ಮಿಂತ್ರಾ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಬಂಧಿತ ಕಂಪನಿಗಳ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ₹1654 ಕೋಟಿ ದೂರು ದಾಖಲಾಗಿದೆ. ಹೋಲ್‌ಸೇಲ್ ವ್ಯಾಪಾರದ ನೆಪದಲ್ಲಿ ಮಲ್ಟಿ ಬ್ರಾಂಡ್ ಚಿಲ್ಲರೆ ವ್ಯಾಪಾರ ನಡೆಸಿ ಎಫ್‌ಡಿಐ ನಿಯಮ ಉಲ್ಲಂಘನೆ ಆರೋಪ.
ನವದೆಹಲಿ (ಜು.23): ದೇಶದ ಪ್ರಸಿದ್ಧ ಈ-ಕಾಮರ್ಸ್ ಸಂಸ್ಥೆ ಮಿಂತ್ರಾ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಸಂಬಂಧಿತ ಕಂಪನಿಗಳು ಮತ್ತು ನಿರ್ದೇಶಕರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA - Foreign Exchange Management Act, 1999) ಅಡಿ ₹1654 ಕೋಟಿ ರೂ. ಉಲ್ಲಂಘನೆಯ ಆರೋಪದ ಮೇಲೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೆಟ್ (ED) ದೂರು ದಾಖಲಿಸಿದೆ.
ಬೆಂಗಳೂರುನಲ್ಲಿರುವ ಇಡಿ ಪ್ರಾದೇಶಿಕ ಕಚೇರಿಯಿಂದ ಜುಲೈ 23 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಮಿಂತ್ರಾ ಮತ್ತು ಸಂಬಂಧಿತ ಸಂಸ್ಥೆಗಳು 'ಹೋಲ್‌ಸೇಲ್ ಕ್ಯಾಶ್ & ಕ್ಯಾರಿ' ಎಂಬ ನೆಪದಲ್ಲಿ ಮಲ್ಟಿ ಬ್ರಾಂಡ್ ಚಿಲ್ಲರೆ ವ್ಯಾಪಾರ (Multi Brand Retail Trade) ನಡೆಸಿರುವುದು ಮತ್ತು ಇದು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿಯ ಉಲ್ಲಂಘನೆಯಾಗಿರುವುದಾಗಿ ಉಲ್ಲೇಖಿಸಲಾಗಿದೆ.
FDI ನಿಯಮ ಉಲ್ಲಂಘನೆ ಹೇಗೆ?
ಮಿಂತ್ರಾ ಸಂಸ್ಥೆ ತನ್ನ ವ್ಯವಹಾರವನ್ನು ಹೋಲ್ಸೇಲ್ ಕ್ಯಾಂಪ್ & ಕ್ಯಾರಿ ಎಂದು ಘೋಷಿಸಿದ್ದರೂ, ವಾಸ್ತವದಲ್ಲಿ ಬಹುತೇಕ ವಸ್ತುಗಳನ್ನು ವಿಕ್ಟರ್ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಬಂಧಿತ ಸಂಸ್ಥೆಗೆ ಮಾರಾಟ ಮಾಡಿದ್ದು, ಈ ಸಂಸ್ಥೆಯೇ ಮತ್ತೆ ಗ್ರಾಹಕರಿಗೆ (retail customers) ಮಾರಾಟ ನಡೆಸುತ್ತಿತ್ತು ಎಂಬುದು ಇಡಿಗೆ ಲಭ್ಯವಿರುವ ದಾಖಲೆಗಳಿಂದ ಸ್ಪಷ್ಟವಾಗಿದೆ. ಮಿಂತ್ರಾ ಮತ್ತು ವಿಕ್ಟರ್ ಇ-ಕಾಮರ್ಸ್ ಎರಡೂ ಕೂಡ ಒಂದೇ ಗುಂಪು ಅಥವಾ ಪಾಲುದಾರ ಸಂಸ್ಥೆಗಳಾಗಿವೆ.
ಈ ರೀತಿಯ ರಚನೆಯ ಮೂಲಕ B2B (ಬಿಸಿನೆಸ್ ಟು ಬಿಸಿನೆಸ್) ಮತ್ತು B2C (ಬಿಸಿನೆಸ್ ಟು ಕಸ್ಟಮರ್) ವ್ಯವಹಾರವನ್ನು ಕೃತಕವಾಗಿ ವಿಭಜಿಸಿ ಎಫ್‌ಡಿಐ ನಿಯಮಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.
FDI ನಿಯಮ ಮೀರಿದ ವ್ಯವಹಾರ
FEMA ಕಾಯಿದೆಯ 6(3)(b) ವಿಧಾನದ ಪ್ರಕಾರ ಮತ್ತು ಎಫ್‌ಡಿಐ ಪಾಲಿಸಿಯ ನಿರ್ದೇಶದಂತೆ, ಒಂದು ಕಂಪನಿಗೆ ಗರಿಷ್ಠ 25% ರಷ್ಟು ಮೌಲ್ಯದ ವಸ್ತುಗಳನ್ನು ತಮ್ಮ ಸಂಬಂಧಿತ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡುವ ಅನುಮತಿ ಇದೆ. ಆದರೆ ಮಿಂತ್ರಾ ಕಂಪನಿ ಈ ನಿಯಮವನ್ನು ಉಲ್ಲಂಘಿಸಿ, ಶೇ. 100 ರಷ್ಟು ವಸ್ತುಗಳನ್ನು ಸಂಬಂಧಿತ ಕಂಪನಿಗೆ ಮಾರಾಟ ಮಾಡಿರುವುದು ದಾಖಲಾಗಿದ್ದು, ಇದು 2010ರ ಎಫ್‌ಡಿಐ ತಿದ್ದುಪಡಿ ನಿಯಮದ ವಿರುದ್ಧವಾಗಿದೆ ಎಂದು ತಿಳಿಸಿದೆ.
ಇಡಿಯಿಂದ ಅಧಿಕೃತ ದೂರು: ಈ ಎಲ್ಲಾ ನಿಯಮ ಉಲ್ಲಂಘಿಸಿ, ಮಿಂತ್ರಾ ಮತ್ತು ಅದರ ಸಂಬಂಧಿತ ಕಂಪನಿಗಳು FEMA ಕಾಯಿದೆ 6(3)(b) ಹಾಗೂ 2010ರ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳ ಎಫ್‌ಡಿಐ ಪಾಲಿಸಿ ತಿದ್ದುಪಡಿಗಳನ್ನು ಉಲ್ಲಂಘಿಸಿದ್ದನ್ನು ಇಡಿ ದೃಢಪಡಿಸಿದೆ. ಇದರ ಬೆನ್ನಲ್ಲೇ, FEMA ಕಾಯಿದೆಯ ಸೆಕ್ಷನ್ 16(3) ಅಡಿ ಅಧಿಕೃತ ಪ್ರಾಧಿಕಾರಿಗಳ ಮುಂದೆ ದೂರು ದಾಖಲಿಸಲಾಗಿದೆ.
