕಲು ಸಹಾಯ ಮಾಡುವ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯಾಗಿದೆ. ಈ ಆ್ಯಪ್, ಗಮ್ಯಸ್ಥಾನ ತಲುಪಿದ ನಂತರ ಪಾರ್ಕಿಂಗ್ ಸ್ಥಳಗಳನ್ನು ತೋರಿಸುತ್ತದೆ ಮತ್ತು ಉಚಿತ, ಪಾವತಿಸಿದ ಮತ್ತು ರಿಯಾಯಿತಿ ಪಾರ್ಕಿಂಗ್ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ.

ಬೆಂಗಳೂರು (ಜೂ.13): ಜಗತ್ತಿನಲ್ಲಿಯೇ ಅತಿಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಆದರೆ, ಎಲ್ಲಿಯಾದರೂ ಹೋಗಬೇಕು ಎಂದಾಗ ಬೈಕ್‌ ಅಥವಾ ಕಾರ್‌ಅನ್ನು ಪಾರ್ಕಿಂಗ್‌ ಮಾಡೋದೇ ದೊಡ್ಡ ಸಮಸ್ಯೆ. ಬೆಂಗಳೂರಿನಲ್ಲಿ ಪಾರ್ಕಿಂಗ್‌ ಸ್ಥಳವನ್ನು ಹುಡುಕುವುದೇ ಸಾಹಸವಾಗಿರುವಂಥ ಟೈಮ್‌ನಲ್ಲಿ ಈ ಸಮಸ್ಯೆಯನ್ನು ಸರಳ ಮಾಡುವ ನಿಟ್ಟಿನಲ್ಲಿ ಹೊಸ ಅಪ್ಲಿಕೇಶನ್‌ ಬಂದಿದೆ.

ಬೆಂಗಳೂರಿನಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಹುಡುಕಲು ಯೂಸರ್‌ಗಳಿಗೆ ಅವಕಾಶ ನೀಡುವ ಹೊಸ ಮೊಬೈಲ್ ಅಪ್ಲಿಕೇಶನ್ ಇದಾಗಿದೆ. ಇತ್ತೀಚೆಗೆ ಮಾಧ್ಯಮವೊಂದಿಗೆ 'ನಮ್ಮ ಪಾರ್ಕಿಂಗ್ ಅಪ್ಲಿಕೇಶನ್' ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ತಿಳಿಸಲು ಪ್ರಯತ್ನ ಮಾಡಿತು. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಎಂಟು ಸ್ಥಳಗಳಿಗೆ ಭೇಟಿ ನೀಡಿತು.

ಈ ಆ್ಯಪ್, ಪ್ರಯಾಣದ ಆರಂಭದಲ್ಲಿ ಅಲ್ಲ ಬದಲಾಗಿ ಗಮ್ಯಸ್ಥಾನ ತಲುಪಿದ ನಂತರವೇ ಪಾರ್ಕಿಂಗ್ ಸ್ಥಳಗಳನ್ನು ತೋರಿಸಿದೆ. ಮೊದಲ ಸ್ಟಾಪ್‌ ಆಗಿ ಮಾಗಡಿ ರಸ್ತೆಯಲ್ಲಿರುವ ಒಂದು ಮಾಲ್ ಆಯ್ಕೆ ಮಾಡಿದ್ದರು. ಆ್ಯಪ್‌ನಲ್ಲಿ ಮಾಲ್‌ನ ಹೆಸರನ್ನು ನಮೂದಿಸಿದ ನಂತರ, ಗೂಗಲ್ ನಕ್ಷೆಗಳಲ್ಲಿ ನೇರಳೆ ಬಣ್ಣದ ಪಿನ್ ಕಾಣಿಸಿಕೊಂಡಿತು, ಅದು ಒಳಗೆ ಪಾವತಿಸಿದ ಪಾರ್ಕಿಂಗ್ ಲಭ್ಯವಿದೆ ಎಂದು ಸೂಚಿಸುತ್ತಿತ್ತು.

ನಾವು ಗಮ್ಯಸ್ಥಾನವನ್ನು ತಲುಪಿದ್ದೇವೆಯೇ ಎಂದು ಕೇಳುವ ಪಾಪ್-ಅಪ್ ಅಧಿಸೂಚನೆ ಕೂಡ ಬಂದಿದೆ. ದೃಢೀಕರಿಸಿದ ನಂತರ, 10-15 ರೂ. ಸ್ವಯಂಪ್ರೇರಿತ ದೇಣಿಗೆ ನೀಡುವಂತೆ ಕೇಳಿದೆ. ಮಾಗಡಿ ಮೆಟ್ರೋ ನಿಲ್ದಾಣದಲ್ಲಿ, ಅಪ್ಲಿಕೇಶನ್ ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆದರೆ ನಮಗೆ ಪಾರ್ಕಿಂಗ್ ಸ್ಥಳ ಸಿಕ್ಕಿದೆಯೇ ಅಥವಾ ಇಲ್ಲವೇ ಎಂದು ಅಪ್ಲಿಕೇಶನ್‌ ಪ್ರಶ್ನೆ ಮಾಡಿದೆ.

