ಬೆಂಗಳೂರು, [ಜೂ.17]: ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರತಿ ವರ್ಷ ಹಲವು ಕ್ರಮ ಕೈಗೊಳ್ಳುತ್ತಿದೆ. ಪ್ರಮುಖವಾಗಿ ಆಸ್ತಿ ಮಾಲೀಕರಲ್ಲಿ ತೆರಿಗೆ ಪಾವತಿ ಮತ್ತು ಪಾವತಿಯಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 

ಅದಕ್ಕಿಂತ ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ತೆರಿಗೆ ಮೊತ್ತದಲ್ಲಿ ಶೇ. 5 ವಿನಾಯಿತಿ ನೀಡಲಾಗಿತ್ತು. ಅದರಂತೆ 2019-20ನೇ ಸಾಲಿನ ಆರ್ಥಿಕ ವರ್ಷದ ಮೊದಲ 2 ತಿಂಗಳಲ್ಲಿ ಬಿಬಿಎಂಪಿಗೆ ಶೇ.45ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. 

ಜೂನ್ 12ರ ತನಕ ಬಿಬಿಎಂಪಿ ಬೊಕ್ಕಸಕ್ಕೆ ಬರೋಬ್ಬರಿ 1581.7 ಕೋಟಿ ರೂಪಾಯಿ ಆಸ್ತಿ ತೆರಿಗೆ ಹರಿದುಬಂದಿದೆ. ಇದು ಹಿಂದಿನ ವರ್ಷಗಳಿಗಿಂತ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿರುವುದು ವಿಶೇಷ.

 2016-17 ಸಾಲಿನ ಆರ್ಥಿಕ ವರ್ಷದಲ್ಲಿ ಕೇವಲ 784 ಕೋಟಿ ರು. ಆಸ್ತಿ ತೆರಿಗೆ ಹಣ ಸಂಗ್ರಹವಾಗಿದ್ದರೆ, 2017-18ರಲ್ಲಿ 967 ಕೋಟಿ ರು. ಹಾಗೂ 2018-19ರಲ್ಲಿ 1,167 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಆದರೆ, 2019-20ನೇ ಸಾಲಿನ ಆರ್ಥಿಕ ವರ್ಷ ಪ್ರಾರಂಭವಾಗಿ ಕೇವಲ 2 ತಿಂಗಳುಗಳು ಕಳೆದಿವೆ. ಆಗಲೇ ಶೇ. 45ರಷ್ಟು ಅಂದರೆ 1581.7 ಕೋಟಿ ರು. ಸಂದಾಯವಾಗಿದೆ.

ಬಿಬಿಎಂಪಿ ತನ್ನ ಮಿತಿಯಲ್ಲಿ ಸುಮಾರು 18.9 ಲಕ್ಷ ಆಸ್ತಿಗಳನ್ನು ಗುರುತಿಸಿದೆ. ಇನ್ನು  3 ಲಕ್ಷ ಖಾಲಿ ಭೂಮಿಗಳು ಮತ್ತು ಈ ಪ್ರದೇಶಗಳ ಮಾಲೀಕರು ಯಾವುದೇ ತೆರಿಗೆಗಳನ್ನು ಪಾವತಿಸುತ್ತಿಲ್ಲ. 

ಸುಮಾರು 18.9 ಲಕ್ಷ ಆಸ್ತಿ ಮಾಲೀಕರ ಪೈಕಿ 9.5 ಲಕ್ಷ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಇನ್ನುಳಿದ ಆಸ್ತಿ ಮಾಲೀಕರನ್ನು ತೆರಿಗೆ ನಿವ್ವಳಕ್ಕೆ ಸೇರಿಸುವುದು ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದೆ.

 2018-19ರಲ್ಲಿ ಸುಮಾರು 12.4 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಲಿ ಇರುವ ಸೈಟ್ ಮಾಲೀಕರನ್ನು ಪತ್ತೆಹಚ್ಚಲು ನಾಗರಿಕ ಸಂಸ್ಥೆಗೆ ಸಾಧ್ಯವಾಗದಿದ್ದರೂ, 4 ಲಕ್ಷ ಹೆಚ್ಚು ಆಸ್ತಿ ಮಾಲೀಕರನ್ನು ತೆರಿಗೆ ಪಾವತಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕು. ಇದನ್ನು ಮಾಡಿದರೆ ತೆರಿಗೆದಾರರ ಶ್ರೇಣಿ 16 ಲಕ್ಷದವರೆಗೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಮಾಧ್ಯಮವೊಂದರ ವರದಿಗಳ ಪ್ರಕಾರ, ಆಸ್ತಿ ತೆರಿಗೆ ಸಂಗ್ರಹ ಪಟ್ಟಿಯಲ್ಲಿ ಮಹಾದೇವಪುರ ಮೊದಲ ಸ್ಥಾನದಲ್ಲಿದ್ದು, ನಂತರ ಬಿಬಿಎಂಪಿಯ ಪೂರ್ವ ವಲಯ ಏಪ್ರಿಲ್ ವರೆಗೆ  383.4 ಕೋಟಿ ರೂ. ಸಂಗ್ರಹವಾಗಿದೆ. 

ಈ ಮೂಲಕ ಬಿಬಿಎಂಪಿಯ ಪೂರ್ವ ವಲಯ ತೆರೆಗೆ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ದಸರಾಹಳ್ಳಿ ವಲಯವು 45 ಕೋಟಿ ರೂ. ಮೂಲಕ 3ನೇ ಸ್ಥಾನದಲ್ಲಿದೆ.

ಬಿಬಿಎಂಪಿ ಬಜೆಟ್ ವೇಳೆ 2019-20 ಸಾಲಿನ ಅವಧಿಯಲ್ಲಿ 4,100 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಣೆ ಗುರಿ ಹೊಂದಿರುವುದಾಗಿ ತಿಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ತನ್ನ ಬಜೆಟ್ ಅನ್ನು ಪರಿಷ್ಕರಿಸಿದ ನಂತರ ಅದನ್ನು 3,500 ಕೋಟಿ ರು.ಗೆ ಇಳಿಸಿದೆ ಎಂದು ತಿಳಿದುಬಂದಿದೆ.