ಶ್ರೀಶೈಲ ಮಠದ 

ಬೆಳಗಾವಿ(ಮಾ.06): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21 ನೇ ಸಾಲಿಗಾಗಿ ಗುರುವಾರ ಮಂಡಿಸಿದ ಮುಂಗಡ ಪತ್ರದಲ್ಲಿ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ಜಿಲ್ಲೆ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ಬಜೆಟ್ ಜಿಲ್ಲೆಯ ಪಾಲಿಗೆ ಬಕಾಸು ರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. 

ಮಹದಾಯಿ ಯೋಜನೆಯಡಿ ಕಳಸಾ- ಬಂಡೂರಿ ನಾಲಾ ಕಾಮಗಾರಿಗೆ 500 ಕೋಟಿ ಅನುದಾನ ಘೋಷಣೆ, ಸುವರ್ಣಸೌಧಕ್ಕೆ ಹಂತ ಹಂತವಾಗಿ ಪ್ರಮುಖ ಕಚೇರಿಗಳ ಸ್ಥಳಾಂತರ ಘೋಷಣೆ ಮಾಡಿರುವುದು ಬಿಟ್ಟರೆ ಬೇರೇನೂ ಇಲ್ಲ. ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾದ ಮಹದಾಯಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ 500 ಕೋಟಿ ಅನುದಾನ ಕಾಯ್ದಿರಿಸಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಜಿಲ್ಲೆಯ ಜನತೆ ಅದರಲ್ಲಿಯೂ ರೈತರ ಕನಸಿಗೆ ಸಿಎಂ ಯಡಿಯೂರಪ್ಪ ತಣ್ಣೀರು ಎರಚಿದ್ದಾರೆ. ಸಂಕಷ್ಟದಲ್ಲಿರುವ ನೇಕಾರರ ಬದುಕಿಗೆ ಹೊಸ ಭರವಸೆ ಕೊಡುವಂತಹ ಯೋಜನೆಗಳಿಲ್ಲ. ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಹೊಂದಿ ರುವ ಬೆಳಗಾವಿ ಜಿಲ್ಲೆಯನ್ನು ಆಡಳಿತದ ಹಿತದೃಷ್ಟಿಯಂದ ವಿಭಜನೆ ಮಾಡಿ, ಚಿಕ್ಕೋಡಿ ಮತ್ತು ಗೋಕಾಕನ್ನು ಪ್ರತ್ಯೇಕ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಣೆ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳು ಸರ್ಕಾರದ ಮುಂದಿದ್ದವು. ಇವು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲೆಯ ಜನತೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಹೊಸ ಕೊಡುಗೆಗಳನ್ನು ಕೊಟ್ಟಿಲ್ಲ. ಇದು ಸಹಜವಾಗಿಯೇ ನಿರಾಸೆ ಮೂಡುವಂತಾಗಿದೆ. ಏತ ನೀರಾವರಿಗೆ ಇಲ್ಲ ಅನುದಾನ: ಹೊಸ ನೀರಾವರಿ ಯೋಜನೆಗಳ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. 

ಏತ ನೀರಾವರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಚಿಕ್ಕೋಡಿಯ ಮಹಾಲಕ್ಷ್ಮಿ ಏತ ನೀರಾವರಿ, ರಾಯಬಾಗ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕರಗಾಂವ ಏತ ನೀರಾವರಿ, ರಾಮದುರ್ಗದ ಸಾಲಾಪುರ ಏತ ನೀರಾವರಿ, ವೀರಭದ್ರೇಶ್ವರ ಏತ ನೀರಾವರಿ ಹಾಗೂ ಸತ್ತಿಗೇರಿ ಏತ ನೀರಾವರಿ ಯೋಜನೆ ಕುರಿತು ಕ್ರಮ ಕೈಗೊಂಡಿಲ್ಲ. ಜಿಲ್ಲೆಯವರೇ ಆದ ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿರುವುದರಿಂದ ಜಿಲ್ಲೆಯ ಜನತೆ ನೀರಾವರಿ ಯೋಜನೆ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನೀರಾವರಿ ಯೋಜನೆಗಳ ಕುರಿತು ನಿರೀಕ್ಷೆ ಹುಸಿಯಾಗುವಂತೆ ಮಾಡಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ತೀರದ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಬೆಳಗಾವಿಯಲ್ಲಿ ಆಚರಿಸುವ ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ 1 ಕೋಟಿ ಅನುದಾನ ನೀಡುವುದು, ಬೆಳಗಾವಿಗೆ ಎರಡನೇ ಸ್ಥಾನ ಮಾನ ನೀಡುವುದು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸುವುದು, ಬೆಳಗಾವಿ ನಗರದ 58 ವಾರ್ಡಗಳಿಗೆ ನಿರಂತರ ನೀರು ಪೂರೈಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಸುವರ್ಣ ಸೌಧಕ್ಕೆ ಹಂತ ಹಂತವಾಗಿ ಸರ್ಕಾರಿ ಕಚೇರಿ ಗಳನ್ನು ಸ್ಥಳಾಂತರಿಸುವುದಾಗಿ ಮತ್ತದೇ ಭರವಸೆ ಕೊಟ್ಟಿದೆ.

ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? 

* ಮಹದಾಯಿ ನೀರಾವರಿ ಯೋಜನೆಯಡಿ ಕಳಸಾ- ಬಂಡೂರಿ ನಾಲಾ ಕಾಮಗಾರಿ ಕೈಗೊಳ್ಳಲು 500 ಕೋಟಿ ಅನುದಾನ ಕೊಟ್ಟ ಸರ್ಕಾರ 
* ಬೆಳಗಾವಿ- ಧಾರವಾಡ ರೈಲು ಯೋಜನೆಗೆ ಜಮೀನು ನೀಡಲು ಒಪ್ಪಿಗೆ ನೀಡಲಾಗಿದ್ದು, ಈ ಯೋಜನೆಗೆ ಶೇ.50 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ 
* ಸುವರ್ಣವಿಧಾನಸೌಧಕ್ಕೆ ಹಂತ ಹಂತವಾಗಿ ಪ್ರಮುಖ ಸರ್ಕಾರಿ ಕಚೇರಿಗಳ ಸ್ಥಳಾಂತರ 
* ಕೈಗಾರಿಕಾ ಸ್ನೇಹಿ ಕೋರ್ಸ್‌ಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ನೀಡಲು ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯಕ್ಕೆ 5 ಕೋಟಿ ಅನುದಾನ 
* ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ತರಬೇತಿ ಕೇಂದ್ರ 
* ಬೆಳಗಾವಿ ವಿಭಾಗದ ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಕರಿಗೆ ವಾಹನ ಚಾಲನೆ ತರಬೇತಿ 
* ಕೊಳಚೆ ಪ್ರದೇಶ ಅಭಿವೃದ್ಧಿಗಾಗಿ ಬೆಳಗಾವಿ ಮಹಾನಗರ ಸೇರಿದಂತೆ 10 ನಗರಗಳಿಗೆ ಒಟ್ಟು 200 ಕೋಟಿ ಅನುದಾನ