ಮಾಗಡಿ ಮುಖ್ಯ ರಸ್ತೆಯ ಆಚೆ ಇರುವ ಒಂದು ಥಿಯೇಟರ್‌ನಲ್ಲಿ, ಅಪ್ಲಿಕೇಶನ್‌ನಲ್ಲಿ ಥಿಯೇಟರ್ ಇರುವ ಸ್ಥಳ ನಮಗೆ ಸಿಗಲಿಲ್ಲ. ವಿಜಯನಗರ ಮೆಟ್ರೋ ನಿಲ್ದಾಣ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ, ಅಪ್ಲಿಕೇಶನ್ ಎಂಟು ನಿಮಿಷಗಳ ದೂರದಲ್ಲಿರುವ ಪಾರ್ಕಿಂಗ್‌ ಸ್ಥಳವನ್ನು ತೋರಿಸಿದೆ. ಪಾರ್ಕಿಂಗ್‌ ಸ್ಥಳದ ಸಮೀಪ ಬರುತ್ತಿದ್ದಂತೆ ಇನ್ನೂ 9 ಪಾರ್ಕಿಂಗ್‌ ಸ್ಥಳವನ್ನು ತೋರಿಸಿದೆ. ನಾಗರಭಾವಿ ಬಿಡಿಎ ಸಂಕೀರ್ಣದ ಬಳಿ ನಡೆಸಿದ ಅಪ್ಲಿಕೇಶನ್‌ ಪರೀಕ್ಷೆಯಲ್ಲಿ ಕೆಂಪು ಪಿನ್ ಉಚಿತ ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ಯಿತು.

ನಿರ್ದಿಷ್ಟ ಸ್ಥಳದಲ್ಲಿ ಪಾರ್ಕಿಂಗ್ ಸ್ಥಳಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಮತ್ತು ಸ್ಥಳದಲ್ಲಿ ಯಾವುದೂ ಲಭ್ಯವಿಲ್ಲದಿದ್ದರೆ ಹತ್ತಿರದ ಪರ್ಯಾಯಗಳನ್ನು ಸೂಚಿಸಲು ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅದರ ಸಂಸ್ಥಾಪಕ ನಿತಿನ್ ಪ್ರಭಾಕರ್ ಹೇಳಿದ್ದಾರೆ.

ಇದು ಪ್ರಸ್ತುತ ನಗರದಾದ್ಯಂತ ಸುಮಾರು 25,000 ಕಾರು ಪಾರ್ಕಿಂಗ್ ಸ್ಥಳಗಳು ಮತ್ತು 35,000 ಬೈಕ್ ಪಾರ್ಕಿಂಗ್‌ ಸ್ಥಳಗಳನ್ನು ಪಟ್ಟಿ ಮಾಡಿದೆ. ಇವುಗಳಲ್ಲಿ, ಕಾರುಗಳು ಮತ್ತು ಬೈಕ್‌ಗಳಿಗೆ ಸೇರಿದ ಸುಮಾರು 800 ಸ್ಥಳಗಳು ಬ್ರ್ಯಾಂಡ್‌ನ ಖಾಸಗಿ ಆಸ್ತಿಗಳಲ್ಲಿವೆ.

ಒಟ್ಟು ಪಾರ್ಕಿಂಗ್ ಸ್ಥಳಗಳಲ್ಲಿ ಸರಿಸುಮಾರು 20% ಉಚಿತ, 70% ಪಾವತಿ ಪಾರ್ಕಿಂಗ್‌ ಮತ್ತು 10% ರಿಯಾಯಿತಿ ದರಗಳನ್ನು ನೀಡಲಾಗುತ್ತದೆ (ಆ್ಯಪ್ ಮೂಲಕ ಲಭ್ಯವಿದೆ). ಪಾರ್ಕಿಂಗ್ ಸ್ಥಳಗಳನ್ನು ಕಲರ್‌ ಕೋಡೆಡ್‌ ಮಾಡಲಾಗಿದೆ: ಉಚಿತಕ್ಕೆ ಕೆಂಪು, ಪಾವತಿ ಪಾರ್ಕಿಂಗ್‌ಗೆ ನೇರಳೆ, ರಿಯಾಯಿತಿಗೆ ಕಿತ್ತಳೆ ಮತ್ತು ಲಭ್ಯವಿಲ್ಲದೆ ಇದ್ದಲ್ಲಿ ಬೂದು ಬಣ್ಣವನ್ನು ತೋರಿಸುತ್ತದೆ.

ಪಾರ್ಕಿಂಗ್ ಸೌಲಭ್ಯದೊಳಗೆ ಸ್ಥಳಗಳು ಲಭ್ಯವಿದೆಯೇ ಎಂಬುದರ ಕುರಿತು ಇದು ಲೈವ್ ಅಪ್‌ಡೇಟ್‌ಅನ್ನು ಒದಗಿಸುವುದಿಲ್ಲ. ನೈಜ-ಸಮಯದ ಟ್ರ್ಯಾಕಿಂಗ್ ಹಾರ್ಡ್‌ವೇರ್-ತೀವ್ರವಾಗಿರುತ್ತದೆ ಮತ್ತು ಹಿಂದೆ ವಿಫಲವಾಗಿದೆ, ಆದ್ದರಿಂದ ಅವರು ವೈಶಿಷ್ಟ್ಯವನ್ನು ಸಂಯೋಜಿಸದಿರಲು ನಿರ್ಧರಿಸಿದ್ದಾರೆ ಎಂದು ಪ್ರಭಾಕರ್ ಹೇಳಿದ್ದಾರೆ. ಇದನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 6,000 ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿದೆ.

View post on Instagram